Advertisement

ಕೇಂದ್ರೀಯ ವಿದ್ಯಾಲಯಗಳನ್ನು ಹೆಚ್ಚೆಚ್ಚು ಆರಂಭಿಸಿ

02:33 PM Aug 17, 2017 | Team Udayavani |

ಚಿಕ್ಕಮಗಳೂರು: ಕೇಂದ್ರೀಯ ವಿದ್ಯಾಲಯದಂತಹ ಶಾಲೆಗಳನ್ನು ಆರಂಭಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Advertisement

ಬುಧವಾರ ನಗರದ ಡಯಟ್‌ ಆವರಣದಲ್ಲಿ ನೂತನ ಕೇಂದ್ರೀಯ ವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರೀಯ ವಿದ್ಯಾಲಯವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅತ್ಯಂತ ಕಡಿಮೆ ಶುಲ್ಕವನ್ನು ಪಡೆದು ನೀಡುತ್ತಿದೆ. ಆ ಮೂಲಕ ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಂತಹುದೇ ಶಾಲೆಗಳನ್ನು ರಾಜ್ಯ ಸರ್ಕಾರವೂ ತೆರೆಯಬೇಕು. ಇದರಿಂದ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಅದರೊಂದಿಗೆ ದುಬಾರಿ ಶುಲ್ಕವನ್ನು ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾಕ್ಕೂ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.

ಶಾಸಕ ಸಿ.ಟಿ.ರವಿ ಹಾಗೂ ಬಿ.ಬಿ.ನಿಂಗಯ್ಯ ಅವರು ರಾಷ್ಟ್ರದಲ್ಲಿ ಏಕರೂಪ ಶಿಕ್ಷಣ ಜಾರಿಗೆ ತರಬೇಕೆಂದು ಹೇಳಿದ್ದಾರೆ. ಕೇವಲ ಏಕರೂಪ ಶಿಕ್ಷಣ ಜಾರಿಗೆ ತಂದರೆ ಸಾಲದು ಅದರೊಂದಿಗೆ ಖಾಸಗಿ ಶಾಲೆಗಳಿಗೆ ಏಕರೂಪ ಶುಲ್ಕವನ್ನೂ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಸಂಸತ್‌ನಲ್ಲಿಯೂ ಪ್ರಸ್ತಾಪಿಸುವುದಾಗಿ ಹೇಳಿದರು. ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಬೇರೆ ಬೇರೆ ರೀತಿಯ ಪಠ್ಯಕ್ರಮಗಳಿವೆ. ಒಂದೊಂದು ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗ ಪಠ್ಯಕ್ರಮಗಳನ್ನು ಬದಲಿಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿದೆ.
ಇದು ಸರಿಯಲ್ಲ. ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಬೇಕೆ ಹೊರತು ರಾಜಕೀಯವನ್ನಲ್ಲ. ಮಕ್ಕಳಿಗೆ ರಾಜಕೀಯದ ಗಂಧ ಗಾಳಿಯೂ ಸೋಕಬಾರದು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ 1200 ಕೇಂದ್ರೀಯ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷ ಈ ಶಾಲೆಗಳಲ್ಲಿ 86 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಒಂದು ರಾಜ್ಯದ ವಿದ್ಯಾರ್ಥಿಗಳನ್ನು ಬೇರೆ ರಾಜ್ಯಗಳು ಹಾಗೂ ವಿದೇಶಗಳಿಗೆ ಕಳುಹಿಸುವ ಮೂಲಕ ಭಾವೈಕ್ಯತೆ ಮೂಡಿಸುತ್ತಿರುವುದಲ್ಲದೆ ಅಲ್ಲಿನ ಕಲಿಗೆ ಹಾಗೂ ಜೀವನ ಶೈಲಿಯನ್ನು ತಿಳಿದುಕೊಳ್ಳಲು ಅವಕಾಶ  ಮಾಡಿಕೊಡಲಾಗುತ್ತಿದೆ ಎಂದರು. ಕೇಂದ್ರೀಯ ವಿದ್ಯಾಲಯವನ್ನು ಈಗ ಡಯಟ್‌ ಕಟ್ಟಡದಲ್ಲಿ ಆರಂಭಿಸಲಾಗಿದೆ. ಕದ್ರಿಮಿದ್ರಿಯಲ್ಲಿ 10 ಎಕರೆ ಜಾಗ ನೀಡಲಾಗಿದೆ. ಕಟ್ಟಡಕ್ಕಾಗಿ 16 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರೀಯ ವಿದ್ಯಾಲಯಗಳ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮಲೆನಾಡು ಭಾಗಕ್ಕೆ
ಹೊಂದಿಕೊಳ್ಳುವಂತಹ ವಿನ್ಯಾಸದ ಕಟ್ಟಡವನ್ನು  ನಿರ್ಮಿಸಬೇಕು ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇಂದಿಗೂ ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಶಿಕ್ಷಣ ನೀತಿ ಜಾರಿಗೆ ಬಾರದಿರುವುದು ನಿಜಕ್ಕೂ ವಿಷಾಧನೀಯ. ಈ ವಿಚಾರದಲ್ಲಿ ಜಪಾನ್‌
ಎಲ್ಲರಿಗೂ ಮಾದರಿಯಾಗಬೇಕು. 2ನೇ ವಿಶ್ವಯುದ್ಧ ನಡೆದಾಗ ಜಪಾನ್‌ ಸಂಪೂರ್ಣ ಹಾನಿಗೊಳಗಾಗಿತ್ತು. ಅದು ಪುನಃ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿತ್ತು. ಆದರೆ ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಜಪಾನ್‌ ಕೇವಲ 2
ದಶಕಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಿಕೊಂಡಿತು. ಅಂತಹುದೇ ಶಿಕ್ಷಣ ನೀತಿಯನ್ನು ನಮ್ಮ ದೇಶದಲ್ಲಿಯೂ ಜಾರಿಗೆ ತರಬೇಕು ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಮೂಲಕ ಒಂದೇ ದೇಶ ಒಂದೇ ತೆರಿಗೆಯನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿಯಲ್ಲಿ ಇಡೀ ದೇಶದಲ್ಲಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಬೇಕು. ಶಿಕ್ಷಣವನ್ನು ಕಡೆಗಾಣಿಸಿ ರಾಷ್ಟ್ರವನ್ನು ಕಟ್ಟಲು ಸಾಧ್ಯವಿಲ್ಲ. ಈಗ ದೇಶದಲ್ಲಿ
ಶಿಕ್ಷಣವು ವ್ಯಾಪಾರೀಕರಣವಾಗಿದೆ. ಇದು ಸರಿಯಲ್ಲ.  ದೇಶವನ್ನು ಪುನರ್‌ ನಿರ್ಮಾಣ ಮಾಡುವಂತಹ ಶೈಕ್ಷಣಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಹೇಳಿದರು.

ಕೇಂದ್ರೀಯ ವಿದ್ಯಾಲಯ ಸಂಘಟನೆಯ ಡೆಪೂಟಿ ಕಮೀಷನರ್‌ ಡಾ|ಪಿ.ದೇವಕುಮಾರ್‌ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ದೇಶಾದ್ಯಂತ 51 ಕೇಂದ್ರೀಯ ವಿದ್ಯಾಲಯಗಳನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ ರಾಜ್ಯಕ್ಕೆ 3 ಶಾಲೆಗಳು ಮಂಜೂರಾಗಿದ್ದವು. ಅವುಗಳಲ್ಲಿ ಚಿಕ್ಕಮಗಳೂರಿನಲ್ಲಿ ಮೊದಲ ಶಾಲೆ ಇಂದು ಉದ್ಘಾಟನೆಗೊಂಡಿದೆ ಎಂದರು. ಪೀಠೊಪಕರಣಗಳ ಖರೀದಿಗಾಗಿ ಈ ಶಾಲೆಗೆ ಈಗಾಗಲೇ 6 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕಂಪೂಟರ್‌ ಖರೀದಿಗೆ 5 ಲಕ್ಷ ರೂ.ಗಳನ್ನು ಒಂದು ವಾರದೊಳಗಾಗಿ ಮಂಜೂರು ಮಾಡುವುದಾಗಿ ತಿಳಿಸಿದರು. ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌, ನಗರಸಭಾ ಅಧ್ಯಕ್ಷೆ ಕವಿತಾ ಶೇಖರ್‌, ಕಾμ ಮಂಡಳಿ ಅಧ್ಯಕ್ಷ ಎಂ.ಎಸ್‌. ಬೋಜೇಗೌಡ, ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next