ನವದೆಹಲಿ: ದೆಹಲಿಯಲ್ಲಿ ಕೋವಿಡ್ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ರಾತ್ರಿ 10ಗಂಟೆಯಿಂದ ಏಪ್ರಿಲ್ 26ರವರೆಗೆ ಬೆಳಗ್ಗೆ 5ಗಂಟೆಯವರೆಗೆ ಸಂಪೂರ್ಣ ಕರ್ಫ್ಯೂ (ಲಾಕ್ ಡೌನ್) ಜಾರಿಗೊಳಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ(ಏ.19) ಘೋಷಿಸಿದ್ದಾರೆ.
ಎಲ್ಲಾ ಖಾಸಗಿ ಕಚೇರಿ, ಕಂಪನಿಗಳು ವರ್ಕ್ ಫ್ರಂ ಹೋಮ್ ಹಾಗೂ ಸರ್ಕಾರಿ ಕಚೇರಿಗಳು ಮತ್ತು ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ. ಲಾಕ್ ಡೌನ್ ನಿಂದ ಕೋವಿಡ್ ತಡೆಯಲು ಸಾಧ್ಯವಿಲ್ಲ, ಆದರೆ ಸಣ್ಣ ಅವಧಿಯ ಲಾಕ್ ಡೌನ್ ನಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
“ಇಡೀ ದೆಹಲಿ ಒಂದು ಕುಟುಂಬವಿದ್ದಂತೆ, ಈ ಸಂದರ್ಭವನ್ನು ನಾವೆಲ್ಲ ಒಟ್ಟಾಗಿ ಎದುರಿಸಬೇಕಾಗಿದೆ. ಈ ಮೊದಲು ನಾವು ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವು. ಈಗ ಮತ್ತೊಮ್ಮೆ ನಾವು ಎದುರಿಸಿ ಗೆಲ್ಲಬೇಕಾಗಿದೆ” ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿಯ ಆರೋಗ್ಯ ಕ್ಷೇತ್ರದ ವ್ಯವಸ್ಥೆ ಕಳವಳಕಾರಿಯಾಗಿದೆ. ಯಾಕೆಂದರೆ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಲಸಿಕೆ ಕೊರತೆ ಎದುರಿಸುವಂತಾಗಿದೆ. ಇದೊಂದು ಸಣ್ಣ ಅವಧಿಯ ಲಾಕ್ ಡೌನ್ ಹೇರಿಕೆಯಾಗಿದ್ದು, ವಲಸೆ ಕಾರ್ಮಿಕರು ದೆಹಲಿಯನ್ನು ಬಿಟ್ಟು ತೆರಳಬಾರದು ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ಆಹಾರ, ವೈದ್ಯಕೀಯ ಸೇರಿದಂತೆ ತುರ್ತು ಸೇವೆಗಳು ಮುಂದುವರಿಯಲಿದೆ. ಕೇವಲ 50 ಮಂದಿ ಆಹ್ವಾನಿತರೊಂದಿಗೆ ವಿವಾಹ ಕಾರ್ಯಕ್ರಮ ನಡೆಸಬಹುದಾಗಿದೆ. ವಿವರವಾದ ಮಾರ್ಗಸೂಚಿಯನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.