Advertisement
ಕಾಸರಗೋಡಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಹಿಂದಿನ ಊಮ್ಮನ್ ಚಾಂಡಿ ಸರಕಾರ ಡಾ| ಪ್ರಭಾಕರನ್ ಆಯೋಗವನ್ನು ರಚಿಸಿತ್ತು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರನ್ನು ನಿರ್ಲಕ್ಷಿಸಿದರೆ ಕಾಸರಗೋಡಿನ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಆಯೋಗ ಸ್ಪಷ್ಟಪಡಿಸಿದ್ದು ಭಾಷಾ ಅಲ್ಪಸಂಖ್ಯಾಕರ ಶ್ರೇಯೋಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ಶಿಫಾರಸು ಮಾಡಿತ್ತು. ಆದರೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸ್ಥಾಪನೆಯನ್ನು ಹೊರತುಪಡಿಸಿದರೆ ಭಾಷಾ ಅಲ್ಪಸಂಖ್ಯಾಕರ ಪರವಾದ ಉಳಿದ ಯಾವುದೇ ಶಿಫಾರಸುಗಳೂ ಜಾರಿಯಾಗಲಿಲ್ಲ. ಈಗಿನ ಸರಕಾರದ ಮುಂದೆ ಕೂಡ ಹಲವು ಪ್ರಸ್ತಾವಗಳಿದ್ದು ಅವುಗಳನ್ನು ಅನುಷ್ಠಾನಗೊಳಿಸುವ ಕಾಳಜಿ ಕಾಣಿಸುವುದಿಲ್ಲ. ಜಿಲ್ಲಾ ಮುದ್ರಣಾಲಯ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾಷಾಂತರ ವಿಭಾಗ, ಗೋವಿಂದ ಪೈ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಮಾಯಿಪ್ಪಾಡಿಯಲ್ಲಿ ಕನ್ನಡ ಮಾಧ್ಯಮ ಪೂರ್ವಪ್ರಾಥಮಿಕ ಶಿಕ್ಷಕತರಬೇತಿ ಕೇಂದ್ರ, ಪಾರ್ತಿಸುಬ್ಬ ಯಕ್ಷಗಾನ ಕೇಂದ್ರಕ್ಕೆ ಕಾಯಕಲ್ಪ ಹೀಗೆ ಹಲವಾರು ಪ್ರಸ್ತಾಪಗಳು ನನೆಗುದಿಗೆ ಬಿದ್ದಿವೆ. ಮುಂದಿನ ತಿಂಗಳು ರಾಜ್ಯಸರಕಾರ ಮಂಡಿಸಲಿರುವ ಮುಂಗಡಪತ್ರದಲ್ಲಿ ಭಾಷಾ ಅಲ್ಪಸಂಖ್ಯಾಕರಿಗಾಗಿ ಯಾವುದಾದರೂ ಕಲ್ಯಾಣ ಯೋಜನೆಗಳಿವೆ ಎಂದು ನಿರೀಕ್ಷಿಸುತ್ತಿರುವ ಮುಗ್ಧಜನರು ಎಂದಿನಂತೆ ಆಶಾವಾದಿಗಳಾಗಿದ್ದಾರೆ.
ಸರಕಾರಿ ಯೋಜನೆಗಳನ್ನು ರೂಪಿಸುವಾಗ ಭಾಷಾ ಅಲ್ಪಸಂಖ್ಯಾಕರನ್ನು ನಿರ್ಲಕ್ಷಿಸಲಾಗುತ್ತದೆ ಹಾಗೂ ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದರೂ ಕಡೆಗಣಿಸಲಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಕೇರಳದ ಶಾಲೆಗಳಲ್ಲಿ ಕಲೆ, ವೃತ್ತಿಶಿಕ್ಷಣ, ದೈಹಿಕ ಮತ್ತು ಆರೋಗ್ಯಶಿಕ್ಷಣವನ್ನು ಬೋಧಿಸುವ ಉತ್ತಮ ಯೋಜನೆಯೊಂದನ್ನು ಸರಕಾರ ರೂಪಿಸಿತ್ತು. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ದೈನಂದಿನ ವೇತನದ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಲಾಗಿತ್ತು. ಆದರೆ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಾಗ ಅವರಿಗೆ ಕನ್ನಡಭಾಷೆ ತಿಳಿದಿರಬೇಕು ಎಂಬ ಪ್ರಾಥಮಿಕ ಅಂಶವನ್ನು ಕೂಡ ನಿರ್ಲಕ್ಷಿಸಲಾಯಿತು. ಲೋಕಸೇವಾ ಆಯೋಗದ ಬದಲು ಇಲಾಖೆಯ ಕೈಕೆಳಗೆ ಜಿಲ್ಲಾಮಟ್ಟದಲ್ಲಿ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ, ರಾಜಕೀಯ, ಸ್ವಜನಪಕ್ಷಪಾತ ನಡೆದಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಏನೇ ರಾಜಕೀಯ ಪ್ರಭಾವವಿದ್ದರೂ ಕನ್ನಡಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ಕನಿಷ್ಠಪಕ್ಷ ಎಸ್.ಎಸ್.ಎಲ್.ಸಿ. ತನಕದ ಕನ್ನಡಭಾಷಾ ಜ್ಞಾನವಿರಬೇಕೆಂಬ ಕನಿಷ್ಠ ವಿದ್ಯಾರ್ಹತೆಯನ್ನು ಕಡೆಗಣಿಸಬಾರದಿತ್ತು. ಆದರೆ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡಬಾರದ ಶಿಕ್ಷಕರನ್ನು ನೇಮಿಸಿದ್ದರಿಂದ ಈ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠಮಾಡದೆ ಕಾಟಾಚಾರಕ್ಕೆ ಶಾಲೆಗಳಿಗೆ ಬಂದು ಸಂಬಳ ಪಡೆದುಕೊಂಡು ಹೋಗುತ್ತಿ ದ್ದಾರೆ. ವರ್ಷಾಂತ್ಯದಲ್ಲಿ ನೆಪಮಾತ್ರಕ್ಕೆ ಪರೀಕ್ಷೆ ನಡೆಸಿ ಎಲ್ಲ ವಿದ್ಯಾರ್ಥಿಗಳನ್ನೂ ತೇರ್ಗಡೆಗೊಳಿಸಲಾಗುತ್ತದೆ. ಇದರಿಂದ ಪಾಠ ಓದುವ ಶ್ರಮವಿಲ್ಲದ, ನಪಾಸಾಗುವ ಭಯವಿಲ್ಲದ ವಿದ್ಯಾರ್ಥಿಗಳೂ ಖುಷ್. ಕೆಲಸಮಾಡದೆ ಸಂಬಳ ತೆಗೆದುಕೊಳ್ಳುವ ಅಧ್ಯಾಪಕರೂ ಖುಷ್. ಸರಕಾರದ ಖಜಾನೆ ಲೂಟಿಯಾಗುತ್ತಿದೆಯಲ್ಲದೆ ಇದರಿಂದ ಸಮಾಜಕ್ಕೆ ಏನು ಲಾಭವಾಯಿತು ಎಂಬುದನ್ನು ಸರಕಾರವೇ ಹೇಳಬೇಕು. ಸರಕಾರದ ಒಳ್ಳೆಯ ಯೋಜನೆಗಳು ಹೊಳೆಯಲ್ಲಿ ತೊಳೆದ ಹುಣಸೆ ಹಣ್ಣಿನಂತೆ ಹೇಗೆ ವ್ಯರ್ಥವಾಗಿ ಹೋಗುತ್ತವೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ.
Related Articles
Advertisement
ಹಗಲು ದರೋಡೆದಾಖಲೆ ಪ್ರಕಾರ ಕಲೆ, ವೃತ್ತಿಶಿಕ್ಷಣ, ಆರೋಗ್ಯ-ದೆ„ಹಿಕ ಶಿಕ್ಷಣಗಳನ್ನು ಐದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಕಲಿಸಲಾಗುತ್ತದೆ. ಆದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಲಿಸಲು ಈ ವಿಷಯಗಳಿಗೆ ಕನ್ನಡ ಪಠ್ಯ ಪುಸ್ತಕಗಳೇ ಇನ್ನೂ ತಯಾರಾಗಿಲ್ಲ. ಮೂರು ವರ್ಷಗಳು ಇದೇ ರೀತಿ ಕಳೆದುಹೋಗಿವೆ. ಇನ್ನು ಪಠ್ಯ ಪುಸ್ತಕಗಳು ತಯಾರಾದರೂ ಮಕ್ಕಳ ಕೈ ಸೇರಲು ಎಷ್ಟು ವರ್ಷಗಳು ಬೇಕಾಗಬಹುದೋ ತಿಳಿದಿಲ್ಲ. ಅಷ್ಟರಲ್ಲಿ ಈ ಸರಕಾರ ಕೆಳಗಿಳಿದಿರುತ್ತದೆ. ಮುಂದಿನ ಸರಕಾರ ಈ ಯೋಜನೆಯನ್ನು ರದ್ದುಮಾಡಿ ಇನ್ನೊಂದು ಯೋಜನೆಯನ್ನು ರೂಪಿಸುತ್ತದೆ. ಇದರ ನಡುವೆ ಸರಕಾರದ ಹಣ ಯಾರದೋ ಕೈಸೇರುತ್ತದೆ. ಒಟ್ಟಿನಲ್ಲಿ ಶಿಕ್ಷಣರಂಗಕ್ಕಾಗಲೀ ಕನ್ನಡ ವಿದ್ಯಾರ್ಥಿಗಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಈ ಹಗಲು ದರೋಡೆ ವಿರುದ್ಧ ಪ್ರತಿಭಟಿಸುವವರು ಯಾರೂ ಇಲ್ಲ.