ಉಡುಪಿ: ಯಾವುದೇ ಗ್ರಾಮ ಆಥವಾ ನಗರಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿಪಡಿಸಬೇಕಾದರೆ, ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಸಂದರ್ಭದಲ್ಲಿ ತೆಗೆದುಕೊಂಡ ಮುಂದಾ ಲೋಚನೆ ಕ್ರಮಗಳು ಪ್ರೇರಣೆಯಾಗಲಿ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಅವರು ಬುಧವಾರ ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಡಿಯಾಳಿ ಯು.ಕಮಲಾಬಾಯಿ ಪ್ರೌಢಶಾಲೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ಚಿಕ್ಕವರಾಗಿದ್ದಾಗ ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಕಂಡು ಅದೇ ರೀತಿಯ ನಗರ ನಿರ್ಮಾಣದ ಕನಸು ಕಂಡರು. ಹಾಗೆಯೇ ಬೆಂಗಳೂರು ನಗರವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ಮಾಡಿದರು. ಇಂದಿನ ಆಧುನಿಕ ನಗರಗಳ ನಿರ್ಮಾತೃರು ಈ ರೀತಿಯ ಮುಂದಾಲೋಚನೆ ವಹಿಸ ಬೇಕು. ಕೆಂಪೇಗೌಡರ ನಿರ್ಮಾಣದ ಬೆಂಗಳೂರು ಈಗ ಉದ್ಯಾನ ನಗರಿ, ಐಟಿಬಿಟಿ ನಗರವಾಗಿ ವಿಶ್ವಮಾನ್ಯವಾಗಿದೆ ಎಂದು ದಿನಕರ ಬಾಬು ಹೇಳಿದರು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆಂಪೇಗೌಡರ ಕುರಿತು ಹಿರಿಯಡ್ಕ ಸ.ಪ್ರ. ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನ ವಿಶೇಷ ಉಪನ್ಯಾಸ ನೀಡಿದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಡಿವೈಎಸ್‌ಪಿ ಜೈಶಂಕರ್, ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ| ಎಚ್ . ಶಾಂತಾರಾಮ್, ಕಮಲಾಬಾಯಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ್‌ಮೂರ್ತಿ ಹೆಬ್ಟಾರ್ ಮತ್ತಿತರರು ಉಪಸ್ಥಿತರಿದ್ದರು.
ಕೆಂಪೇಗೌಡರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪಧೆìಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಸ್ವಾಗತಿಸಿ ವಿದ್ಯಾರ್ಥಿಗಳಾದ ದಿಶಾ ಮತ್ತು ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಮತ್ತು ಬಳಗದಿಂದ ಕನ್ನಡ ಹಾಡುಗಳ ಗೀತ ಗಾಯನ ನಡೆಯಿತು.