ನವದೆಹಲಿ: ಕೇರಳದಲ್ಲಿ ತನ್ನ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ 15 ದಿನಗಳ ಯಾತ್ರೆಗೆ ಮಂಗಳವಾರ ಚಾಲನೆ ನೀಡಲು ಮುಂದಾಗಿದ್ದು, ಮತ್ತೊಂದೆಡೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಪಿಎಂ(ಮಾರ್ಕಿಸ್ಟ್) ಪಕ್ಷವನ್ನು ಮಾವೋವಾದಿಗಳಿಗೆ ಬಿಜೆಪಿ ಹೋಲಿಕೆ ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಪಿಣರಾಯಿ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ನೀಡಿದ್ದ ಹೇಳಿಕೆಗೆ ಪಿಣರಾಯಿ ಪ್ರತಿಕ್ರಿಯೆ ನೀಡುತ್ತಾ, ಇದೊಂದು ಬಿಟ್ಟಿ ಪ್ರಚಾರದ ಗಿಮಿಕ್ ಎಂದು ತಿರುಗೇಟು ನೀಡಿದ್ದಾರೆ. ಕೇರಳದಲ್ಲಿ ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರವನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜನ್ ರಕ್ಷಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಪ್ರಜಾಪ್ರಭುತ್ವದ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಪಿಐ(ಮಾರ್ಕಿಸ್ಟ್) ಪಕ್ಷವನ್ನು ಮಾವೋವಾದಿಗಳ ಜತೆ ಹೋಲಿಕೆ ಮಾಡಿರುವುದು ಖಂಡನೀಯ ಎಂದು ಪಿಣರಾಯಿ ಹೇಳಿದರು.
ಸಿಪಿಎಂ ಪಕ್ಷ ಕೇರಳದಲ್ಲಿ ಕೊಲೆಗಡುಕ ರಾಜಕೀಯದಲ್ಲಿ ಶಾಮೀಲಾಗಿದೆ ಎಂದು ಜಾವ್ಡೇಕರ್ ಆರೋಪಿಸಿದ್ದರು. ಕೇರಳದಲ್ಲಿ ಸುಮಾರು 124ಕ್ಕೂ ಅಧಿಕ ಅಮಾಯಕ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ ಎಂದು ದೂರಿದ್ದರು. ಹಾಗಾಗಿ ಸಿಪಿಎಂ ಅಂದರೆ ಮಾರ್ಕಿಸ್ಟ್ ಅಲ್ಲ, ಮಾವೋವಾದಿ ಆಗಿದೆ ಎಂದು ಜಾವ್ಡೇಕರ್ ಹೋಲಿಕೆ ಮಾಡಿದ್ದರು.