ತಿರುವನಂತಪುರ : ಇದೇ ಎಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೇರಳ ಸಚಿವರು, ಶಾಸಕರು, ಸ್ಪೀಕರ್, ಉಪ ಸ್ಪೀಕರ್, ವಿಪಕ್ಷ ನಾಯಕ ಮತ್ತು ಮುಖ್ಯ ಸಚೇತಕ (ಚೀಫ್ ವಿಪ್) ಇವರ ವೇತನ ಮತ್ತು ಭತ್ಯೆಯನ್ನು ದುಪ್ಪಟ್ಟು ಏರಿಸುವ ಮಸೂದೆಯನ್ನು ಕೇರಳ ವಿಧಾನಸಭೆ ಪಾಸು ಮಾಡಿದೆ.
ಇದರಿಂದಾಗಿ ಸಚಿವರು ಮತ್ತು ಇತರರ ವೇತನವು ಈಗಿನ 55,000 ರೂ.ಗಳಿಂದ 90,500 ರೂ.ಗಳಿಗೆ ಏರಲಿದೆ; ಶಾಸಕರ ವೇತನ ಈಗಿನ 39,500 ರೂ.ಗಳಿಂದ 70,000 ರೂ.ಗಳಿಗೆ ಏರಲಿದೆ.
ಕೇರಳ ಸಚಿವರು ಮತ್ತು ಶಾಸಕರ ವೇತನ, ಭತ್ಯೆ ಏರಿಸುವ ಈ ಮಸೂದೆಯು ಜಸ್ಟಿಸ್ (ನಿವೃತ್ತ) ಜೆ ಎಂ ಜೇಮ್ಸ್ ಆಯೋಗದ ಶಿಫಾರಸಿನ ಪ್ರಕಾರ ಮಂಡಿಸಲ್ಪಟ್ಟು ಪಾಸಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರು ಮತ್ತು ಶಾಸಕರ ವೇತನ ಏರಿಕೆಯ ಮಸೂದೆಯ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ “ಕಳೆದ ಐದು ವರ್ಷಗಳಲ್ಲಿ ಪೆಟ್ರೋಲ್, ಡೀಸಿಲ್,ವಿದ್ಯುತ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹಲವು ಪಟ್ಟು ಏರಿದೆ’ ಎಂದು ಹೇಳಲಾಗಿದೆ.
ವೇತನ, ಭತ್ಯೆ ಪರಿಷ್ಕರಣೆಯ ಪರಿಣಾಮವಾಗಿ ಕೇರಳ ಸಚಿವರ ಕ್ಷೇತ್ರೀಯ ಭತ್ಯೆಯು ತಿಂಗಳಿಗೆ, ಈಗಿನ 12,000 ರೂ.ಗಳಿಂದ 40,000 ರೂ.ಗಳಗೆ ಏರಲಿದೆ. ಶಾಸಕರ ಕ್ಷೇತ್ರೀಯ ಭತ್ಯೆಯು ತಿಂಗಳಿಗೆ 12,000 ರೂ.ಗಳಿಂದ 25,000 ರೂ.ಗಳಿಗೆ ಏರಲಿದೆ.
ಶಾಸಕರು ರಾಜ್ಯದ ಹೊರಗೆ ಮತ್ತು ಒಳಗೆ ಕೈಗೊಳ್ಳುವ ವಿಮಾನ ಯಾನದ ಬಾಬ್ತು ವರ್ಷಕ್ಕೆ ಗರಿಷ್ಠ 50,000 ರೂ. ಪಡೆಯುವುದಕ್ಕೆ ಈ ಮಸೂದೆಯಲ್ಲಿ ಹೊಸ ಅವಕಾಶವನ್ನು ಕಲ್ಪಿಸಲಾಗಿದೆ.
ಕೇರಳ ಸಚಿವರು ಮತ್ತು ಶಾಸಕರ ವೇತನ, ಭತ್ಯೆಯನ್ನು ದುಪ್ಪಟ್ಟು ಏರಿಸಲಾಗಿರುವ ಕಾರಣ ಸರಕಾರದ ಖಜಾನೆಗೆ ವರ್ಷಕ್ಕೆ 5.25 ಕೋಟಿ ರೂ. ಹೊರೆ ಬರಲಿದೆ.