ಸಾಧಿಸುವ ಛಲವಿದ್ದರೆ ಯಾವ ಕಷ್ಟಗಳಿದ್ದರೂ ಅದನ್ನು ಮೀರಿಸಿ ನಿಲ್ಲುವುದು ಅಸಾಧ್ಯವಲ್ಲ. ಇದು ಮಾತಿನಲ್ಲಿ ಹೇಳುವಷ್ಟರ ಮಟ್ಟಿಗೆ ಸುಲಭವಲ್ಲ. ಈ ದಾರಿಯಲ್ಲಿ ಸಾಗಿ ಬಂದವರೆಲ್ಲಾ ಇಂದು ಮಾದರಿ ವ್ಯಕ್ತಿತ್ವವಾಗಿ ನಮ್ಮ ಮುಂದೆ ನಿಂತಿದ್ದಾರೆ.
ಸಾಧಕರ ವ್ಯಕ್ತಿತ್ವದಲ್ಲಿ ಕೋಜಿಕ್ಕೋಡ್ ನ 31 ವರ್ಷದ ನೌಜಿಶಾ ಕೂಡ ಒಬ್ಬರು. ಬಾಲ್ಯದಿಂದಲೇ ಕಲಿಯುವುದರಲ್ಲಿ ಮುಂದಿದ್ದ ನೌಜಿಶಾ ಎಂಸಿಎ ಪದವೀಧರೆ. ಕಲಿಕೆಯ ಬಳಿಕ ಊರಲ್ಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನೌಜಿಶಾ ಅವರಿಗೆ ಮದುವೆ ನಿಶ್ಚಯವಾಗುತ್ತದೆ. ಮದುವೆ ನಿಶ್ಚಯವಾಗುವ ವೇಳೆಯೇ ಗಂಡನ ಮನೆಯವರಲ್ಲಿ ಹಾಗೂ ಭಾವಿ ಪತಿಯ ಬಳಿ ತಾನು ಮದುವೆಯ ಬಳಿಕವೂ ಕೆಲಸಕ್ಕೆ ಹೋಗಬೇಕೆನ್ನುವ ತನ್ನ ಮನದಾಸೆಯನ್ನು ಹೇಳುತ್ತಾರೆ.
ಮದುವೆಯ ವೇಳೆ ಭಾವಿ ಪತಿ ನೌಜಿಶಾಳ ಎಲ್ಲಾ ಇರಾದೆಗಳಿಗೆ ಆಯಿತೆಂದು ಹೇಳಿ ಮದುವೆಯಾಗುತ್ತಾರೆ. ತನ್ನ ಗಂಡ ನನ್ನ ಕನಸಿಗೆ ಬಣ್ಣ ಬಳಿದು, ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಎಲ್ಲಾ ಹೆಣ್ಣು ಮಕ್ಕಳಂತೆ ಅಂದುಕೊಂಡಿದ್ದ ನೌಜಿಶಾಳಿಗೆ ಜೀವನದಲ್ಲಿ ಎಂದು ಕಾಣದ ಕಷ್ಟದ ದಿನಗಳು ಶುರುವಾಗುತ್ತದೆ.
ಕೆಲಸಕ್ಕೆ ಹೋಗಬೇಕೆಂದು ಹೇಳುತ್ತಿದ್ದಾಗ ಗಂಡ ಸಿಟ್ಟು ಮಾಡಿಕೊಂಡು ಹೊಡೆಯುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಗಂಡ ಎಷ್ಟು ಕ್ರೂರಿ ಎನ್ನುವುದು ಅರಿವಾಗುತ್ತದೆ. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ದೈಹಿಕ ದೌರ್ಜನ್ಯ, ಮಾನಸಿಕ ಹಿಂಸೆ ತಾಳಲಾರದೆ ನೌಜಿಶಾ ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಬಾವಿಗೆ ಹಾರಲು ಹೋಗುತ್ತಾರೆ. ಇನ್ನೇನು ಎಲ್ಲಾ ದೌರ್ಜನ್ಯದಿಂದ ಮುಕ್ತಳಾಗಿ ಇಹಲೋಕ ತ್ಯಜಿಸಬೇಕೆನ್ನುವಾಗಲೇ ಕೈ ಕಾಲು ಅಲುಗಾಡಿ, ಬಾವಿ ಹತ್ತಿರದಿಂದ ದೂರ ಸರಿದು ವಾಪಾಸು ಬರುತ್ತಾರೆ.
ಮೂರುವರೆ ವರ್ಷದ ಬಳಿಕ ನೌಜಿಶಾ ತನ್ನ ಮಗನೊಂದಿಗೆ ಗಂಡನ ಮನೆಗೆ ಮತ್ತೆಂದು ಹೋಗಬಾರದೆನ್ನುವ ನಿರ್ಧಾರದೊಂದಿಗೆ ತವರಿಗೆ ಮರಳುತ್ತಾರೆ. ಏನಾದರೂ ಜೀವನದಲ್ಲಿ ಮಾಡಬೇಕೆಂದು ಮತ್ತೆ ನೌಜಿಶಾ ಕಾಲೇಜುವೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಳ್ಳುತ್ತಾರೆ. ಕಾಲೇಜು ಮುಗಿದ ಬಳಿಕ ಕೇರಳ ಸಾರ್ವಜನಿಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕೋಚಿಂಗ್ ತರಗತಿ ಹೋಗುತ್ತಾರೆ. ಕೆಲವು ಸಮಯದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹೆಚ್ಚಿನ ತಯಾರಿ ನಡೆಸಬೇಕೆನ್ನುವ ಉದ್ದೇಶದೊಂದಿಗೆ ಟೀಚಿಂಗ್ ಕೆಲಸ ಬಿಡುತ್ತಾರೆ. ಇದೇ ವೇಳೆ ವಿಚ್ಛೇದನಕ್ಕೆ ಅರ್ಜಿಯೂ ಸಲ್ಲಿಸುತ್ತಾರೆ.
ಮುಂದಿನ ವರ್ಷ, ನೌಜಿಶಾ ಎರ್ನಾಕುಲಂ ಜಿಲ್ಲೆಯ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಕೆಪಿಎಸ್‌ಸಿ ಪೂರಕ ಪಟ್ಟಿಯಲ್ಲಿ ಸ್ಥಾನ ಪಡೆದರು. ಕಾಸರಗೋಡಿನ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ (ಡಬ್ಲ್ಯುಸಿಪಿಒ) ಹುದ್ದೆಗೆ ದೈಹಿಕ ಪರೀಕ್ಷೆಗೆ ಹೋಗುತ್ತಾರೆ ಆದರೆ ಅಲ್ಲಿ ಅವರು ಫೇಲ್ ಆಗುತ್ತಾರೆ.
ಒಂದು ಬಾರಿ ತೇರ್ಗಡೆ ಆಗದಿದ್ದರೂ, ಮುಂದಿನ ವರ್ಷ ಮತ್ತೆ ಪ್ರಯತ್ನ ಮಾಡಿ ಈ ಬಾರಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಹುದ್ದೆಯ ಸಾಲಿನಲ್ಲಿ ರಾಜ್ಯದಲ್ಲೇ 141ನೇ ಶ್ರೇಣಿಯನ್ನು ಪಡೆಯುತ್ತಾರೆ.
ತ್ರಿಶೂರ್‌ನ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಹುದ್ದೆಯ ಅಲ್ಪಸಂಖ್ಯಾತ ಪಟ್ಟಿಯಲ್ಲಿ ಮೊದಲ ರ್ಯಾಂಕ್ ಮತ್ತು ಎರ್ನಾಕುಲಂನಲ್ಲಿ ಎಂಟನೇ ಶ್ರೇಣಿಯನ್ನು ಪಡೆಯುತ್ತಾರೆ.
ಏಪ್ರಿಲ್ 15, 2021 ರಲ್ಲಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ನೌಜಿಶಾ ಪೊಲೀಸ್ ಇಲಾಖೆಗೆ ನೇಮಕವಾಗುತ್ತಾರೆ. ತನ್ನ ಕುಟುಂಬದ ತನ್ನೊಂದಿಗೆ ಸದಾ ಜೊತೆಯಾಗಿಯೇ ನಿಂತಿತ್ತು. ಯಾವ ಮಹಿಳೆಯೂ ತನ್ನ ಮೇಲಾದ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದೆನ್ನುತ್ತಾರೆ ನೌಜಿಶಾ.
– ಸುಹಾನ್ ಶೇಕ್