Advertisement

Kadaba: ಕೆಂಜಲಕ್ಕೆ ಇನ್ನೂ ಇಲ್ಲ ಶಾಶ್ವತ ಪ್ರಯಾಣಿಕರ ತಂಗುದಾಣ

02:06 PM Aug 09, 2024 | Team Udayavani |

ಕಡಬ: ಕೊಂಬಾರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುಟ್ಟ ಪೇಟೆ ಕೆಂಜಲದಲ್ಲಿ ವ್ಯವಸ್ಥಿತವಾದ ಬಸ್‌ ತಂಗುದಾಣ ನಿರ್ಮಿಸಬೇಕೆಂಬ ಹಲವು ಸಮಯದ ಬೇಡಿಕೆ ಇನ್ನೂ ಈಡೇರಿಲ್ಲ. ಇಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯವಸ್ಥಿತವಾದ ಬಸ್‌ ತಂಗುದಾಣ ನಿರ್ಮಿಸಬೇಕೆಂದು ಸಂಬಂಧಪಟ್ಟವರಿಗೆ ನೀಡಿರುವ ಮನವಿಗಳಿಗೆ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.

Advertisement

ಕೆಂಜಲದ ಮೂಲಕ ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾದು ಹೋಗುತ್ತಿದ್ದು, ಇಲ್ಲಿ ದಿನನಿತ್ಯ ಹತ್ತಾರು ವಿದ್ಯಾರ್ಥಿಗಳು ಸುಬ್ರಹ್ಮಣ್ಯ, ಬಿಳಿನೆಲೆ, ಕಡಬ ಮುಂತಾದೆಡೆಗೆ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಅದರ ಜತೆಗೆ ಪರಿಸರದ ಕೃಷಿಕರು ಸೇರಿದಂತೆ ಸಾರ್ವಜನಿಕರು ಕೂಡ ಕೆಂಜಲದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಸಂಚರಿಸಲು ಬಸ್‌ ಹಿಡಿಯಬೇಕಿದೆ. ಆದರೆ ಇಲ್ಲಿ ವ್ಯವಸ್ಥಿತವಾದ ಬಸ್‌ ತಂಗುದಾಣವಿಲ್ಲ. ಬಿಸಿಲು ಅಥವಾ ಮಳೆಗೆ ಕೊಡೆ ಹಿಡಿದು ಬಸ್‌ಗೆ ಕಾಯಬೇಕಾದ ಪರಿಸ್ಥಿತಿ ಇಲ್ಲಿದೆ. ಹಲವು ವರ್ಷದ ಹಿಂದೆ ಈ ಜಾಗದಲ್ಲಿ ಸ್ಥಳೀಯ ಕೆಲವರು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ಸಿಮೆಂಟ್‌ ಶೀಟ್‌ ಹಾಕಿ ನಿರ್ಮಿಸಿದ್ದ ಕಿರಿದಾದ ಬಸ್‌ ತಂಗುದಾಣವೇ ಇಷ್ಟೊಂದು ಪ್ರಯಾಣಿಕರಿಗೆ ಇಂದಿಗೂ ಆಶ್ರಯ ನೀಡುತ್ತಿದೆ. ಅದು ಕೂಡ ಬಹುತೇಕ ಶಿಥಿಲಗೊಂಡಿದೆ. ಆದುದರಿಂದ ಸಂಬಂಧಪಟ್ಟವರು ಇಲ್ಲಿ ವ್ಯವಸ್ಥಿತವಾದ ಬಸ್‌ ತಂಗುದಾಣ ನಿರ್ಮಿಸಿ ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಅರಣ್ಯ ಇಲಾಖೆಯ ಜಮೀನು ಕೆಂಜಲದಲ್ಲಿ ಬಸ್‌ ತಂಗುದಾಣ ನಿರ್ಮಿಸಲು ಉದ್ದೇಶಿಸಿರುವ ಜಮೀನು ಅರಣ್ಯ ಇಲಾಖೆಗೆ ಸೇರಿರುವುದರಿಂದ ನಮಗೆ ಸರಕಾರಿ ಅನುದಾನ ಬಳಸಲು ತೊಡಕಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಸಂಘ ಸಂಸ್ಥೆಗಳ ನೆರವಿನಿಂದ ಬಸ್‌ ತಂಗುದಾಣ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ.

-ರಾಘವೇಂದ್ರ ಗೌಡ, ಪಿಡಿಒ, ಕೊಂಬಾರು ಗ್ರಾಮ ಪಂಚಾಯತ್‌

 

Advertisement
Advertisement

Udayavani is now on Telegram. Click here to join our channel and stay updated with the latest news.

Next