Advertisement

ಜರ್ಮನಿಯಿಂದ ಬೆಂಗಳೂರಿಗೆ ಬಂದ ಕೋವಿಡ್ ಸೋಂಕಿತ ಪರಾರಿ : ಸೋಂಕಿತ ನಾಪತ್ತೆಯಿಂದ ಆತಂಕ ಸೃಷ್ಟಿ

12:26 PM Dec 09, 2021 | Team Udayavani |

ದೇವನಹಳ್ಳಿ: ಇಡೀ ಪ್ರಪಂಚದಲ್ಲಿಯೇ ಒಮಿಕ್ರಾನ್‌ ಸೋಂಕಿನ ಅಟ್ಟಹಾಸದ ನಡುವೆಯೂ ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನೊಬ್ಬ ಕೊರೊನಾ ಪಾಸಿಟಿವ್‌ ವರದಿ
ಬಂದ ನಂತರ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಬುಧವಾರ ಬೆಳಗಿನ ಜಾವ 3 ಗಂಟೆಗೆ ಜರ್ಮನಿಯಿಂದ ಪ್ರಯಾಣಿಕರನ್ನು ಹೊತ್ತು ತಂದ ವಿಮಾನದಲ್ಲಿ 351 ಮಂದಿ ಪ್ರಯಾಣಿಕರಿಗೆ ಆರ್‌ ಟಿಪಿಸಿಆರ್‌ ಟೆಸ್ಟ್‌ ಮಾಡಲಾಗಿತ್ತು. ಅದರಲ್ಲಿ
ಇಬ್ಬರಿಗೆ ಸೋಂಕು ದೃಢಪಟ್ಟಿತ್ತು, ಸೋಂಕು ದೃಢಪಟ್ಟಿದೆ ಎಂದು ತಿಳಿಯುತ್ತಿದ್ದಂತೆ ಒಬ್ಬ ಸೋಂಕಿತ ನಾಪತ್ತೆಯಾಗಿದ್ದಾನೆ. ಇದು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದೆ. ವಿಮಾನ ನಿಲ್ದಾಣದ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೋಂಕಿತ ತಪ್ಪಿಸಿಕೊಂಡಿದ್ದಾನೆ ಎನ್ನುವ ಆರೋಪಗಳೂ ಕೇಳಿ ಬಂದವು.

ಆತಂಕ ಸೃಷ್ಟಿ: ಒಮಿಕ್ರಾನ್‌ ಭೀತಿಯ ನಡುವೆಯೂ ಜರ್ಮನಿಯ ಫ್ರಾಂಕ್‌ ಫ‌ರ್ಟ್‌ನಿಂದ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಪೈಕಿ ಇಬ್ಬರಲ್ಲಿ ಕೋವಿಡ್‌ ಸೋಂಕು ಧೃಢಪಟ್ಟಿದ್ದು, ಒಬ್ಬ ಸೋಂಕಿತನನ್ನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೂಬ್ಬ ಸೋಂಕಿತ ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡಿದ್ದರಿಂದ ಹೆಚ್ಚು ಆತಂಕ ನಿರ್ಮಾಣವಾಗಿತ್ತು.

ಸೋಂಕಿತನ ಪತ್ತೆ: ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸೋಂಕಿತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೊನೆಗೆ ಬೆಂಗಳೂರಿನಲ್ಲಿ ಸೆರೆಹಿಡಿದು ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಎಲ್ಲರಿಗೂ ಕ್ವಾರಂಟೈನ್‌: ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಮಾಡಿ, ನಿಲ್ದಾಣದಲ್ಲೆ ವಿಶೇಷ ವ್ಯವಸ್ಥೆ ಕಲ್ಪಿಸಿ ಪರೀಕ್ಷಾ ವರದಿಗಾಗಿ ಕಾಯುವಂತೆ ತಿಳಿಸಲಾಗಿತ್ತು. ಹೆಚ್ಚಿನ ಭದ್ರತೆಯಿದ್ದರೂ ಕೂಡಾ ಸೋಂಕಿತನು ಹೇಗೆ ತಪ್ಪಿಸಿ ಕೊಂಡರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆತನೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಎಲ್ಲರ ವರದಿಗಳು ನೆಗೆಟೀವ್‌ ಬಂದಿವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಪ್ರಯಾಣಿಕರಿಗೂ ಹೊಂಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಬಿಎಸ್ಸೆನ್ನೆಲ್‌ ಬಿಲ್‌ ಬಾಕಿ; 104 ಆರೋಗ್ಯವಾಣಿ ಬಂದ್‌ , ಯೋಜನೆ ಸ್ಥಗಿತದ ಹುನ್ನಾರವೇ?

ಪೊಲೀಸರ ಕಾರ್ಯಾಚರಣೆ: ಪ್ರಯಾಣಿಕರೆಲ್ಲರ  ಮೇಲೆ ತೀವ್ರ ನಿಗಾವಹಿಸಲಾಗಿದ್ದು, ಎಲ್ಲರಿಗೂ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ ಆಗಿ 7 ದಿನಗಳ ನಂತರ ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಸೋಂಕಿತ ವ್ಯಕ್ತಿ ನೀಡಿದ ವಿಳಾಸ ಮತ್ತು ಮೊಬೈಲ್‌ ನಂಬರ್‌ಗಳನ್ನು ಆಧರಿಸಿಕೊಂಡು ಸ್ಥಳೀಯ ಅಧಿಕಾರಿಗಳ ಸಹಕಾರ ಪಡೆದು ಕೊಂಡು ಪೊಲೀಸರು ಶೋಧ ನಡೆಸಿದ್ದರು. ಬೆಂಗಳೂರಿನ ರಾಜಾಜಿನಗರದ ವ್ಯಕ್ತಿ ಎಂದು ತಿಳಿದು ಬಂದಿದೆ. ಸೋಂಕಿತ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದರಾದರೂ ಸೋಂಕಿತನನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ನಿರಾಕರಿಸಿದರು. ಇಬ್ಬರು ಸೋಂಕಿತರು ನಮ್ಮ ಅಧಿಕಾರಿಗಳ ಸಂಪರ್ಕದಲ್ಲೇ ಇದ್ದರು. ಬಿಬಿಎಂಪಿ ಅಧಿಕಾರಿಗಳು ಅವರ ಕಡೆಗೆ ಗಮನಹರಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದಷ್ಟೆ ಉತ್ತರಿಸಿದರು. ಸೋಂಕಿತ ವ್ಯಕ್ತಿಗೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೇಗೆ ಹೋಗಿದ್ದಾರೆ ಎನ್ನುವ ಕುರಿತು ಮಾಹಿತಿ ನೀಡಲು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next