ಪಣಜಿ: ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಕೇವಲ 24 ಗಂಟೆಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ, ಆದರೆ ಅದರ ಪಕ್ಕದಲ್ಲೇ ಇರುವ ಬಸ್ ನಿಲ್ದಾಣ ನಿರ್ಮಾಣಕ್ಕೆ ಕಳೆದ 20 ವರ್ಷಗಳಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೋವಾ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಸರ್ಕಾರವು ಕೇವಲ ವಿಐಪಿಗಳಿಗಾಗಿ ಮಾತ್ರ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಇದರಿಂದಾಗಿ ಸಾಬೀತಾಗುತ್ತದೆ. ನಾವು ಅಧಿಕಾರಕ್ಕೆ ಬಂದರೆ ಗೋವಾದ ಜನತೆಯೇ ವಿಐಪಿಗಳಾಗುತ್ತಾರೆ ಎಂದರು.
ಬಿಜೆಪಿ ಸರ್ಕಾರ ಹೆಲಿಪ್ಯಾಡ್ ನಿರ್ಮಿಸಿದಂತೆಯೇ ನಾವು ಶಾಲೆಗಳು, ರಸ್ತೆಗಳು, ಆಸ್ಪತ್ರೆಗಳನ್ನು ನಿರ್ಮಿಸುತ್ತೇವೆ. ಪ್ರಸಕ್ತ ಚುನಾವಣೆಯ ಫಲಿತಾಂಶವು ಗೋವಾ ಭವಿಷ್ಯವನ್ನು ನಿರ್ಧರಿಸಲಿದೆ. ನೀವು ಕಾಂಗ್ರೇಸ್ ಪಕ್ಷಕ್ಕೆ 25 ವರ್ಷಗಳ ಕಾಲ ಅಧಿಕಾರ ನೀಡಿದ್ದೀರಿ. ಬಿಜೆಪಿಗೆ 15 ವರ್ಷಳ ಕಾಲ ಅಧಿಕಾರ ನೀಡಿದ್ದೀರಿ. ಆದರೆ ಈ ಎರಡೂ ಪಕ್ಷಗಳು ನಿಮ್ಮನ್ನು ನಿರಾಸೆಗೊಳಿಸಿವೆ. ಪ್ರಸಕ್ತ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ನೀಡಿ ಎಂದು ಕೇಜರಿವಾಲ್ ಗೋವಾದ ಜನತೆಯ ಬಳಿ ಮನವಿ ಮಾಡಿದರು.
ನೀವು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದರೆ ಅದು ಬಿಜೆಪಿಗೆ ಮತ ಹಾಕಿದಂತೆ ಆಗಲಿದೆ. ಇದರಿಂದಾಗಿ ಎಎಪಿಗೆ ಬಹುಮತ ನೀಡಿ. ನಾವು ಪ್ರಸಕ್ತ ಬಾರಿ ಕೆಲಸ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ನಮಗೆ ಮತಹಾಕಬೇಡಿ. ಆಮ್ ಆದ್ಮಿ ಪಕ್ಷವು ಗೋವಾಕ್ಕೆ ಮೊದಲ ಪ್ರಾಮಾಣಿಕ ಸರ್ಕಾರ ನೀಡುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದರು.
ಗೋವಾ ಸರ್ಕಾರದ 24,000 ಕೋಟಿ ಸಾಲವಿದೆ. ಇನ್ನೂ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸಲು ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಕಳೆದ 25-30 ವರ್ಷಗಳಲ್ಲಿ ಯಾವುದೇ ಹೊಸ ಶೈಕ್ಷಣಿಕ, ಆರೋಗ್ಯ ಸೌಲಭ್ಯ, ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಿಲ್ಲ. ಹಾಗಾದರೆ ಹಣ ಎಲ್ಲಿಗೆ ಹೋಗುತ್ತಿದೆ..? ಹಣ ಸಚಿವ ಜೇಬಿಗೆ ಸೇರುತ್ತಿದೆ. ಗೋವಾ ಶೀಘ್ರದಲ್ಲಿಯೇ ಅತ್ಯಂತ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಸ್ವಾಗತಿಸುತ್ತದೆ ಎಂದರು.