Advertisement

“ಕೇರಳದ ಗುಜರಾತ್‌’ತ್ರಿಕೋನ ಸ್ಪರ್ಧೆಗೆ ರೆಡಿ

12:43 AM Apr 01, 2021 | Team Udayavani |

2016ರಲ್ಲಿ ನೀಮೊಮ್‌ ಅಂದಾಕ್ಷಣ ಇಡೀ ಕೇರಳವೇಕೆ, ದೇಶಕ್ಕೆ ದೇಶವೇ ಹಿಂತಿರುಗಿ ನೋಡಿತ್ತು! ಒ. ರಾಜ್‌ಗೋಪಾಲ್‌ ಎಂಬ 83ರ ವ್ಯಕ್ತಿ, ಇಲ್ಲಿ ಕಮಲ ಚಿಹ್ನೆಯಿಂದ ವಿಧಾನಸಭೆಗೆ ಗೆದ್ದು, ಕೇರಳದಲ್ಲಿ ಬಿಜೆಪಿಯ ಚೊಚ್ಚಲ ಖಾತೆ ತೆರೆಸಿದ್ದರು. ಅಲ್ಲಿಂದ ಎದೆಯುಬ್ಬಿಸಿ ನಿಂತ ಬಿಜೆಪಿ, ನೀಮೊಮನ್ನು “ಕೇರಳದ ಗುಜರಾತ್‌’ ಅಂತಲೇ ಬಣ್ಣಿಸುತ್ತಿದೆ.

Advertisement

ಆದರೆ, 2021ರಲ್ಲಿ ಇಲ್ಲಿನ ಚಿತ್ರಣ ಬೇರೆ ರೀತಿ ಕಾಣುತ್ತಿದೆ. ರಾಜ್‌ಗೋಪಾಲ್‌ ಬದಲಿಗೆ ಬಿಜೆಪಿ ಇಲ್ಲಿ ಮಿಝೋರಾಂನ ಮಾಜಿ ರಾಜ್ಯಪಾಲ, ಪತ್ರಿಕೋದ್ಯಮ ಹಿನ್ನೆಲೆಯ ಕುಮ್ಮನಂ ರಾಜಶೇಖರನ್‌ರನ್ನು ಕಣಕ್ಕಿಳಿಸಿದೆ. ಒಟ್ಟು ಮತದಾರರ ಪೈಕಿ ಶೇ.30 ಮಂದಿಗೆ ಸದಸ್ಯತ್ವ ನೀಡಿರುವ ಬಿಜೆಪಿಗೆ ಇಲ್ಲಿ ಸಂಘಟನೆ ಬಲವಿದೆ. 2019ರ ಸಂಸತ್‌ ಚುನಾವಣೆಯಲ್ಲಿ ಶಶಿ ತರೂರ್‌ ವಿರುದ್ಧ ಸ್ಪರ್ಧಿಸಿ ರಾಜಶೇಖರನ್‌ ಸೋತಿದ್ದರೂ, ನೀಮೊಮ್‌ ಕ್ಷೇತ್ರ ಮಾತ್ರ ಬಿಜೆಪಿ ಪರ ವಾಲಿತ್ತು.

ನೀಮೊಮ್‌ನಲ್ಲಿ ಮೇಲ್ವರ್ಗದ ಹಿಂದೂಗಳ ಅತ್ಯಧಿಕ ಮತಗಳಿರುವ ಕಾರಣದಿಂದಲೇ ಬಿಜೆಪಿ ಕಳೆದಬಾರಿ ಗೆದ್ದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ, ಈ ಸಲ ಬಿಜೆಪಿಯಂತೆ ಕಾಂಗ್ರೆಸ್‌ ಮತ್ತು ಸಿಪಿಎಂಗಳೂ ಮೇಲ್ವರ್ಗದ ಅಭ್ಯರ್ಥಿಯನ್ನೇ ನಿಲ್ಲಿಸಿವೆ.

“ಕೇರಳದಲ್ಲಿ ನೀಮೊಮ್‌, ಬಿಜೆಪಿಗೆ ಮೊದಲ ಮತ್ತು ಕೊನೇ ಕ್ಷೇತ್ರ’ ಎಂಬುದು ಇಲ್ಲಿ ಕಾಂಗ್ರೆಸ್‌ನ ಸಂಕಲ್ಪ. 4 ಬಾರಿ ಕೇರಳ ಸಿಎಂ ಆಗಿದ್ದ ಕೆ. ಕರುಣಾಕರನ್‌ ಅವರ ಪುತ್ರ, ಕೆ. ಮುರಳೀಧರನ್‌ಗೆ ಕೈ ಟಿಕೆಟ್‌ ನೀಡಿದೆ. ಅನುಭವಿ ರಾಜಕಾರಣಿಯೂ ಆಗಿರುವ ಮುರಳೀಧರನ್‌ ಬೆನ್ನಿಗೆ ಮಾಜಿ ರಕ್ಷಣ ಸಚಿವ ಎ.ಕೆ. ಆ್ಯಂಟನಿ ಅವರ ಪ್ರಚಾರದ ಬೆಂಬಲವಿದೆ.

ಕಳೆದ ಬಾರಿ ಬಿಜೆಪಿ ವಿರುದ್ಧ ಸೋತಿದ್ದ ವಿ. ಶಿವನಕುಟ್ಟಿ ಸಿಪಿಎಂ ಅಭ್ಯರ್ಥಿ. ನೀಮೊಮ್‌ ತನ್ನ “ಕೆಂಪುಕೋಟೆ’ ಅಂತಲೇ ಕರೆಯುತ್ತಿರುವ ಸಿಪಿಎಂ, ಸೋತಾಗಿನಿಂದ ಇಲ್ಲಿ ಸರಿಯಾಗಿ ನಿದ್ರಿಸಿಲ್ಲ. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ತನ್ನ ಮತಗಳನ್ನು ಸೆಳೆಯಬಹುದು ಎಂಬ ಆತಂಕ ಸಿಪಿಎಂಗೆ. ಒಟ್ಟಿನಲ್ಲಿ ತ್ರಿಕೋನ ಸ್ಪರ್ಧೆಯಿಂದಾಗಿ ನೀಮೊಮ್‌ ಕುತೂಹಲದ ಕಣವಾಗಿದೆ.

Advertisement

………………………………………………………………………………………………………………………………………………………

ನಾನೂ ನಿಮ್ಮಂತೆ ಮನೆಕೆಲಸ ಮಾಡಿರುವೆ: ಪ್ರಿಯಾಂಕಾ

ಚಾಲಾಕುಡಿ: ಪ್ರಿಯಾಂಕಾ ಗಾಂಧಿ ಯಾವತ್ತೂ ತಮ್ಮ ಮನೆಯಲ್ಲಿ ಕಸ ಗುಡಿಸಿರಲಿಕ್ಕಿಲ್ಲ ಎಂದು ನೀವು ಭಾವಿಸಿರಬಹುದು. ಆದರೆ, ವಸ್ತು ಸ್ಥಿತಿ ಹಾಗಿಲ್ಲ. “ನಾನೂ ಮನೆಯನ್ನು ಸ್ವತ್ಛಗೊಳಿಸಿದ್ದೇನೆ, ಅಡುಗೆ ಮಾಡಿದ್ದೇನೆ, ಮಕ್ಕಳನ್ನು ನೋಡಿಕೊಂಡಿದ್ದೇನೆ. ನಿಜ ಹೇಳಬೇಕೆಂ ದರೆ, 25ರಿಂದ 47ನೇ ವಯಸ್ಸಿನವರೆಗೂ ನಾನು ಗೃಹಿಣಿಯಾಗಿಯೇ ಇದ್ದೆ…’

– ಇದು ಕೇರಳದ ಚಾಲಕುಡಿಯಲ್ಲಿ ಚುನಾವಣ ಪ್ರಚಾರದ ವೇಳೆ ಗೃಹಿಣಿಯರೊಂದಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಆಡಿರುವ ಮಾತು. ಗೃಹಿಣಿಯರ ಮತಗಳನ್ನು ಯುಡಿಎಫ್ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ತಮ್ಮದೇ ಅನುಭವಗಳನ್ನು ಬಿಚ್ಚಿಟ್ಟ ಪ್ರಿಯಾಂಕಾ, “ಒಬ್ಬ ಗೃಹಿಣಿಯಾಗಿ ನಾನು ಬಹಳಷ್ಟು ಕಲಿತಿದ್ದೇನೆ. ನೀವು ಮಾಡುವ ಕೆಲಸಕ್ಕಿಂತ ಯಾವುದೂ ದೊಡ್ಡದಲ್ಲ, ನೀವಿಲ್ಲದಿದ್ದರೆ ಮಕ್ಕಳು ಸಭ್ಯ ನಾಗರಿಕರಾಗುವುದಿಲ್ಲ, ನೀವಿಲ್ಲದಿದ್ದರೆ ಕುಟುಂಬದಲ್ಲಿ ಸಂತಸವಿರುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next