Advertisement

ಕೇರಳ ರಾಜಕೀಯ ಅಖಾಡ: ತಾವರೆ ಅರಳಿದ “ನೇಮಂ”ನಲ್ಲಿ ರಂಗೇರಿದ ಹಣಾಹಣಿ

05:30 PM Mar 19, 2021 | Team Udayavani |

ಕಾಸರಗೋಡು, ಮಾ.19: ಕೇರಳದಲ್ಲಿ ಪ್ರಪ್ರಥಮವಾಗಿ ತಾವರೆ ಅರಳಿದ ನೇಮಂ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆದಿದೆ. ಘಟಾನುಘಟಿಗಳು ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ರಂಗೇರಿಸಿಕೊಂಡಿದೆ.

Advertisement

ತಿರುವನಂತಪುರ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ 2016 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪ್ರಥಮ ಬಾರಿಗೆ ಗೆದ್ದುಕೊಂಡು ಇತಿಹಾಸ ರಚಿಸಿತ್ತು. ಹಿರಿಯ ಬಿಜೆಪಿ ನಾಯಕ ಒ.ರಾಜಗೋಪಾಲ್‌ ಗೆಲುವು ಸಾಧಿಸಿದ್ದರು. ಈ ಸೀಟನ್ನು ಉಳಿಸಿಕೊಳ್ಳಲು ಬಿಜೆಪಿ ಹೋರಾಡುತ್ತಿದ್ದರೆ, ಬಿಜೆಪಿಯಿಂದ ಕಸಿದುಕೊಳ್ಳಲು ಕಾಂಗ್ರೆಸ್‌, ಸಿಪಿಎಂ ತೀವ್ರ ಹಣಾಹಣಿ ನಡೆಸುತ್ತಿದೆ.

ಬಿಜೆಪಿಯಿಂದ ಹಿರಿಯ ನೇತಾರ, ಮಾಜಿ ಮಿಜೋರಾಂ ರಾಜ್ಯಪಾಲ ಕುಮ್ಮನಂ ರಾಜಶೇಖರನ್‌ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಲೀಡರ್‌ ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ದಿ|ಕೆ.ಕರುಣಾಕರನ್‌ ಅವರ ಪುತ್ರ, ಕಾಂಗ್ರೆಸ್‌ ಮಾಜಿ ರಾಜ್ಯ ಸಮಿತಿ ಅಧ್ಯಕ್ಷ, ವಡಗರ ಸಂಸದ ಕೆ.ಮುರಳೀಧರನ್‌ ಕಣಕ್ಕಿಳಿದಿದ್ದಾರೆ. ಎಡರಂಗದಿಂದ ಸಿಪಿಎಂ ಮುಖಂಡ ವಿ.ಶಿವನ್‌ ಕುಟ್ಟಿ ಸ್ಪರ್ಧಿಸುತ್ತಿದ್ದಾರೆ. ಈ ಮೂವರು ಅಭ್ಯರ್ಥಿಗಳ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ತ್ರಿಕೋನ ಸ್ಪರ್ಧೆ ನಡೆಯಲಿರುವ ಈ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

2016 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ತಾವರೆ ಅರಳಿತ್ತು. ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಒ.ರಾಜಗೋಪಾಲ್‌ ಅವರು ಗೆಲುವು ಸಾಧಿಸಿದ್ದರು. ಒ.ರಾಜಗೋಪಾಲ್‌ 67,813 ಮತಗಳನ್ನು, ಸಿಪಿಎಂನ ಎ.ಶಿವನ್‌ ಕುಟ್ಟಿ 59,142, ಐಕ್ಯರಂಗದ ಅಭ್ಯರ್ಥಿ ಸುರೇಂದ್ರನ್‌ ಪಿಳ್ಳೆ 13860 ಮತಗಳನ್ನು ಪಡೆದಿದ್ದರು. ಅನಂತರದ ಲೋಕಸಭೆ ಮತ್ತು ಪಂಚಾಯತ್‌ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯೇ ಮೊದಲ ಸ್ಥಾನ ಉಳಿಸಿಕೊಂಡಿದೆ.

ತಿರುವನಂತಪುರಂ ಸೆಕ್ರೆಟರಿಯೇಟ್‌ನಿಂದ 9 ಕಿ.ಮೀ. ದೂರವಿರುವ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ 21 ಕಾರ್ಪರೇಶನ್‌ ವಾರ್ಡ್‌ಗಳಿವೆ. ಇದರಲ್ಲಿ 14 ವಾರ್ಡ್‌ಗಳು ಬಿಜೆಪಿಯ ಕೈಯಲ್ಲಿದ್ದರೆ, ಬಾಕಿ 7 ವಾರ್ಡ್‌ಗಳು ಸಿಪಿಎಂ ಕೈಯಲ್ಲಿದೆ.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ-ಸಿಪಿಎಂ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತಾರ ಕೆ.ಮುರಳೀಧರನ್‌ ಸ್ಪರ್ಧಿಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ರಾಜ್ಯದಲ್ಲಿ ಪ್ರಪ್ರಥಮವಾಗಿ ತಾವರೆ ಅರಳಿದ ನೇಮಂ ಬಿಜೆಪಿ ಉಳಿಸಿಕೊಳ್ಳುವುದೇ, ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಸಿಪಿಎಂ ಈ ಕ್ಷೇತ್ರವನ್ನು ಕಸಿದುಕೊಳ್ಳುವುದೇ, ಕಾಂಗ್ರೆಸ್‌ ಗೆಲುವು ಸಾಧಿಸುವುದೇ ಎಂಬುದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next