Advertisement
ತನ್ನ ಮೇಲೆ ಇರಿಸಿದ ಅತ್ಯುನ್ನತ ನಿರೀಕ್ಷೆಗಳನ್ನು ಹುಸಿಗೊಳಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಂತೆ ನಿರಾಶೆ ಮೂಡಿಸಿದ ಇನ್ನೊಬ್ಬ ರಾಜಕಾರಣಿ ಪ್ರಾಯಃ ನಮಗೆ ಸಿಗಲಾರರು. ತಾನೊಬ್ಬ ಆಡಳಿತಗಾರನಿಗಿಂತಲೂ ಹೆಚ್ಚಾಗಿ ಒಬ್ಬ ವಿಘ್ನದಾಯಕ ಮತ್ತು ನಕಾರಾತ್ಮಕತೆಯನ್ನೇ ಆಚರಿಸುವವನು ಎಂಬುದನ್ನು ಕೇಜ್ರಿವಾಲ್ ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ.
Related Articles
Advertisement
ದಿಲ್ಲಿ ಮುಖ್ಯಮಂತ್ರಿಯಾದ್ದರಿಂದಷ್ಟೇ ತೃಪ್ತಿಗೊಳ್ಳದ ಅರವಿಂದ ಕೇಜ್ರಿವಾಲ್ ಈಗ ರಾಷ್ಟ್ರ ರಾಜಕಾರಣದ ಮೇಲೂ ಕಣ್ಣಿಟ್ಟಿದ್ದಾರೆ. ಪಂಜಾಬ್‌ನಲ್ಲಿ ಅಧಿಕಾರಕ್ಕೇರಲು ವಿಫಲವಾದ ಬಳಿಕ ಮತ್ತು ಗೋವಾದಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಕೇಜ್ರಿವಾಲ್ ಅದಕ್ಕಾಗಿ ವಿದ್ಯುನ್ಮಾನ ಮತಯಂತ್ರಗಳನ್ನು ದೂರಿದರು. ಅದೇ ಮತಯಂತ್ರಗಳನ್ನು ಉಪಯೋಗಿಸಿ ನಡೆದ ಚುನಾವಣೆಗಳಲ್ಲಿಯೇ ತಾನು ದಿಲ್ಲಿಯಲ್ಲಿ ಒಂದಲ್ಲ, ಎರಡು ಬಾರಿ ಅಧಿಕಾರಿಕ್ಕೇರಿದ್ದನ್ನು ಮರೆತ ಮಹಾಶಯ ಇವರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಕೇಜ್ರಿವಾಲ್ ಬಗೆಗೆ ತೋರುತ್ತಿರುವ, “ದ್ವೇಷ’ ಎಂದು ಕೆಲವರು ಬಣ್ಣಿಸುವ ವರ್ತನೆಗೆ ಸ್ವತಃ ಕೇಜ್ರಿವಾಲ್ ಅವರೇ ಹೊಣೆ, ಕಾರಣ. ಅವರ ಮಾಜಿ ಕಾರ್ಯದರ್ಶಿಯನ್ನು ಸಿಬಿಐ ಭ್ರಷ್ಟಾಚಾರದ ಆರೋಪದ ಮೇರೆಗೆ ಬಂಧಿಸಿದೆ. ರಾಷ್ಟ್ರ ರಾಜಧಾನಿಯಲ್ಲೇ ಮುಖ್ಯಮಂತ್ರಿಯಾಗಿ ಕುಳಿತಿರುವ ಕೇಜ್ರಿವಾಲ್ ಅವರಂತಹ ಮಗ್ಗುಲ ಮುಳ್ಳನ್ನು ಪ್ರಾಯಃ ಈ ಸರಕಾರದಂತೆ ಇನ್ನಾéವ ಸರಕಾರವೂ ಸಹಿಸಿಕೊಳ್ಳದು. ಇಂದಿರಾರಂತಹ ದ್ವೇಷ ಸಾಧನೆಯ ಪ್ರಧಾನಿ ಇದ್ದಿದ್ದರೆ ಕೇಜ್ರಿವಾಲ್ ಎಂದೋ ಗಂಟುಮೂಟೆ ಕಟ್ಟಬೇಕಾಗಿತ್ತು. ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳನ್ನು ಅಮಾನತುಗೊಳಿಸುವುದು ಮತ್ತು ರಾಜ್ಯ ವಿಧಾನಮಂಡಲಗಳನ್ನು ವಿಸರ್ಜಿಸುವುದು ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿದ್ದ; 1994ರ ಎಸ್. ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ಹಾಕುವುದಕ್ಕೂ ಮುನ್ನಿನ ಕಾಲಘಟ್ಟದಲ್ಲಿ ಅಧಿಕಾರ ನಡೆಸಿದವರು ಇಂದಿರಾ. ಆಪ್‌ನ ಉಚ್ಛಾ†ಯ ಮತ್ತು ಅವನತಿಯ ಬಗ್ಗೆ ರಾಜಕೀಯ ವಕ್ತಾರರು ಮಾತಾಡುತ್ತಿದ್ದಾರೆ, ಬರೆಯುತ್ತಿದ್ದಾರೆ. ಆದರೂ ಅದರ ಅವನತಿಯಾಯಿತು ಎಂದು ಹೇಳುವುದು ಅವಸರದ ತೀರ್ಮಾನವಾದೀತು. ಪಂಜಾಬ್‌ನ ಸ್ಥಳೀಯ ನಾಯಕರ ಶ್ರಮದಿಂದಾಗಿ ಅಲ್ಲಿ ಆಪ್ ಪ್ರಧಾನ ವಿಪಕ್ಷವಾಗಿ ಮೂಡಿಬರಲು ಸಾಧ್ಯವಾಗಿದೆ. ಆದರೆ, ಒಂದು ವಿಭಿನ್ನ ಪಕ್ಷವಾಗಿ ಮೂಡಿಬರುವುಲ್ಲಿ ವಿಫಲವಾಗಿದೆ.
ಸ್ವಾತಂತ್ರಾéನಂತರದ ವರ್ಷಗಳಲ್ಲಿ ಕಾಂಗ್ರೆಸ್ ನಡೆದುಬಂದ ದಾರಿಯಲ್ಲಿಯೇ ಆಪ್ ಈಗ ಹಳಸಲಾರಂಭಿಸಿದೆ. ಬ್ರಿಟಿಶರು ಭಾರತವನ್ನು ತೊರೆದ ಬಳಿಕ ಅನೇಕ ರಾಜ್ಯಗಳಲ್ಲಿ ಅವಕಾಶ ವಾದಿಗಳು ಮತ್ತು ಭ್ರಷ್ಟ ರಾಜಕಾರಣಿಗಳು ಕಾಂಗ್ರೆಸ್‌ಚುಕ್ಕಾಣಿ ಹಿಡಿದರು. ಕೆಲವು ಮಹಾಭ್ರಷ್ಟ ಕಾಂಗ್ರೆಸಿಗರು ಜೈಲಿನಲಿದ್ದಾಗಲೂ ಭ್ರಷ್ಟ ವ್ಯವಹಾರಗಳಲ್ಲಿ ನಿರತರಾಗಿದ್ದರು ಎಂಬುದೀಗ ಬಹಿರಂಗವಾಗುತ್ತಿದೆ. ಇಂತಹುದೇ ನಿರಾಶೆಯನ್ನು ಜೆಪಿ ಚಳವಳಿ ಕೂಡ ಉಂಟು ಮಾಡಿತು. ಜನತಾ ಪಕ್ಷ 1978ರ ಚುನಾವಣೆಯಲ್ಲಿ ಕರ್ನಾಟಕದ ಜನತೆಯ ಮೇಲೆ ಪ್ರಭಾವ ಬೀರಲು ವಿಫಲವಾದ ಹಾಗೆಯೇ ಜೆಪಿ ಚಳವಳಿಯ ಪ್ರಭಾವ ಕೂಡ ರಾಜ್ಯದಲ್ಲಿ ಶೂನ್ಯವಾಯಿತು. ಲಾಲೂ, ಓಂ ಪ್ರಕಾಶ್ ಚೌತಾಲಾರಂತಹ ರಾಜಕಾರಣಿಗಳನ್ನು ಪ್ರವರ್ಧಮಾನಕ್ಕೆ ತಂದ ಚಳವಳಿಯ ಬಗ್ಗೆ ಇನ್ನೇನು ಹೇಳಬಹುದು? ಚೌತಾಲಾ ಹತ್ತು ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತ ಜೈಲಿನಲ್ಲಿದ್ದಾರೆ, ಬಿಹಾರದ ಯಾದವ ನಾಯಕ ಮೇವು ಹಗರಣದಲ್ಲಿ ಅಂತಿಮ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಮೊರಾರ್ಜಿ ದೇಸಾಯಿ ಅವರನ್ನು ಪಕ್ಕಕ್ಕೆ ತಳ್ಳಿ ತಾನು ಪ್ರಧಾನಿಯಾಗಬೇಕು ಎನ್ನುವ ಚರಣ್ ಸಿಂಗ್‌ರ ಅಸೂಯೆ ಕೇಂದ್ರದಲ್ಲಿ ಜನತಾ ಪಕ್ಷವನ್ನು ವಿಚ್ಛಿನ್ನಗೊಳಿಸಿತು. ದಿಲ್ಲಿಯ ಫ್ರೀಡಮ್ ಪಾರ್ಕ್‌ಗೆ ಲಕ್ಷಾಂತರ ಸಂಖ್ಯೆ ಮುನ್ನುಗ್ಗುತ್ತಿದ್ದ ಯುವಸಮೂಹದ ನೆನಪಾಗುತ್ತಿದೆ; ಕೇಜ್ರಿವಾಲ್ ಅವರನ್ನೆಲ್ಲ ನಿರಾಶೆಗೊಳಿಸಿದ್ದಾರೆ. ಕಿವಿಯೋಲೆಗಳು ಆಭರಣಗಳೇ ಆಯುಧಗಳೇ?: ನೀಟ್ ಬರೆಯುವ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ವಿಧಿಸಿದ ಅಧಿಕಾರಿಗಳ ವಿರುದ್ಧ ಭಾರತ ಸರಕಾರ ಕಠಿನ ಕ್ರಮವನ್ನು ತೆಗೆದುಕೊಳ್ಳಲೇಬೇಕು. ಈ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿನಿಯರು ಕಿವಿಯೋಲೆಗಳನ್ನು ತೆಗೆದಿಡಬೇಕೆಂದು ವಿಧಿಸಿರು ವುದು ವಿವೇಚನಾರಹಿತ. ಕಿವಿಯೋಲೆ ಧರಿಸಿದ ಮಾತ್ರಕ್ಕೆ ವಿದ್ಯಾರ್ಥಿನಿ ನಕಲು ಹೊಡೆಯುತ್ತಾಳೆ ಅಥವಾ ಭದ್ರತೆಗೆ ಅಪಾಯಕಾರಿಯಾಗುತ್ತಾಳೆ ಎಂದು ಸಾಮಾನ್ಯ ಜ್ಞಾನ ಇರುವ ಯಾರಾದರೂ ಅನುಮಾನಿಸಬಹುದೇ? ಕಿವಿಯೋಲೆಗಳು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ಸೈನಿಕರ ವಿರುದ್ಧ ಪಾಕಿಸ್ಥಾನ ಪರ ವಿದ್ಯಾರ್ಥಿನಿಯರು ಎಸೆಯುವ ಕಲ್ಲುಗಳಷ್ಟು ಮಾರಕವೇ?! ಅರಕೆರೆ ಜಯರಾಮ್