Advertisement

ಬೀಜ-ಗೊಬ್ಬರ ಕೊರತೆ ಬರದಂತೆ ನೋಡಿಕೊಳ್ಳಿ

01:20 PM Jun 06, 2017 | Team Udayavani |

ಧಾರವಾಡ: ಮುಂಗಾರು ಹಂಗಾಮಿನಲ್ಲಿ ಬೀಜ, ಗೊಬ್ಬರಗಳ ಕೊರತೆ ಎದುರಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಹಾಗೂ ಇಒ ಜೆ.ಡಿ.ಜೋಶಿ ತಾಕೀತು ಮಾಡಿದರು. ಇಲ್ಲಿಯ ಧಾರವಾಡ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

Advertisement

ಮುಂಗಾರು ಹಂಗಾಮಿನ ತಯಾರಿ, ಮಳೆಯ ಮಾಹಿತಿ ಪಡೆದು ಕಳಪೆ ಬೀಜಗಳ ಕುರಿತು ಸಮಗ್ರವಾಗಿ ಪರಿಶೀಲನೆ ಕೈಗೊಳ್ಳಬೇಕು. ಅಂತಹ ಬೀಜಗಳ ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತ ಕೇಂದ್ರಗಳಲ್ಲಿ ದಾಸ್ತಾನಾಗಿರುವ ಬೀಜ, ಗೊಬ್ಬರಗಳ ಕುರಿತ ಸಮಗ್ರ ಮಾಹಿತಿಯನ್ನು ಎಲ್ಲ ಗ್ರಾಮಗಳಲ್ಲಿ ಸರಿಯಾಗಿ ಪ್ರಚಾರ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ವಾಡಿಕೆಯಂತೆ ತಾಲೂಕಿನಲ್ಲಿ 143.5 ಮಳೆ ಆಗಬೇಕಿತ್ತು. ಆದರೆ 75.4 ಮಾತ್ರ ಆಗಿದೆ. ಈ ಮಳೆ ಬಿತ್ತನೆಗೆ ಉಪಯೋಗವಾಗುವುದಿಲ್ಲ. ಸದ್ಯ 200 ಹೆಕ್ಟೇರ್‌ ನೀರಾವರಿ ಭೂಮಿಯಲ್ಲಿ ಮಾತ್ರ ಬಿತ್ತನೆಯಾಗಿದೆ. ಧಾರವಾಡ, ಗರಗ, ನರೇಂದ್ರ, ಅಳ್ನಾವರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೀಜ ದಾಸ್ತಾನು ಕೇಂದ್ರಗಳನ್ನು ಆರಂಭಿಸಲಾಗಿದೆ. 

ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಬೀಜಗಳ ಕೊರತೆ ಇಲ್ಲ. ಇದಲ್ಲದೇ ಮನಗುಂಡಿ ಗ್ರಾಮದಲ್ಲಿ ಹೆಚ್ಚುವರಿ ಮಾರಾಟ ಕೇಂದ್ರವನ್ನೂ ಆರಂಭಿಸಲಾಗಿದೆ. ಈ ಬಾರಿ ಮಧ್ಯಪ್ರದೇಶದಿಂದ ಸುಮಾರು 6 ಸಾವಿರ ಟನ್‌ ಸೋಯಾಬಿನ್‌ ಬೀಜ ಸರಬರಾಜು ಮಾಡಿಕೊಂಡು ರೈತರಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಕೆ. ಹಿರೇಮಠ ಸಭೆಗೆ ಮಾಹಿತಿ ನೀಡಿದರು.  

ಅಧಿಕಾರಿಗೆ ತರಾಟೆ: ಮಾಹಿತಿ ನೀಡಲು ಬಂದ ಭೂ ಸೇನಾ ನಿಗಮದ ಅಧಿಕಾರಿಯನ್ನು ತಾಪಂ ಅಧ್ಯಕ್ಷರು ಹಾಗೂ ಇಒ ತರಾಟೆಗೆ ತೆಗೆದುಕೊಂಡರು. ನೀವು ಸ್ಥಾಪಿಸಿದ ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಿಮ್ಮ ಇಲಾಖೆಯಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ. ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಇದು ನಿಮಗೆ ಅಂತಿಮ ಗಡುವು.

Advertisement

ಮುಂದಿನ ಸಭೆಯಲ್ಲಿ ಘಟಕಗಳ ಬಗ್ಗೆ ಸದಸ್ಯರಿಂದ ದೂರು ಬರದಂತೆ ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದರು. ಕೆಎಸ್‌ಆರ್‌ಟಿ ಡಿಪೋ ವ್ಯವಸ್ಥಾಪಕರು ಸಭೆಗೆ ತಮ್ಮ ಕೆಳ ಅಧಿಕಾರಿಯನ್ನು ಕಳುಹಿಸಿದ ಮಾಹಿತಿ ತಿಳಿದ ಇಒ ಜೋಶಿ, ಸಭೆಗೆ ವ್ಯವಸ್ಥಾಪಕರು ಬರಬೇಕು. ಈ ಹಿಂದೆನೂ ಇದೇ ರೀತಿ ಮಾಡಿದ್ದರು. 

ಸಭೆಗೆ ಬಂದವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಎಲ್ಲ ಇಲಾಖೆ ಅಧಿಕಾರಿಗಳು ಇದೇ ರೀತಿ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಮಹತ್ವದ ವಿಷಯಗಳನ್ನು ಚರ್ಚಿಸಲು ಸಭೆ ನಡೆಸುತ್ತೇವೆ ಹೊರತು ಮೋಜು ಮಾಡಲು ಅಲ್ಲ. ಮುಂದಿನ ಸಭೆಗೆ ಸರಿಯಾಗಿ ಹಾಜರಾಗುವಂತೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಿದರು.  

ವಾಟ್ಸ್‌ ಆ್ಯಪ್‌ ಗ್ರುಪ್‌ ರಚನೆ: ತಾ.ಪಂ. ಕೆಡಿಪಿ ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ. ಇದು ಕಾಟಾಚಾರಕ್ಕೆ ನಡೆಯುವ ಸಭೆಯಲ್ಲ ಎಂಬುದಾಗಿ ಎಚ್ಚರಿಸಿದ ತಹಶೀಲ್ದಾರ ಪ್ರಕಾಶ ಕುದರಿ, ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಒಂದು ವಾಟ್ಸ್‌ಆ್ಯಪ್‌ ಗ್ರುಪ್‌ ರಚನೆ ಮಾಡಲಾಗುತ್ತಿದ್ದು, ಆ ಮೂಲಕ ತಾಲೂಕಿನ ಸಮಸ್ಯೆ ಹಾಗೂ ಬೇಕು ಬೇಡಗಳ ಪರಿಶೀಲನೆ ನಡೆಯಲಿದೆ ಎಂದರು.

ಇನ್ನೇನು ರೈತರು ಬಿತ್ತನೆ ಪ್ರಕ್ರಿಯೆಯಲ್ಲಿ ತೊಡಗಲಿದ್ದು, ಎಲ್ಲೆಡೆ ಬೀಜ-ಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಈ ಪ್ರಯತ್ನಕ್ಕೆ ಕೈಜೋಡಿಸಬೇಕಿದ್ದು, ಯಾವುದೇ ಕಾರಣಕ್ಕೂ ತಮ್ಮ ಮೊಬೈಲ್‌ಗ‌ಳನ್ನು ಸ್ವೀಚ್‌ಆಪ್‌ ಮಾಡಬಾರದೆಂದು ಎಚ್ಚರಿಕೆ ನೀಡಿದರು. ಅಳ್ನಾವರದಲ್ಲಿ ವಿದ್ಯಾರ್ಥಿನಿಯರಿಗೆ ನಿರ್ಮಿಸಿರುವ ಹಾಸ್ಟೆಲ್‌ ಕಾಮಗಾರಿ ಪೂರ್ಣಗೊಂಡು 8-10 ತಿಂಗಳು ಕಳೆದರೂ ಅದನ್ನು ಬಳಕೆಗೆ ನೀಡುತ್ತಿಲ್ಲ. 

ಕೂಡಲೇ ಅಧಿಕಾರಿಗಳು ಅಲ್ಲಿನ ಸಮಸ್ಯೆಯನ್ನು ಅರಿತು ಆದಷ್ಟು ಬೇಗ ಅದನ್ನು ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು. ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ತಾಲೂಕಿನಾದ್ಯಂತ ಹೆಚ್ಚು ಪ್ರಚಾರ ಪಡಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬೇಕಿದೆ.ಈ ವಿಷಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಬಿಇಒ, ಹೆಸ್ಕಾಂ ಸೇರಿದಂತೆ ಎಲ್ಲ ಗ್ರಾಪಂ, ತಾಪಂ ಸದಸ್ಯರು ಹಾಗೂ ಅಧಿಕಾರಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾತನಾಡಿ, ಬಿಪಿಎಲ್‌ ಕಾರ್ಡ್‌ ಇದ್ದವರಿಗೆ ಮಾತ್ರ ಭಾಗ್ಯಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲು ಸಾಧ್ಯ.  ಆದರೆ ಬಿಪಿಎಲ್‌ ಕಾರ್ಡ್‌ಗಳ ವಿತರಣೆ ಸ್ಥಗಿತವಾಗಿರುವ ಕಾರಣದಿಂದ  ಕೆಲ ಫ‌ಲಾನುಭವಿಗಳು ಇದರ ಲಾಭ ಪಡೆಯಲು ಸಾಧ್ಯವಾಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. 

ಶಿಕ್ಷಣ ಇಲಾಖೆ ಅಧಿಕಾರಿ ಮಾತನಾಡಿ, ಯೂನಿಫಾರ್ಮ್, ಪಠ್ಯಪುಸ್ತಕಗಳು ಹಾಗೂ ಸೈಕಲ್‌ಗ‌ಳು ಈಗಾಗಲೇ ಬಂದಿವೆ. ಈ ವಾರದಲ್ಲಿ ಎಲ್ಲ ಶಾಲೆಗಳಿಗೂ ತಲುಪಿಸಲಾಗುವುದು ಎಂದರು. ಉಳಿದಂತೆ ತೋಟಗಾರಿಕೆ,  ಲೋಕೋಪಯೋಗಿ, ಸಣ್ಣ ನೀರಾವರಿ, ರೇಶೆ, ಆರೋಗ್ಯ, ಹೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದರು.   

Advertisement

Udayavani is now on Telegram. Click here to join our channel and stay updated with the latest news.

Next