Advertisement

ಮಕ್ಕಳ ಬಗ್ಗೆ ನಿಗಾ ಇರಲಿ

09:44 PM Sep 13, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಅನ್ಯ ಕಾರಣಗಳಿಗೆ ಮನೆ ಬಿಟ್ಟು ಓಡಿ ಬರುವ ಅಥವಾ ಪತ್ತೆಯಾಗಿ ಪಾಲನಾ ಕೇಂದ್ರಕ್ಕೆ ಬರುವ ಮಕ್ಕಳ ಬಗ್ಗೆ ಪಾಲನಾ ಕೇಂದ್ರದ ಸಿಬ್ಬಂದಿ ಹಾಗೂ ಮುಖ್ಯಸ್ಥರು ತೀವ್ರ ನಿಗಾ ವಹಿಸಿ ಮಕ್ಕಳ ಯೋಗಕ್ಷೇಮದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಜಿ.ಕೆ.ಲಕ್ಷ್ಮೀದೇವಮ್ಮ ತಿಳಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೂ ಆಪ್ತ ಸಮಾಲೋಚಕರು ಹಾಗೂ ಸಮಾಜ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚ್ಯುತಿ ಬರದಂತೆ ನಿರ್ವಹಿಸಿ: ಪಾಲನಾ ಕೇಂದ್ರಗಳು ಹೆಸರಿಗಷ್ಟೆ ಸೀಮಿತವಾಗದೇ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಪಾಲನಾ ಕೇಂದ್ರಗಳಲ್ಲಿ ಸಾಕಷ್ಟು ಅವ್ಯವಸ್ಥೆಗಳು ಕಂಡು ಬರುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ಕೆಲಸ ಮಾಡಬೇಕೆಂದರು.

ಚಲನವಲನ ಗಮನಿಸಿ: ಮಕ್ಕಳ ಆರೋಗ್ಯದ ಕಡೆಗೆ ಕಾಳಜಿ ವಹಿಸಿ ಕಾಲಕಾಲಕ್ಕೆ ತಜ್ಞ ವೈದ್ಯರೊಂದಿಗೆ ಕರೆ ತಂದು ಆರೋಗ್ಯ ಪರೀಕ್ಷೆ ಮಾಡಿಸಬೇಕು. ಮಗುವಿನ ಚಲನವಲನ, ಸ್ವಭಾವ, ನಡವಳಿಕೆ, ಆರೋಗ್ಯ ಸ್ಥಿತಿ, ಶಾಲೆಯ ನಿಯಮಾನುಸಾರ ದಾಖಲೆ, ಶಿಕ್ಷಣದ ಬಗ್ಗೆ ಪ್ರಗತಿ ಕುರಿತು ಬರೆದಿಡಬೇಕೆಂದರು.

ಅನುಮತಿ ರದ್ದು ಎಚ್ಚರಿಕೆ: ಮಕ್ಕಳಿಗೆ ಕೇಂದ್ರದಲ್ಲಿ ಗುಣಮಟ್ಟದ ಆಹಾರ ವಿತರಿಸಬೇಕು, ಸ್ವತ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಿ ಶುದ್ಧ ಕುಡಿಯುವ ನೀರು ಒದಗಿಸಬೇಕು. ಬೇಸಿಗೆ, ಚಳಿಗಾಲಕ್ಕೆ ತಕ್ಕಂತೆ ಮಕ್ಕಳಿಗೆ ಉಡುಪುಗಳನ್ನು ನೀಡಬೇಕು, ಸ್ನಾನಕ್ಕೆ ಬಿಸಿ ನೀರು ಕಲ್ಪಿಸಬೇಕು. ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು ಎಂದರು.

Advertisement

ಪ್ರತಿ ತಿಂಗಳು ಮಕ್ಕಳ ತೂಕ, ಎತ್ತರವನ್ನು ದಾಖಲಿಸಬೇಕು, ಪೌಷ್ಠಿಕಾಂಶವುಳ್ಳ ಆಹಾರ ನೀಡಬೇಕು. ಇಲಾಖೆ ನೀಡುವ ಮಾರ್ಗಸೂಚಿಯನ್ನು ತಪ್ಪದೇ ಪಾಲನಾ ಕೇಂದ್ರಗಳು ಪಾಲಿಸಬೇಕು. ಯಾವುದೇ ವ್ಯತಾಸ ಕಂಡು ಬಂದರೂ ಪಾಲನಾ ಕೇಂದ್ರಗಳಿಗೆ ನೀಡಿರುವ ಅನುಮತಿ ರದ್ದುಗೊಳಿಸಲಾಗುವುದು ಎಂದು ಉಪ ನಿರ್ದೇಶಕಿ ಲಕ್ಷ್ಮೀದೇವಮ್ಮ ಎಚ್ಚರಿಕೆ ನೀಡಿದರು.

ಪಾಲನಾ ಕೇಂದ್ರಗಳಿಗೆ ದಾಖಲಾಗುವ ಮಕ್ಕಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರಬೇಕು. ಕೇಂದ್ರಗಳಿಂದ ಮಕ್ಕಳು ತಪ್ಪಿಸಿಕೊಂಡರೆ ಅಥವಾ ಓಡಿ ಹೋದರೆ ತಕ್ಷಣ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಬೇಕು. ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೂ ಆಪ್ತ ಸಮಾಲೋಚಕರು ಹಾಗೂ ಸಮಾಜ ಕಾರ್ಯಕರ್ತರಿಗೆ ಜಿಲ್ಲಾಸ್ಪತ್ರೆಯ ಮನೋ ವೈದ್ಯರಾದ ಡಾ.ಕಿಶೋರ್‌ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಾಲಗಂಗಾಧರ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೊಹಮ್ಮದ್‌ ಉಸ್ಮಾನ್‌, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎಂ.ಜಿ.ಗೋಪಾಲ್‌, ಮಂಜುನಾಥ ಉಪಸ್ಥಿತರಿದ್ದರು

ಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಯಾವುದೇ ರೀತಿ ಕಠಿಣ ಶಿಕ್ಷೆ ಕೊಡಬಾರದು. ಮಕ್ಕಳಿಂದ ಕಠಿಣ ಕೆಲಸಗಳನ್ನು ಮಾಡಿಸಬಾರದು. ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದರೆ ಅದು ಜೀವನದ ಕೌಶಲ್ಯಕ್ಕೆ ಪೂರಕವಾಗಿರಬೇಕು. ಪ್ರತಿ ಹಂತದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಪಾಲನಾ ಕೇಂದ್ರದ ಸಿಬ್ಬಂದಿ, ಮುಖ್ಯಸ್ಥರು ಶ್ರಮಿಸಬೇಕು.
-ಜಿ.ಕೆ.ಲಕ್ಷ್ಮೀದೇವಮ್ಮ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next