Advertisement

ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ

09:32 PM May 13, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು, ಗ್ರಾಮೀಣ ಭಾಗದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಕೃಷಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಕಡೆ ಇನ್ನೂ ಸಮರ್ಪಕವಾದ ಮಳೆ ಸುರಿದಿಲ್ಲ. ಹಾಗಾಗಿ ಅಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆ ಎಂದರು.

ವಿಶೇಷ ಗಮನ ನೀಡಿ: ಅಭಾವ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗಬಾರದು. ಅತ್ಯಂತ ಪ್ರಮುಖವಾಗಿರುವ ನೀರು ಪೂರೈಕೆಗೆ ವಿಶೇಷ ಗಮನ ನೀಡಬೇಕು. ಪಟ್ಟಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಬಾರದು. ಈ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಸಮರ್ಪಕವಾಗಿ ಅಧಿಕಾರಿಗಳು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.

ವಿವರ ಪಡೆದ ಕಟಾರಿಯಾ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಷ್ಟು ಪ್ರಮಾಣದಲ್ಲಿ ಜನರನ್ನು ತಲುಪುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಯವರು ಉಳಿದ ಪ್ರದೇಶಗಳಲ್ಲಿ ನೀರಿನ ನಿರ್ವಹಣೆ ಹೇಗೆ ನಡೆಸಲಾಗುತ್ತಿದೆ ಎಂಬ ಬಗ್ಗೆ ವಿವರ ಪಡೆದುಕೊಂಡರು.

ಮುಂಜಾಗ್ರತೆ ವಹಿಸಿ: ಜಾನುವಾರುಗಳಿಗೆ ಮೇವು ಯಾವ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂಬ ಬಗ್ಗೆ ತಾಲೂಕುವಾರು ಪರಾಮರ್ಶೆ ನಡೆಸಿದರು. ಎಷ್ಟು ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹಣೆಯಿದೆ. ಕೊರತೆ ಕಂಡುಬಂದರೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂಬ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು. ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ, ಮೇವಿನ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

Advertisement

ಜಮೀನುಗಳಿಗೆ ಭೇಟಿ ನೀಡಿದ್ದೇವೆ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಪ್ರಸ್ತುತ ಮೇವಿಗೆ ಯಾವುದೇ ಕೊರತೆ ಕಂಡುಬಂದಿಲ್ಲ. ಮೇವು ದಾಸ್ತಾನಿಗೆ ಅಗತ್ಯ ಕ್ರಮ ವಹಿಸಲಾಗಿದೆ. ಕುಡಿಯುವ ನೀರು ಸಮಸ್ಯೆ ಪರಿಹರಿಸಲಾಗುತ್ತಿದೆ. ಇತ್ತೀಚೆಗೆ ಮಳೆಯಿಂದ ಹಾನಿಗೀಡಾದ ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಕೊಳ್ಳೇಗಾಲ ತಾಲೂಕಿನ ವಿವಿಧ ಪ್ರದೇಶ ಹಾಗೂ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನಷ್ಟದ ಪ್ರಮಾಣವನ್ನು ವೀಕ್ಷಿಸಲಾಗಿದೆ. ಪರಿಹಾರ ಕ್ರಮಗಳ ಸಂಬಂಧ ಅಗತ್ಯ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಪ್ರಗತಿಗೆ ಗಮನ ಹರಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಮಾತನಾಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ದೊರಕಬೇಕು. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಬೇಕು. ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಪ್ರಮುಖ ಇಲಾಖೆಗಳು ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಪ್ರಗತಿಗೆ ಗಮನ ನೀಡಬೇಕೆಂದು ನಿರ್ದೇಶನ ನೀಡಿದರು.

ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ತಾಲೂಕುಮಟ್ಟದಲ್ಲಿ ಟಾಸ್ಕ್ಫೋರ್ಸ್‌ ಸಭೆಗಳನ್ನು ತಪ್ಪದೇ ಕರೆಯಬೇಕು. ಯಾವುದೇ ಸಮಸ್ಯೆಗಳಿದ್ದರೂ ಸ್ಥಳೀಯವಾಗಿ ಪರಿಹರಿಸಿಕೊಳ್ಳಬೇಕು. ಬರ ಪರಿಹಾರ ಕ್ರಮಗಳಿಗೆ ವಿಳಂಬ ಧೋರಣೆ ಅನುಸರಿಸದೆ ಹೊಣೆಗಾರಿಕೆಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಪ್ರಗತಿ ಪರಿಶೀಲನೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಇಲಾಖೆಗೆ ಗುರಿ ನಿಗದಿ ಮಾಡಲಾಗಿದೆ. ಸಮುದಾಯ ಕಾಮಗಾರಿ ನಿರ್ವಹಣೆಗೂ ಒತ್ತು ನೀಡಲಾಗಿದೆ. ಕಾಲಕಾಲಕ್ಕೆ ಯೋಜನೆ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಉಪವಿಭಾಗಾಧಿಕಾರಿ ಎಂ. ನಿಖೀತಾ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next