ಕಾಸರಗೋಡು, ಮಾ.22: ಕುದುರೆ ಏರಿ ಬಂದು ಕೋಟೆಗಳನ್ನು ಕಾಯ್ದ ಜಿಲ್ಲೆ ಕಾಸರಗೋಡು. ಕಾಸರಗೋಡು ಜಿಲ್ಲೆ ಎಲ್‌ಡಿಎಫ್, ಯುಡಿಎಫ್‌ನ ಭದ್ರ ಕೋಟೆಯಾಗಿದೆ. ಕೇರಳದ ಉತ್ತರದಲ್ಲಿರುವ ಮಂಜೇಶ್ವರ, ಜಿಲ್ಲೆಯ ಮಧ್ಯ ಭಾಗದಲ್ಲಿರುವ ಉದುಮ ವಿಧಾನಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ದಿನದಿಂದ ದಿನಕ್ಕೆ ಪ್ರಚಾರದ ಕಾವು ಏರುತ್ತಿದೆ. ಈ ಬಾರಿ ಈ ಕೋಟೆಗೆ ಯಾರು ಲಗ್ಗೆ ಇಡಲಿದ್ದಾರೆ ಎಂಬುದನ್ನು ತಿಳಿಯಲು ಚುನಾವಣೆಯ ಫಲಿತಾಂಶದವರೆಗೆ ಕಾಯಬೇಕು.
ಕುಂಬಳೆ ಆರಿಕ್ಕಾಡಿ ಕೋಟೆಯಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರವನ್ನು ಕೈವಶಮಾಡಿಕೊಳ್ಳಲು ಎನ್‌ಡಿಎ ಅಭ್ಯರ್ಥಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದು ಹೆಲಿಕಾಪ್ಟರ್‌ನಲ್ಲಿ. 2016 ರ ವಿಧಾನಸಭಾ ಚುನಾವಣೆಯಲ್ಲಿ 89 ಮತಗಳ ಅಂತರದಿಂದ ಯುಡಿಎಫ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಝಾಕ್ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರನ್ನು ಪರಾಭವಗೊಳಿಸಿದ್ದರು. ಸುರೇಂದ್ರ ಹೆಸರಿನ ಇನ್ನೋರ್ವ ಅಭ್ಯರ್ಥಿ ಪಡೆದ ಮತಗಳು ಕೆ.ಸುರೇಂದ್ರನ್ ಗೆಲುವಿನ ಓಟಕ್ಕೆ ತಡೆಯೊಡ್ಡಿತ್ತು.
ಈ ಬಾರಿ ವಿಜಯ ಖಚಿತ ಎಂಬುದಾಗಿ ಕೆ.ಸುರೇಂದ್ರನ್ ಹೇಳುತ್ತಿದ್ದರೂ, ಪಿ.ಬಿ.ಅಬ್ದುಲ್ ರಝಾಕ್ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಎಂ.ಸಿ.ಖಮರುದ್ದೀನ್ 7,923 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಅವರ ಆತ್ಮವಿಶ್ವಾಸ ವರ್ಧಿಸಿದೆ.
1991 ರಿಂದ ನಿರಂತರವಾಗಿ ಎಡರಂಗವನ್ನು ಗೆಲ್ಲಿಸಿರುವ ಬೇಕಲ, ಚಂದ್ರಗಿರಿ ಕೋಟೆಗಳಿರುವ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಐಕ್ಯರಂಗ ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣನ್ ಪೆರಿಯ ಅವರನ್ನು ಕಣಕ್ಕಿಳಿಸಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ನ ಕೆ.ಸುಧಾಕರನ್ ಅವರ ಮುನ್ನಡೆಯನ್ನು ಲೋಕಸಭಾ ಚುನಾವಣೆಯಲ್ಲಿ ಉದುಮ ಕ್ಷೇತ್ರದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್ ಒಂಬತ್ತು ಸಾವಿರದಷ್ಟು ಮತಗಳನ್ನು ಹೆಚ್ಚು ಪಡದಿದ್ದರು. ಈ ಮತ ಹೆಚ್ಚಳ ಯುಡಿಎಫ್ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಈ ಕ್ಷೇತ್ರದ ಪೆರಿಯ ಕಲೊಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಹತ್ಯೆ ಹಾಗೂ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿರುವುದು ಯುಡಿಎಫ್‌ಗೆ ಅನುಕೂಲಕರವಾಗಿದೆ ಎಂದು ಯುಡಿಎಫ್ ಭರವಸೆ ಹೊಂದಿದೆ. ಆದರೆ 2006 ರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಚೆರ್ಕಳಂ ಅಬ್ದುಲ್ಲ ಅವರನ್ನು ಪರಾಭವಗೊಳಿಸಿದ ನ್ಯಾಯವಾದಿ ಸಿ.ಎಚ್.ಕುಂಞಂಬು ಅವರನ್ನು ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಣಕ್ಕಿಳಿಸಿದೆ.