ಕಾಸರಗೋಡು, ಮಾ.20: ಮೂವತ್ತಮೂರು ಶೇಕಡಾ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಹಲವು ಪಕ್ಷಗಳು ಕೇಳುತ್ತಲೇ ಬಂದಿದ್ದರೂ ಆ ಪಕ್ಷಗಳು ಎಷ್ಟು ಮೀಸಲಾತಿ ನೀಡಿದೆ ಎಂಬುದು ಚರ್ಚಾ ವಿಷಯವಾಗಿರುವಂತೆ ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಬಿಜೆಪಿಯ ಶೋಭಾ ಸುರೇಂದ್ರನ್, ಕಾಂಗ್ರೆಸ್‌ನ ಬಿಂದು ಕೃಷ್ಣನ್, ಆರ್.ಎಂ.ಪಿ. ಯಿಂದ ಕೆ.ಕೆ.ರಮಾ, ಮುಸ್ಲಿಂ ಲೀಗ್‌ನಿಂದ ನೂರ್‌ಬಿನಾ ರಶೀದ್, ಸ್ವತಂತ್ರ ಅಭ್ಯರ್ಥಿಯಾಗಿ ಲತಿಕಾ ಸುಭಾಷ್, ಕೇರಳ ಕಾಂಗ್ರೆಸ್‌ನಿಂದ ಡಾ|ಸಿಂಧುಮೋಳ್ ಜೇಕಬ್ ಮೊದಲಾದ ಪ್ರಮುಖರು ಕಣದಲ್ಲಿದ್ದಾರೆ.
ಇದನ್ನೂ ಓದಿ:ಬೆಟ್ಟದಿಂದ ಬೆಟ್ಟಕ್ಕೆ ನೆಗೆಯುವ ಪರ್ವತ ಮೇಕೆಗಳ ಬಗ್ಗೆ ನಿಮಗೆಷ್ಟು ಗೊತ್ತು..!
ಕೇಂದ್ರ ನೇತೃತ್ವದ ಮಧ್ಯ ಪ್ರವೇಶದಿಂದ ಕಳಕ್ಕೂಟಂನಲ್ಲಿ ಸ್ಪರ್ಧಿಸುವ ಶೋಭಾ ಸುರೇಂದ್ರನ್ ಬಿಜೆಪಿಯ ಬೆಂಕಿ ಚೆಂಡು ಎಂದೇ ಖ್ಯಾತಿಯನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಸಚಿವ ಕಡಗಂಪಳ್ಳಿ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಐಕ್ಯರಂಗದಿಂದ ಡಾ|ಎಸ್.ಎಸ್.ಲಾಲ್ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯ ನೂತನ ರಾಜ್ಯ ಸಮಿತಿಯ ಘೋಷಣೆಯೊಂದಿಗೆ ಪಕ್ಷದಿಂದ ದೂರ ಉಳಿದಿದ್ದ ಶೋಭಾ ಸುರೇಂದ್ರನ್ ಇತ್ತೀಚೆಗೆ ನಡೆದ ಪಕ್ಷದ ಅಖೀಲ ಭಾರತ ಅಧ್ಯಕ್ಷ ಜೆ.ಪಿ.ನಡ್ಡಾ ಕಾರ್ಯಕ್ರಮದಲ್ಲಿ ಪ್ರತ್ಯಕ್ಷಗೊಂಡು ಬಳಿಕ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು.
ಐಕ್ಯರಂಗದ ಕಾಂಗ್ರೆಸ್‌ನ ಪ್ರಮುಖ ಮಹಿಳಾ ನಾಯಕಿಯಾಗಿರುವ ಬಿಂದು ಕೃಷ್ಣ ಕೊಲ್ಲಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಒಂದು ಹಂತದಲ್ಲಿ ಇವರಿಗೆ ಸೀಟು ಲಭಿಸದು ಎಂಬ ಸ್ಥಿತಿಯಿತ್ತು. ಈ ಹಿನ್ನೆಲೆಯಲ್ಲಿ 14 ಮಂದಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳು ರಾಜೀನಾಮೆ ನೀಡಿದ್ದರು. ಇದು ಕಾಂಗ್ರೆಸ್‌ನ ಕಣ್ಣು ತೆರೆಸಿರಬೇಕು. ಕಾರ್ಯಕರ್ತರ ಹಾಗು ನೇತಾರರ ಬೆಂಬಲ ಬಿಂದು ಕೃಷ್ಣ ಅವರಿಗಿದೆ ಎಂದು ಮನವರಿಕೆಯಾದಾಗ ಕೊಲ್ಲಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸೀಟು ನೀಡಲಾಯಿತು. ಕೊಲ್ಲಂನಲ್ಲಿ ಹಾಲಿ ಶಾಸಕ, ಸಿನಿಮಾ ನಟ ಮುಕೇಶ್ ಎಡರಂಗದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿಯಿಂದ ಎಂ.ಸುನಿಲ್ ರಂಗದಲ್ಲಿದ್ದಾರೆ. ಇಲ್ಲೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವು ಯಾರಿಗೆ ಒಲಿಯುವುದು ಎಂಬುದನ್ನು ಕಾದು ನೋಡಬೇಕು.
ಆರ್.ಎಂ.ಪಿ. ಅಭ್ಯರ್ಥಿಯಾಗಿ ಕೆ.ಕೆ.ರಮಾ ವಡಗರದಲ್ಲಿ ಐಕ್ಯರಂಗದಿಂದ ಕಣಕ್ಕಿಳಿದಿದ್ದಾರೆ. ಕೊಲೆಗೀಡಾಗಿದ್ದ ಸಿಪಿಎಂ ನೇತಾರ ಟಿ.ಪಿ.ಚಂದ್ರಶೇಖರನ್ ಅವರ ಪತ್ನಿಯಾಗಿರುವ ಕೆ.ಕೆ.ರಮಾ ಪತಿಯ ಪಕ್ಷವಾದ ಆರ್.ಎಂ.ಪಿ.ಯಿಂದ 2016 ರಲ್ಲಿ ಸ್ಪರ್ಧಿಸಿದ್ದರು. ಆದರೆ ಎಡರಂಗದ ಭದ್ರ ಕೋಟೆಯಾದ ವಡಗರದಲ್ಲಿ ಗೆಲ್ಲಲಾಗದಿದ್ದರೂ ಎಡರಂಗದ ಮತದಲ್ಲಿ ಬಿರುಕು ಮೂಡಿಸಲು ಸಾಧ್ಯವಾಗಿತ್ತು. ಈ ಬಾರಿ ಐಕ್ಯರಂಗದ ಬೆಂಬಲ ಲಭಿಸಿರುವುದರಿಂದ ಕೆ.ಕೆ. ರಮಾ ತೀವ್ರ ಪೈಪೋಟಿ ನೀಡಲಿದ್ದಾರೆ. ವಡಗರದಲ್ಲಿ ಈ ಬಾರಿ ಎಡರಂಗ ಅಭ್ಯರ್ಥಿಯಾಗಿ ಮನಯತ್ ಚಂದ್ರ ಕಣದಲ್ಲಿದ್ದಾರೆ. ಬಿಜೆಪಿಯಿಂದ ರಾಜೇಶ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ.
ಮುಸ್ಲಿಂ ಲೀಗ್ 1996 ರ ಬಳಿಕ ಒಬ್ಬ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮುಸ್ಲಿಂ ಲೀಗ್‌ನ ಸಿಟ್ಟಿಂಗ್ ಸೀಟು ಆಗಿರುವ ಕಲ್ಲಿಕೋಟೆ ಸೌತ್‌ನಿಂದ ನ್ಯಾಯವಾದಿ ನೂರ್‌ಬೀನಾ ರಶೀದ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಕೂಡಾ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಕಲ್ಲಿಕೋಟೆ ಕಾರ್ಪರೇಶನ್‌ನ ಕೌನ್ಸಿಲರ್ ಆಗಿರುವ ಸತ್ಯ ಹರಿದಾಸ್ ರಂಗದಲ್ಲಿದ್ದಾರೆ. ಐಎನ್‌ಎಲ್ ಅಭ್ಯರ್ಥಿಯಾಗಿ ಅಹಮ್ಮದ್ ದೇವರ್ ಕೋವಿಲ್ ಸ್ಪರ್ಧಿಸುತ್ತಿದ್ದಾರೆ.
ಐಕ್ಯರಂಗದ ಮಹಿಳಾ ಮುಖಂಡೆಯಾಗಿದ್ದ ಲತಿಕಾ ಸುಭಾಷ್ ಸೀಟು ಲಭಿಸಿಲ್ಲ ಎಂಬ ಕಾರಣದಿಂದ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಏಟ್ಟುಮಾನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿದ್ದ ಲತಿಕಾ ಸುಭಾಷ್ ತನ್ನನ್ನು ಪರಿಗಣಿಸಿಲ್ಲ ಎಂಬ ಕಾರಣದಿಂದ ಕಾಂಗ್ರೆಸ್‌ನ ಕೇಂದ್ರ ಕಚೇರಿಯ ಮುಂಭಾಗ ಕೇಶ ಮುಂಡನ ನಡೆಸಿ ಪ್ರತಿಭಟಿಸಿದ್ದರು. ಇವರ ಪ್ರತಿಭಟನೆ ಸಾಕಷ್ಟು ಗಮನ ಸೆಳೆದಿತ್ತು. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.
ಸಿಪಿಎಂ ಸದಸ್ಯೆಯಾಗಿರುವ ಡಾ|ಸಿಂಧುಮೋಳ್ ಜೇಕಬ್ ಕೇರಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿರವಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಿಪಿಎಂ ಸದಸ್ಯೆಯಾಗಿದ್ದ ಸಿಂಧುಮೋಳ್ ಮೈತ್ರಿ ಪಕ್ಷವಾದ ಕೇರಳ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವುದು ಸಿಪಿಎಂಗೆ ತಲೆನೋವನ್ನುಂಟು ಮಾಡಿದ್ದು, ಪಕ್ಷದಿಂದ ಉಚ್ಛಾಟಿಸಿದೆ. ಇಲ್ಲಿ ಐಕ್ಯರಂಗದಿಂದ ಅನೂಪ್ ಜೇಕಬ್, ಎನ್‌ಡಿಎ ಯಿಂದ ಎಂ.ಅಶಿಷ್ ಕಣದಲ್ಲಿದ್ದಾರೆ.