ಕೊಚ್ಚಿ: ನಾಲ್ಕನೇ ಆವೃತ್ತಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಕೇರಳ ಬ್ಲಾಸ್ಟರ್ ಹಾಗೂ ಅಟ್ಲೆಟಿಕೊ ಡಿ ಕೋಲ್ಕತಾ ನಡುವೆ ಶುಕ್ರವಾರ ನಡೆದ ಉದ್ಘಾಟನಾ ಫುಟ್ಬಾಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.
ಆತಿಥೇಯ ಕೇರಳ ಬ್ಲಾಸ್ಟರ್ಸ್ ತಂಡ ಆರಂಭದಲ್ಲೇ ಗೋಲು ಸಿಡಿಸಲು ಪ್ರಯತ್ನ ನಡೆಸಿತು. ಪಂದ್ಯದ 5ನೇ ನಿಮಿಷದಲ್ಲಿ ಬ್ಲಾಸ್ಟರ್ಸ್‌ನ ಬೆರ್ಬಟೋವ್ ನಡೆಸಿದ ಪ್ರಯತ್ನ ಗೋಲು ಪೆಟ್ಟಿಗೆಯಿಂದ ಆಚೆ ಹಾರಿತು. 1-0 ಮುನ್ನಡೆ ಸಾಧಿಸುವ ಕೇರಳ ತಂಡದ ಕನಸು ಈಡೇರಲಿಲ್ಲ. ಬಳಿಕ ಕೋಲ್ಕತಾ ತಂಡ ಚೆಂಡಿನ ಮೇಲೆ ಸ್ವಲ್ಪ ಹಿಡಿತ ನಡೆಸುವ ಪ್ರಯತ್ನ ನಡೆಸಿತು. ಆಗ ಆಟ ಆರಂಭವಾಗಿ 10 ನಿಮಿಷವಷ್ಟೇ ಆಗಿತ್ತು.
ಗೋಲ್ ಮಿಸ್ ಮಾಡಿದ ಕೋಲ್ಕತಾ: ಪಂದ್ಯದ ಹದಿನಾಲ್ಕನೇ ನಿಮಿಷದಲ್ಲಿ ಕೋಲ್ಕತಾದ ಹಿತೇಶ್ ಶರ್ಮಗೆ ಗೋಲು ದಾಖಲಿಸುವ ಎಲ್ಲ ಅವಕಾಶ ಇತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಈ ಮೂಲಕ ಎರಡೂ ತಂಡಗಳು ಆರಂಭದಲ್ಲಿ ಗೋಲುಗಳಿಸುವ ಎರಡು ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡವು. ಪಂದ್ಯದ 45ನೇ ನಿಮಿಷದ ವರೆಗೆ ಯಾವುದೇ ಬದಲಾವಣೆ ಕಾಣಲಿಲ್ಲ. ಅದೇ ಹೋರಾಟ ಮುಂದುವರಿಯಿತು. ಈ ವೇಳೆ ಹೆಚ್ಚಿನ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪಂದ್ಯದ ಮೊದಲಾರ್ಧ ಮುಗಿದಾಗ 0-0 ಗೋಲುಗಳಿಂದ ಎರಡೂ ತಂಡಗಳು ಸಮಸಾಧಿಸಿಕೊಂಡಿದ್ದವು.
ಐಎಸ್‌ಎಲ್‌ಗೆ ಅದ್ಧೂರಿ ಚಾಲನೆ
ಕೊಚ್ಚಿ: ಇಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ 4ನೇ ಆವೃತ್ತಿ ಐಎಸ್‌ಎಲ್ (ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್) ಕೂಟಕ್ಕೆ ಶುಕ್ರವಾರ ಸಂಜೆ ಅದ್ಧೂರಿ ಚಾಲನೆ ನೀಡಲಾಯಿತು. ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್, ನಟಿ ಕತ್ರೀನಾ ಕೈಫ್ ನೃತ್ಯ ಮಾಡುವ ಮೂಲಕ ಉದ್ಘಾಟನೆಗೆ ಮತ್ತಷ್ಟು ಮೆರುಗು ತಂದರು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪಾಲ್ಗೊಂಡಿದ್ದರು. ಕ್ರೀಡಾಂಗಣ ಭರ್ತಿಯಾಗಿ ತುಂಬಿತ್ತು.
ಮೊದಲ ಪಂದ್ಯದಲ್ಲಿ ಆತಿಥೇಯ ಕೇರಳ ತಂಡವನ್ನು 2 ಬಾರಿಯ ಚಾಂಪಿಯನ್ ಬಲಿಷ್ಠ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಎದುರಿಸಿತು. ಕೂಟದಲ್ಲಿ ಕೋಲ್ಕತಾ, ಬೆಂಗಳೂರು, ಚೆನ್ನೈ, ದಿಲ್ಲಿ, ಗೋವಾ, ಜೆಮೆಡ್‌ಪುರ, ಕೇರಳ ಬ್ಲಾಸ್ಟರ್, ಮುಂಬೈ ಸಿಟಿ, ನಾರ್ಥ್ ಈಸ್ಟ್ ಯುನೈಟೆಡ್, ಪುಣೆ ಸಿಟಿ ತಂಡಗಳು ಪಾಲ್ಗೊಂಡಿವೆ. ಒಟ್ಟಾರೆ 4 ತಿಂಗಳು ಕೂಟ ನಡೆಯಲಿದೆ. 2018 ಮಾರ್ಚ್ 2ನೇ ವಾರ ಫೈನಲ್ ಪಂದ್ಯ ನಡೆಯಲಿದೆ.