ತಿರುವನಂತಪುರಂ: ಸುಮಾರು ನೂರು ವರ್ಷಗಳಷ್ಟು ಹಿಂದೆ, ಕೇರಳ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ವೇಳೆ ಮಹಾತ್ಮ ಗಾಂಧಿ 6,000 ರೂ. ದೇಣಿಗೆ ಸಂಗ್ರಹಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ತಮ್ಮ ಯಂಗ್ ಇಂಡಿಯಾ, ನವಜೀವನ್ ಪತ್ರಿಕೆಗಳಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ಪ್ರವಾಹ ಪೀಡಿತ ಮಲಬಾರ್ (ಕೇರಳ)ಗೆ ಧನ ಸಹಾಯ ಮಾಡುವಂತೆ ದೇಶದ ಜನರಲ್ಲಿ ಗಾಂಧೀಜಿ ಮನವಿ ಮಾಡಿದ್ದರು.
ಗಾಂಧೀಜಿ ಅವರ ಮನವಿಗೆ ಓಗೊಟ್ಟು ಮಹಿಳೆಯರು, ಮಕ್ಕಳ ಸಹಿತ ಸಮಾಜದ ವಿವಿಧ ವರ್ಗಗಳ ಜನರು ತಮ್ಮ ಚಿನ್ನಾಭರಣವೂ ಸೇರಿದಂತೆ ಹಣವನ್ನು ದೇಣಿಗೆ ನೀಡಿದ್ದರು. ಅನೇಕ ಜನರು ನೆರೆ ಸಂತ್ರಸ್ತರಿಗೆ ಹಣ ಹೊಂದಿಸುವ ಸಲುವಾಗಿ ದಿನದ ಊಟ ಬಿಟ್ಟಿದ್ದರು ಅಥವಾ ಹಾಲು ಕುಡಿಯುವುದನ್ನು ತೊರೆದಿದ್ದರು ಎಂದು ಅವರ ಪತ್ರಿಕೆಗಳ ಲೇಖನಗಳಲ್ಲಿ ಉಲ್ಲೇಖೀತವಾಗಿದೆ.
ನವಜೀವನ್‌ನಲ್ಲಿನ ಲೇಖನವೊಂದರಲ್ಲಿ ಗಾಂಧೀಜಿ, ಪರಿಹಾರ ನಿಧಿಗೆ ಕೊಡುಗೆ ನೀಡಲು 3 ಪೈಸೆ ಕದ್ದಿದ್ದ ಬಾಲಕಿಯೊಬ್ಬಳ ಬಗ್ಗೆ ಬರೆದಿದ್ದರು. ಮಲಬಾರ್‌ನಲ್ಲಿನ ಪರಿಹಾರ ಕಾರ್ಯ ಎಂಬ ಶೀರ್ಷಿಕೆಯ ಲೇಖನವೊಂದರಲ್ಲಿ, ಮಲಬಾರ್‌ನ ಸಂಕಷ್ಟ ಊಹಿಸಲಸಾಧ್ಯ ಎಂದು ಬರೆದಿದ್ದರು. 1924ರ ಜುಲೈ ತಿಂಗಳಲ್ಲಿ ಮೂರು ವಾರಗಳ ಕಾಲ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಪ್ರವಾಹ ಉಂಟಾಗಿತ್ತು.
ಸುಪ್ರೀಂಕೋರ್ಟ್ ಮೊರೆ ಹೋದ ಸಂಸದ
ಕೇರಳಕ್ಕೆ ಯುಎಇ ನೀಡಲು ಉದ್ದೇಶಿಸಿತ್ತು ಎನ್ನಲಾಗಿರುವ 700 ಕೋಟಿ ರೂ. ನೆರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ ಎಂದು ಆರೋಪ ಮಾಡಿ ರುವ ಕೇರಳ ರಾಜ್ಯಸಭಾ ಸದಸ್ಯ ಬಿನೊಯ್ ವಿಶ್ವಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಕೇರಳಕ್ಕೆ ಕೇಂದ್ರವು ಅಗತ್ಯವಿರುವಷ್ಟು ಹಣಕಾಸಿನ ನೆರವು ನೀಡಿಲ್ಲ ಮತ್ತು ಯುಎಇ ಮತ್ತು ಇತರ ರಾಷ್ಟ್ರಗಳು ನೀಡಲು ಮುಂದಾಗಿರುವ ನೆರವು ಸ್ವೀಕರಿಸುತ್ತಲೂ ಇಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಸಂವಿಧಾನಾತ್ಮಕವಾಗಿರುವ ವಿಶೇಷಾಧಿಕಾರ ಬಳಸಿ ವಿದೇಶಿ ನೆರವು ಪಡೆಯುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಆಘಾತ: ಪ್ರವಾಸೋದ್ಯಮವೇ ಆರ್ಥಿಕತೆಯ ಜೀವಾಳವಾಗಿಸಿಕೊಂಡ ಕೇರಳದಲ್ಲಿ ಈಗ ಪ್ರವಾಹದಿಂದಾಗಿ ಪ್ರವಾಸಿಗರ ಸಂಖ್ಯೆ ಶೇ. 50 ರಷ್ಟು ಕುಸಿಯುವ ಸಾಧ್ಯತೆಯಿದೆ. ಅಕ್ಟೋಬರ್ ವೇಳೆಗೆ ಸಂಖ್ಯೆ ಏರಿಕೆ ಆಗದಿದ್ದರೆ ಈ ಅಪಾಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮೊದಲ ತ್ತೈಮಾಸಿಕದಲ್ಲಿ ಶೇ.17ರಷ್ಟು ಪ್ರಗತಿ ಇತ್ತು. 2ನೇ ತ್ತೈಮಾಸಿಕದಲ್ಲಿ ನಿಪಾದಿಂದಾಗಿ ಪ್ರವಾಸೋದ್ಯಮ ಶೇ.14ರಷ್ಟು ಕುಸಿತ ಕಂಡಿತು. ಆಗಸ್ಟ್, ಸೆಪ್ಟಂಬರ್‌ನಲ್ಲಿ ಪೂರ್ತಿ ಕೊಚ್ಚಿ ಹೋಯಿತು ಎಂದಿದ್ದಾರೆ.