ತಿರುವನಂತಪುರ: ವಾಸ್ತುಶಾಸ್ತ್ರ ಮತ್ತು ತಾಂತ್ರಿಕ ನೈಪುಣ್ಯತೆಗೆ ಸಾಕ್ಷಿ ಎಂಬಂತೆ ಕೇರಳದ ಅಳಫುಳದಲ್ಲಿರುವ ಸುಮಾರು ಒಂದು ಸಾವಿರ ವರ್ಷದಷ್ಟು ಪುರಾತನ ಮಂಕೊಂಬು ಶ್ರೀ ಭಗವತಿ ದೇವಸ್ಥಾನವನ್ನು ಅದರ ಪ್ರಾಚೀನತೆಗೆ ಧಕ್ಕೆಯಾಗದಂತೆ ಸ್ಕ್ರೂಜಾಕ್ ಗಳನ್ನು ಬಳಸಿ ನೆಲದಿಂದ ಸುಮಾರು 6 ಅಡಿಗಳಷ್ಟು ಎತ್ತರಕ್ಕೆ ಏರಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಇದನ್ನೂ ಓದಿ:Chennai: ಖ್ಯಾತ ಯೂಟ್ಯೂಬರ್‌ನ ಕಾರು ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು
ನೆಲದಲ್ಲಿದ್ದ ದೇವಾಲಯವನ್ನು ಆರು ಅಡಿಗಳಷ್ಟು ಎತ್ತರಕ್ಕೆ ಏರಿಸುವ ಈ ಕಾರ್ಯಕ್ಕೆ ಅಂದಾಜು ಮೂರುವರೆ ಕೋಟಿ ರೂಪಾಯಿಯಷ್ಟು ವೆಚ್ಚವಾಗಿರುವುದಾಗಿ ಮೂಲಗಳು ತಿಳಿಸಿವೆ.
ಭಗವತಿ ದೇವಾಲಯ ನಿಧಾನಕ್ಕೆ ಕುಸಿಯುತ್ತಿದ್ದು, ಸುಮಾರು ಮೂರ್ನಾಲ್ಕು ಅಡಿಗಳಷ್ಟು ಜಲಾವೃತಗೊಳ್ಳುತ್ತಿದ್ದುದರಿಂದ ಪ್ರತಿದಿನ ಪೂಜಾ ಕಾರ್ಯಕ್ಕೆ ತೊಂದರೆಯಾಗುತ್ತಿದ್ದುದರಿಂದ ದೇವಾಲಯವನ್ನು ನೆಲಮಟ್ಟದಿಂದ ಮೇಲಕ್ಕೆತ್ತಲು ನಿರ್ಧರಿಸಲಾಗಿತ್ತು ಎಂದು ಆಡಳಿತ ಮಂಡಳಿ ವಿವರಿಸಿದೆ.
2018ರ ಪ್ರವಾಹದ ಸಂದರ್ಭದಲ್ಲಿ ನೀರು ದೇವಾಲಯದ ಒಳನುಗ್ಗಿದ್ದರಿಂದ ದೇವಿ ವಿಗ್ರಹ ನೀರಿನಲ್ಲಿ ಮುಳುಗಿತ್ತು. ದೇವಾಲಯದ ಆವರಣ ಕುಸಿದು ಬಿದ್ದ ಪರಿಣಾಮ ವರ್ಷವಿಡೀ ಭಕ್ತರು ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ದೇವಾಲಯದ ಕಟ್ಟಡ ಮತ್ತು ಪ್ರಾಚೀನತೆಗೆ ಧಕ್ಕೆಯಾಗದಂತೆ ಮೇಲಕ್ಕೆತ್ತುವ ಪ್ರಸ್ತಾಪಕ್ಕೆ ತಿರುವಾಂಕೂರ್ ದೇವಸ್ವಂ ಮಂಡಳಿ (TDB) ಅನುಮತಿ ನೀಡಿತ್ತು.
ನಂತರ ಕೊಚ್ಚಿ ಮೂಲದ ಎಂಜಿನಿಯರಿಂಗ್ ಸಂಸ್ಥೆ ಸ್ಕ್ರೂ ಜಾಕ್ ಗಳನ್ನು ಬಳಸಿ ದೇವಾಲಯವನ್ನು ಸುಮಾರು ಆರು ಅಡಿಗಳಷ್ಟು ಎತ್ತರಕ್ಕೆ ಏರಿಸುವಲ್ಲಿ ಯಶಸ್ವಿಯಾಗಿತ್ತು. ದೇವಾಲಯವನ್ನು ಅಡಿಭಾಗದಿಂದ ಮೇಲಕ್ಕೆತ್ತಲು ಸುಮಾರು 400 ಸ್ಕ್ರೂಜಾಕ್ ಗಳನ್ನು ಬಳಸಲಾಗಿತ್ತು ಎಂದು ಸಂಸ್ಥೆಯ ಸಿಇಒ ಜೋಸ್ ಫ್ರಾನ್ಸಿಸ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.