Advertisement

ನೆರವಿನ ವಾಗ್ಧಾನ ಮಾಡಿಲ್ಲ: 700 ಕೋಟಿ ವಿವಾದಕ್ಕೆ ಹೊಸ ಟ್ವಿಸ್ಟ್‌

06:00 AM Aug 25, 2018 | Team Udayavani |

ಹೊಸದಿಲ್ಲಿ /ತಿರುವನಂತಪುರ: ಕೇರಳಕ್ಕೆ 700 ಕೋಟಿ ರೂ. ನೆರವು ನೀಡುವ ಬಗ್ಗೆ ಘೋಷಣೆಯನ್ನೇ ಮಾಡಿಲ್ಲ. ಹೀಗೆಂದು ಹೊಸ ದಿಲ್ಲಿಯಲ್ಲಿರುವ ಆ ದೇಶದ ರಾಯಭಾರಿ ಅಹ್ಮದ್‌ ಅಲ್ಬಾನ್ನಾ ಹೇಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನೆರವು ಸ್ವೀಕರಿಸಲು ನಿರಾಕರಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತು ವಿತ್ತ ಸಚಿವ ಥಾಮಸ್‌ ಐಸಾಕ್‌ ಸಂದರ್ಶನಗಳಲ್ಲಿ ಆರೋಪ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. 

Advertisement

“ಪ್ರವಾಹದ ಹಾನಿಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಇಂಥದ್ದೇ ಮೊತ್ತದ ನೆರವಿನ ಬಗ್ಗೆ ಯಾವುದೇ ರೀತಿ ನಿರ್ಧಾರವಾಗಿಲ್ಲ. 700 ಕೋಟಿ ರೂ. ನೆರವು ನೀಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಮತ್ತು ಆ ಬಗ್ಗೆ ಘೋಷಣೆಯನ್ನೂ ಮಾಡಿಲ್ಲ’ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಅಹ್ಮದ್‌ ತಿಳಿಸಿದ್ದಾರೆ. ಆ.21ರಂದು ಯುಎಇ ದೊರೆ ಶೇಕ್‌ ಮೊಹಮ್ಮದ್‌ ಬಿನ್‌ ಅಲ್‌ ನಹೀಂ ಸಹಾಯ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪಿಣರಾಯಿ ವಿಜಯನ್‌ ಪ್ರಕಟಿಸಿದ್ದರು. 

“ಕೇರಳದ ಸಮಸ್ಯೆ ಬಗ್ಗೆ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಮಂತ್ರಿ ಶೇಕ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಖೂ¤ಮ್‌ ರಾಷ್ಟ್ರೀಯ ಸಮಿತಿ ರಚಿಸಿದ್ದಾರೆ. ಅದರ ಮೂಲಕ ಹಣಕಾಸಿನ ನೆರವು, ಔಷಧಗಳು, ಅಗತ್ಯವಿರುವ ಇತರ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಭಾರತದಲ್ಲಿ ಹಣಕಾಸು ನೆರವು ಪಡೆಯುವ ಬಗ್ಗೆ ಇರುವ ನಿಯಮಗಳ ಕುರಿತು ಯುಎಇಗೆ ಅರಿವು ಇದೆ. ಯುಎಇನಲ್ಲಿರುವ  ರೆಡ್‌ ಕ್ರೆಸೆಂಟ್‌ ಮತ್ತು ಭಾರತ ಸರಕಾರ, ಕೇರಳದಲ್ಲಿರುವ ಸ್ಥಳೀಯ ಸಂಸ್ಥೆಗಳ ಜತೆ ನಿಕಟ ಸಂಪರ್ಕದಲ್ಲಿದೆ’ ಎಂದು ಅಲ್ಬನ್ನಾ ಹೇಳಿದ್ದಾರೆ. 

ಶತಮಾನದ ಸುಳ್ಳು: ಇದಕ್ಕೆ ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್‌ ಪಿಳ್ಳೆ, “ಯುಎಇ ನೆರವೇ ಘೋಷಿಸಿಲ್ಲ ಎಂದಾದ ಮೇಲೆ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಈ 700 ಕೋಟಿಯ ಸುದ್ದಿ ಸಿಕ್ಕಿದ್ದೆಲ್ಲಿ? ಇದೊಂದು ಶತಮಾನದ ಸುಳ್ಳು. ಯುಎಇಯಿಂದ ನೆರವಿನ ಪ್ರಸ್ತಾಪವೇ ಇಲ್ಲದಿರುವಾಗ ಸಿಪಿಎಂ ಮತ್ತು ರಾಜ್ಯದ ಆಳುವ ಸರಕಾರ ಸುಳ್ಳು ಹೇಳುತ್ತಿದೆ. ಮುಖ್ಯಮಂತ್ರಿ ತಮಗೆ ನೆರವಿನ ಮಾಹಿತಿ ನೀಡಿದ ಮೂಲ ಬಹಿರಂಗಡಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

ನೀರಿನ ಮಟ್ಟ 139 ಅಡಿ ಇರಲಿ: ಸುಪ್ರೀಂ
ತಮಿಳುನಾಡಿನ ಮುಲ್ಲಪೆರಿಯಾರ್‌ ಅಣೆಕಟ್ಟಿನಲ್ಲಿ(ಈ ಅಣೆಕಟ್ಟು ಕೇರಳದ ನೆಲದಲ್ಲಿದ್ದರೂ, ಅದು ತಮಿಳುನಾಡು ಸರಕಾರದ ನಿಯಂತ್ರಣದಲ್ಲಿದೆ) ಆ.31ರವರೆಗೆ 139 ಅಡಿ ವರೆಗೆ ಮಾತ್ರ ನೀರು ಇರುವಂತೆ ನೋಡಿಕೊಳ್ಳಿ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, ಅಣೆಕಟ್ಟಿಗೆ ಸಂಬಂಧಿಸಿದ ಉಪ ಸಮಿತಿ ಆ.23ರಂದು ನಡೆದಿದ್ದ ಸಭೆಯಲ್ಲಿ 139 ಅಡಿ ವರೆಗೆ ನೀರು ಇರುವಂತೆ ನೋಡಿಕೊಳ್ಳಬೇಕು ಎಂದು ತಮಿಳುನಾಡಿಗೆ ಸೂಚನೆ ನೀಡಿತ್ತು ಎಂಬ ಕೇಂದ್ರದ ಅರಿಕೆಯನ್ನು ಮಾನ್ಯ ಮಾಡಿತು. ಇದೇ ವೇಳೆ, ಕ್ರೆಸ್ಟ್‌ಗೇಟ್‌ ತೆರೆದ ಪರಿಣಾಮವೇ ಕೇರಳದಲ್ಲಿ ಪ್ರವಾಹ ಉಂಟಾಯಿತು ಎಂಬ ಆರೋಪವನ್ನು ತಮಿಳುನಾಡು ಸರಕಾರ ತಿರಸ್ಕರಿಸಿದೆ. ಮುಲ್ಲಪೆರಿಯಾರ್‌ ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರ ಬೇರೆಡೆ ಸೆಳೆಯುವ ವ್ಯವಸ್ಥಿತ ತಂತ್ರ ಇದಾಗಿದೆ ಎಂದು ಕೇರಳವನ್ನು ಟೀಕಿಸಿದೆ. ಮುಂದಿನ ವಿಚಾರಣೆ ಸೆ.6ರಂದು ನಡೆಯಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಸರಕಾರಗಳ ಅಭಿಪ್ರಾಯವನ್ನು ಕೋರ್ಟ್‌ ಕೇಳಿದೆ.

Advertisement

700 ಕೋಟಿ ನೆರವು ಸತ್ಯ
ಯುಎಇ ಕೇರಳಕ್ಕೆ 700 ಕೋಟಿ ರೂ.ನೆರವು ನೀಡುತ್ತದೆ ಎಂದು ಹೇಳಿದ್ದು ಸತ್ಯ. ಈ ಬಗ್ಗೆ ಉದ್ಯಮಿ ಎಂ.ಎ.ಯೂಸುಫ್ ಅಲಿ ನನ್ನ ಬಳಿ ಪ್ರಸ್ತಾಪಿಸಿದ್ದರು ಎಂದು ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಜತೆಗೆ  ಪ್ರಧಾನಿ ಮೋದಿಗೆ ಯುಇಎ ದೊರೆ ಫೋನ್‌ ಮಾಡಿದ್ದಾಗ ಈ ಅಂಶ ಪ್ರಸ್ತಾಪಿಸಿದ್ದರು. ಜತೆಗೆ ಪಿಎಂ ಮಾಡಿದ್ದ ಟ್ವೀಟ್‌ನಲ್ಲೂ ಈ ಅಂಶ ಇದೆ ಎಂದಿದ್ದಾರೆ. ಇದೇ ವೇಳೆ ಪರಿಹಾರ ಸಂತ್ರಸ್ತರ ಶಿಬಿರದಿಂದ ಮನೆಗೆ ತೆರಳುವವರಿಗೆ ಮತ್ತು ಈಗಾಗಲೇ ತೆರಳಿದವರಿಗೆ 10 ಸಾವಿರ ರೂ. ನೆರವು ನೀಡುವುದಾಗಿ ವಿಜಯನ್‌ ಘೋಷಿಸಿದ್ದಾರೆ.

ಉ.ಪ್ರದೇಶದಲ್ಲಿ ಪ್ರವಾಹ
ಉತ್ತರ ಪ್ರದೇಶದ ಲಖೀಂಪುರ್‌ಖೇರಿ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆಯಾಗಿ, ಪ್ರವಾಹ ಉಂಟಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಇದೇ ವೇಳೆ ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ತೈಲಟ್ಯಾಂಕರ್‌ವೊಂದು ಕೊಚ್ಚಿಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಅದರಲ್ಲಿದ್ದ ಮೂವರು ನೀರುಪಾಲಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next