ತಿರುವನಂತಪುರಂ: ಮಾನವೀಯತೆಯೇ ಸತ್ತು ಹೋಗಿದೆ ಎನ್ನುವ ಕಾಲದಲ್ಲಿ, ಮಾನವೀಯತೆ ಸತ್ತಿಲ್ಲ ಇನ್ನೂ ಬದಕಿಯೇ ಇದೆ ಎಂದು ಸಾರುವ ಘಟನೆಗಳು ಆಗಾಗ ನಮ್ಮ ಸುತ್ತಮುತ್ತ ನಡೆಯುತ್ತಿರುತ್ತವೆ. ಅಂತದ್ದೇ ಒಂದು ಘಟನೆಗೆ ಕೇರಳದ ಕೊಚ್ಚಿಯಲ್ಲಿರುವ ಕೋವಿಡ್-19 ಆರೈಕೆ ಕೇಂದ್ರ ಸಾಕ್ಷಿಯಾಗಿದೆ. ಕಳೆದ ಗುರುವಾರ ಕೊಚ್ಚಿಯ ಈ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭವೊಂದು ನಡೆದಿದ್ದು, ಸಮಾರಂಭದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆಗೆ ಒಂದು ದಿನ ಬಾಕಿ ಇರುವಾಗ ಫಾಜಿಯಾ (19) ಎಂಬ ಯುವತಿಗೆ ಕೋವಿಡ್-19 ಸೋಂಕು ದ್ರಢಪಟ್ಟಿದ್ದು, ಆಕೆಯನ್ನು ಮಟ್ಟಂಚೇರಿಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರಿಸಲಾಯಿತು. ಇದರಿಂದ ಯುವತಿ ಬೇಸರಗೊಂಡಿದ್ದಳು. ಆದರೆ ಆರೈಕೆ ಕೇಂದ್ರದ ಇತರ ಸಹವಾಸಿಗಳು ಸೇರಿಕೊಂಡು ಮದುವೆ ದಿನ ಗುಟ್ಟಾಗಿ ಸಮಾರಂಭ ಏರ್ಪಡಿಸಿ ಆಕೆಯ ಖುಷಿಗೆ ಕಾರಣರಾಗಿದ್ದಾರೆ.
ಫಾಜಿಯಾಳನ್ನು ಮದುವೆ ಹೆಣ್ಣಿನಂತೆ ಶೃಂಗರಿಸಿ “ಒಪ್ಪಾನಾ’ (ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಹಾಡು, ನೃತ್ಯಮಾಡು ಆಚರಣೆಯಾಗಿದೆ) ಏರ್ಪಡಿಸಿದ್ದಾರೆ. ಇತರ ರೋಗಿಗಳು ಅವಳ ಸುತ್ತ ಹಾಡಿ, ನಲಿಯುತ್ತ ಅವಳನ್ನು ಹುರಿದುಂಬಿಸುವ ಮಾನವೀಯ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ.
“ನಮ್ಮ ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸುವಾಗ ಮರುದಿನ ಆಕೆಯ ಮದುವೆ ಇರುವ ನಗ್ಗೆ ಗೊತ್ತಾಯಿತು. ಈ ವಿಷಯವನ್ನು ಇತರ ರೋಗಿಗಳೊಂದಿಗೆ ಹಂಚಿಕೊಂಡಾಗ, ಆಕೆಗೆ ಸಮಾರಂಭ ಏರ್ಪಡಿಸುವ ಬಗ್ಗೆ ಎಲ್ಲರೂ ಸಮ್ಮತಿ ಸೂಚಿಸಿದರು. ವಾರ್ಡ್‌ಗಳಲ್ಲಿ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಎಲ್ಲ ರೋಗಿಗಳು ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ’ ಎಂದು ಹೆಲ್ತ್ ಇನ್‌ಸ್ಪೆಕ್ಟರ್ ಕೆ. ಸುಧೀರ್ ತಿಳಿಸಿದ್ದಾರೆ. ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿ ಕಡ್ಡಾಯವಲ್ಲವೆಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಮಧುವೆ ಸಮಾರಂಭ ಸಡಗರದಿಂದ ನಡೆದಿದ್ದು, ಎಲ್ಲ ರೋಗಿಗಳೂ ಸೇರಿ ಗ್ರೂಪ್ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ ಎಲ್ಲರಿಗೂ ಬಿರಿಯಾನಿ ಮತ್ತು ಸಿಹಿತಿಂಡಿಯ ವ್ಯವಸ್ಥೆಯನ್ನೂ ಆರೈಕೆ ಕೇಂದ್ರದ ರೋಗಿಗಳು ಮಾಡಿದ್ದಾರೆ. “ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ಘಟನೆ. ನಾನು ದುಖಃದಲ್ಲಿದ್ದೆ. ನನ್ನನ್ನು ಖುಷಿಪಡಿಸಲು ಇವರು ಏರ್ಪಡಿಸಿದ ಸಮಾರಂಭವನ್ನು ನಾನೆಂದು ಮರೆಯಲಾರೆ’ ಎಂದು ಫಾಜಿಯಾ ಹೇಳಿದ್ದಾಳೆ. ಈಕೆ ಸದ್ಯೆ ಪದವಿ ಓದುತ್ತಿದ್ದಾಳೆ.