Advertisement

ಚಂದಗಡ ಕಬ್ಬಿಗೆ ತಗುಲಿತು ಕೆಂಪುಚುಕ್ಕೆ ರೋಗ

12:24 PM Jul 13, 2020 | Suhan S |

ಧಾರವಾಡ: ಹುಲುಸಾಗಿ ಭತ್ತ ಬೆಳೆಯುವ ಭೂಮಿಯಲ್ಲಿ ಹಣದ ಆಸೆಗಾಗಿ ಕಬ್ಬು ಬೆಳೆಯುತ್ತಿರುವ ಜಿಲ್ಲೆಯ ರೈತರಿಗೆ ಈ ವರ್ಷವೂ ರೋಗದ ಕಾಟ ಎದುರಾಗಿದ್ದು, ಆರಂಭದಲ್ಲಿಯೇ ಆತಂಕ ಕಾಡುವಂತಾಗಿದೆ.

Advertisement

ಹೌದು. ಕಳೆದ ವರ್ಷ ಕಬ್ಬು ಬೆಳೆಗೆ ಡೊಣ್ಣೆಹುಳು ದೊಡ್ಡ ಪ್ರಮಾಣದಲ್ಲಿ ಏಟು ಕೊಟ್ಟಿತ್ತು. ಈ ರೋಗದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಕಬ್ಬು ಬೆಳೆಗಾರರಿಗೆ ಈ ವರ್ಷ ಕೆಂಪುಚುಕ್ಕೆ ರೋಗ ಕಾಣಿಸಿಕೊಂಡು ತೀವ್ರ ಆತಂಕವನ್ನುಂಟು ಮಾಡಿದೆ. ಕಬ್ಬು ಹುಲುಸಾಗಿ ಸೆಟೆದು ನಿಲ್ಲುವ ಸಂದರ್ಭವೇ ಮಳೆಗಾಲದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಸಮಯ. ಈ ಸಮಯದಲ್ಲಿ ಕಬ್ಬು ಎತ್ತರೆತ್ತರಕ್ಕೆ ಗಣಿಕೆ ಮೇಲೆ ಗಣಿಕೆ ಕಾಣಿಸಿಕೊಳ್ಳುತ್ತ ಬೆಳೆದು ನಿಲ್ಲುತ್ತದೆ. ಈ ಸಂದರ್ಭದಲ್ಲೇ ಕಾಣಿಸಿಕೊಂಡ ಕೆಂಪುಚುಕ್ಕೆ ರೋಗದಿಂದ ಕಬ್ಬಿನ ರವದೆಗಳು ಒಣಗಿ ಹೋಗುತ್ತಿದ್ದು, ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಕೃಷಿ ಪಂಡಿತರು.

ಧಾರವಾಡ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕಲಘಟಗಿ, ಅಳ್ನಾವರ, ಧಾರವಾಡ ಮತ್ತು ಹುಬ್ಬಳ್ಳಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕಳೆದ ಹತ್ತು ವರ್ಷಗಳಿಂದ ವಿಪರೀತ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಬೆಳಗಾವಿ ಜಿಲ್ಲೆಯ ಸವದತ್ತಿ, ಎಂ.ಕೆ.ಹುಬ್ಬಳ್ಳಿ, ಹರ್ಷ ಶುಗರ್ ಮತ್ತು ಸಂಕೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸುತ್ತಾರೆ.

ಚಂದಗಡ ಕಬ್ಬಿಗೆ ಮಾತ್ರ: ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಅಭಿವೃದ್ಧಿ ಪಡಿಸಿರುವ ಈ ಕಬ್ಬು (92005) ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಬೆಳಗಾವಿ ಜಿಲ್ಲೆಯ ಉತ್ತರ ಭಾಗದ ತಾಲೂಕುಗಳ ಹವಾಗುಣ ಮತ್ತು ಭೂಮಿಗೆ ಹೇಳಿ ಮಾಡಿಸಿದ ಬೆಳೆ. ಆದರೆ ಧಾರವಾಡ ಜಿಲ್ಲೆಯ ಮಣ್ಣು ಮತ್ತು ಹವಾಗುಣಕ್ಕೆ ಇದು ಅಷ್ಟಾಗಿ ಹೊಂದಿಕೊಳ್ಳುತ್ತಿಲ್ಲ. ಇದರ ಪರಿಣಾಮವೇ ಇದೀಗ ಕೆಂಪುಚುಕ್ಕೆ ರೋಗ ಕಾಣಿಸಿಕೊಂಡಿದೆ. ಅತೀ ಹೆಚ್ಚು ತೇವಾಂಶ ಮತ್ತು ಸತತ ಮಳೆ ಕಾಣಿಸಿಕೊಂಡರೆ ಈ ರೋಗ ಹತ್ತುವುದು ನಿಶ್ಚಿತ. ಇದರಿಂದ ಬರೊಬ್ಬರಿ ಶೇ.15 ಪ್ರಮಾಣದಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಕೃಷಿ ವಿಜ್ಞಾನಿಗಳು.

ಹಳೆ ತಳಿ ಬಿಟ್ಟರ: ಸಾಮಾನ್ಯವಾಗಿ ಧಾರವಾಡ ಜಿಲ್ಲೆಯಲ್ಲಿ ಈವರೆಗೂ ಎಸ್‌ ಎನ್‌ಕೆ-44. ಎಸ್‌ಎನ್‌ಕೆ-49, ಎಸ್‌ ಎನ್‌ಕೆ-814, ಎಸ್‌ಎನ್‌ಕೆ-632 ಹಾಗೂ ಲೋಕಾರೂಢಿಯಲ್ಲಿ ಅತೀ ಹೆಚ್ಚು ಇಳುವರಿ ಕೊಡುವ ಗಂಗಾವತಿ ಕಬ್ಬು (ದೆವ್ವಕಬ್ಬು) ಧಾರವಾಡ ಜಿಲ್ಲೆಗೆ ಒಗ್ಗಿಕೊಂಡಿತ್ತು. ಅದೂ ಅಲ್ಲದೇ ಕಪ್ಪು ಮೂಡಿಯ ಬಣ್ಣದ ತೆಳುವು ಕಬ್ಬು ಕೂಡ ಹೆಚ್ಚಿನ ಇಳುವರಿ ಮತ್ತು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಲಾಗುತ್ತಿತ್ತು.

Advertisement

ಈ ಕಬ್ಬುಗಳಿಗೆ ಹೆಚ್ಚಿನ ರಾಸಾಯನಿಕ ಸಿಂಪರಣೆಯ ಅಗತ್ಯವೇ ಇರಲಿಲ್ಲ. ಸ್ವಲ್ಪ ಪ್ರಮಾಣದ ಕೊಟ್ಟಿಗೆ ಗೊಬ್ಬರ ಮತ್ತು ತಕ್ಕಮಟ್ಟಿಗೆ ರಾಸಾಯನಿಕ ಗೊಬ್ಬರ ಕೊಟ್ಟು ರೈತರು ಉತ್ತಮ ಫಸಲು ಪಡೆಯುತ್ತಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬು ಬೆಳೆಯಬೇಕೆನ್ನುವ ಹುಚ್ಚಿಗೆ ಬಿದ್ದ ರೈತರು ಈ ವರ್ಷ ಧಾರವಾಡ ಜಿಲ್ಲೆಯ ಅಂದಾಜು 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಚಂದಗಢ ಕಬ್ಬು ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಲ್ಲದ ಕಬ್ಬು ಮಾಯ: ಹತ್ತು ವರ್ಷಗಳಿಗೆ

ಮೊದಲು ಜಿಲ್ಲೆಯಲ್ಲಿ ರೈತರು ಅಲ್ಲಲ್ಲಿ ಬೆಲ್ಲದ ಉತ್ಪಾದನೆಗಾಗಿಯೇ ಕಬ್ಬು ದೇಶಿ ತಳಿಯ ಕಬ್ಬು ಬೆಳೆಯುತ್ತಿದ್ದರು. ಹಳೆ ಮಾದರಿಯ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದ ಈ ಕಬ್ಬು ಸಂಪೂರ್ಣ ರಸಗೊಬ್ಬರ ಮತ್ತು ರಾಸಾಯನಿಕ ಸಿಂಪರಣೆಯಿಂದ ಮುಕ್ತವಾಗಿತ್ತು. ಅಷ್ಟೇಯಲ್ಲ, ರುಚಿಕಟ್ಟಾದ ಬೆಲ್ಲವೂ ತಯಾರಾಗುತ್ತಿತ್ತು. ಆದರೀಗ ಜಿಲ್ಲೆಯ ರೈತರು ಸಕ್ಕರೆ ಕಾರ್ಖಾನೆಗಾಗಿಯೇ ಕಬ್ಬು ಉತ್ಪಾದನೆ ಆರಂಭಿಸಿದ್ದು, ಹೆಚ್ಚು ಇಳುವರಿಗಾಗಿ ವಿಪರೀತ ರಾಸಾಯನಿಕ, ಕಳೆನಾಶಕ ಮತ್ತು ರಸಗೊಬ್ಬರ ಬಳಕೆ ಆರಂಭಿಸಿದ್ದಾರೆ. ಅದೂ ಅಲ್ಲದೇ ನೀರಿಗಾಗಿ ಹೊಲಕ್ಕೊಂದು ಕೊಳವೆಬಾವಿಗಳನ್ನು ಕೂಡ ತೋಡಿಸಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ.

ಅತೀ ಹೆಚ್ಚಿನ ತೇವಾಂಶವಾದಾಗ ಈ ರೋಗ ಸಾಮಾನ್ಯ. ಎರೆಭೂಮಿಗೆ ಈ ತಳಿಯ ಕಬ್ಬು ಹಾಕಬಾರದು. ಆದರೆ ರೈತರು ಹೆಚ್ಚಿನ ಇಳುವರಿಗೆ ಆಸೆ ಪಟ್ಟು ಹಾಕುತ್ತಾರೆ. ಆದರೆ ಈ ರೋಗ ಬಿದ್ದರೆ ಸಾಮಾನ್ಯವಾಗಿ ಕಬ್ಬು ತೂಕ ಕಳೆದುಕೊಳ್ಳುತ್ತದೆ.  ಡಾ|ಬಿ.ಟಿ.ನಾಡಗೌಡ, ಕಬ್ಬುತಳಿ ತಜ್ಞರು, ಅಥಣಿ

ಕಳೆದ ವರ್ಷ ಡೊಣ್ಣೆಹುಳುವಿನ ಕಾಟ ಎದುರಾಗಿ ಕಬ್ಬಿನ ರವದಿಯಲ್ಲೆ ಬಿಳಿ ಮತ್ತು ಕರಿ ತತ್ತಿ ಇಡುತ್ತಿದ್ದ ರೋಗ ಕಾಣಿಸಿಕೊಂಡು ಕಬ್ಬು ಬೆಳೆಗಾರರು ಕಂಗಾಲಾಗಿದ್ದೆವು. ಈ ವರ್ಷ ಕೆಂಪುಚುಕ್ಕೆಯ ಕಂಬೂದು ರೋಗ ಕಾಣಿಸಿಕೊಂಡಿದೆ. ಇದನ್ನು ತಡೆಯಲು ರಾಸಾಯನಿಕಗಳ ಸಿಂಪರಣೆ ಮಾಡುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಅದಷ್ಟು ಖರ್ಚು ಮತ್ತೆ ನಮ್ಮ ಹೆಗಲಿಗೆ ಬಿದ್ದಿದೆ. ಶಿವನಗೌಡ ಪಾಟೀಲ, ದಾಸ್ತಿಕೊಪ್ಪ ರೈತ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next