Advertisement
ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ವಾಹನ ಚಾಲಕರು ಗ್ಯಾಸ್ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ದಸರಾ ರಜೆ ನಿಮಿತ್ತ ರಾಜ್ಯದ ಬೇರೆ ಬೇರೆ ಭಾಗದ ಜನರು ದೊಡ್ಡ ಮಟ್ಟದಲ್ಲಿ ಪ್ರವಾಸಕ್ಕಾಗಿ ಕರಾವಳಿಗೆ ಬಂದಿದ್ದು ಕಾರಣ ಎನ್ನಲಾಗುತ್ತಿದೆ. ಬೇರೆ ಬೇರೆ ಭಾಗಗಳಿಂದ ಬಂದವರು ಇಲ್ಲಿ ಅನಿಲ ತುಂಬಿಕೊಳ್ಳುತ್ತಿರು ವುದರಿಂದ ಮೊದಲೇ ಕಡಿಮೆ ಪ್ರಮಾಣದಲ್ಲಿರುವ ಅನಿಲ ನಿತ್ಯ ಬಳಕೆದಾರರಿಗೆ ಸಿಗದೆ ಸಮಸ್ಯೆಯಾಗಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋಟೇಶ್ವರ, ದೊಡ್ಡಣಗುಡ್ಡೆ, ಬ್ರಹ್ಮಾವರ, ಪಡುಬಿದ್ರೆ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಸಿಎನ್‌ಜಿ ಕೇಂದ್ರಗಳಿವೆ. ಇರುವಂತಹ ಬಹುತೇಕ ಎಲ್ಲ ಸಿಎನ್‌ಜಿ ಬಂಕ್‌ಗಳಲ್ಲಿ ಬೇಡಿಕೆಯಷ್ಟು ಪೂರೈಕೆ ಆಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಅದರ ಜತೆಗೆ ಸಿಎನ್‌ಜಿ ಗ್ಯಾಸ್ ಬಳಸುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ರಿಕ್ಷಾ ಚಾಲಕರ ಪರದಾಟ
ಸಿಎನ್‌ಜಿ ಗ್ಯಾಸ್ ಅಲಭ್ಯತೆಯಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗುವುದು ಜೀವನ ನಿರ್ವಹಣೆಗಾಗಿ ಆಟೋಗಳನ್ನೇ ನಂಬಿರುವ ಚಾಲಕರು. ಅವರು ಒಂದು ಟ್ಯಾಂಕ್ ತುಂಬಿಸಿಕೊಳ್ಳುವುದಕ್ಕಾಗಿ ಕನಿಷ್ಠ 3-4 ಗಂಟೆ ಬಂಕ್‌ಗಳ ಮುಂದೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಕೆಲವೊಮ್ಮೆ ಅವರಿಗೆ ಒಂದು ಬಂಕ್‌ನಲ್ಲಿ ಅನಿಲ ಸಿಗದೆ ಕೊನೆಗೆ ಇನ್ನೊಂದು ಬಂಕ್‌ಗೆ ಓಡುವ ಸ್ಥಿತಿ ಬಂದಿದೆ. ಅಲ್ಲಿಯೂ ಸಿಗದೆ ನಿರಾಶರಾಗಿದ್ದೂ ಇದೆ. ದಿನದ 5-6 ಗಂಟೆ ಬಾಡಿಗೆ ಮಾಡಿ, 3-4 ಗಂಟೆ ಗ್ಯಾಸಿಗೆ ಕಾಯುವ ಸ್ಥಿತಿ ಅವರದ್ದು. ಕೆಲವರು ಹಗಲಿನ ಹೊತ್ತು ಬಾಡಿಗೆ ನಷ್ಟವಾಗುವ ಆತಂಕದಿಂದ ಬೆಳಗಿನ ಜಾವ, ರಾತ್ರಿ ಹೊತ್ತು ತಾಸುಗಟ್ಟಲೆ ಕಾಯುತ್ತಿದ್ದಾರೆ.
Related Articles
ಕಳೆದು ಹಲವು ದಿನಗಳಿಂದ ಮಲ್ಪೆಯ ಸಿಎನ್‌ಜಿ ಕೇಂದ್ರದ ಬಳಿ ರಿಕ್ಷಾಗಳ ಸಾಲು ಕಂಡು ಬರುತ್ತಿದೆ. ಪ್ರತಿದಿನ 2-3 ಲೋಡ್‌ಗಳು ಪೂರೈಕೆಯಾಗುತ್ತಿದೆ. ಅದು ಬಂದಷ್ಟೆ ಬೇಗ ಖಾಲಿಯಾಗುತ್ತದೆ. ಹಾಗಾಗಿ ಬರುವ ಲೋಡ್‌ಗಳನ್ನೇ ಕಾಯುತ್ತಾ ಇರುವ ರಿಕ್ಷಾಗಳ ಸಾಲು ಈಗ ಮಾಮೂಲಿಯಾಗಿದೆ. ರಿಕ್ಷಾಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಸಮೀಪದ ಅಂಗಡಿಗಳಿಗೆ ತೊಂದರೆ ಉಂಟಾದರೆ, ಇತ್ತ ರಸ್ತೆಯ ಸಂಚಾರ, ಪಾದಚಾರಿಗಳಿಗೂ ಕೂಡ ಸಮಸ್ಯೆಯನ್ನು ತಂದೊಡ್ಡುತ್ತಿದೆ.
Advertisement
ಪ್ರವಾಸಿ ವಾಹನಗಳ ಹೆಚ್ಚಳ ಕಾರಣನವರಾತ್ರಿಯಿಂದ ಆರಂಭಗೊಂಡು ಹೊಸ ವರ್ಷದವರೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸಿಗರ ವಾಹನಗಳು ಜಿಲ್ಲೆಯಲ್ಲಿ ಇಂಧನ ಭರ್ತಿ ಮಾಡಿಕೊಳ್ಳುವುದರಿಂದ ಸ್ಥಳೀಯ ವಾಹನಗಳಿಗೆ ಇಂಧನದ ಕೊರತೆ ಉಂಟಾಗಿದೆ. ಜತೆಗೆ ಆಟೋ ರಿಕ್ಷಾ ಬಾಡಿಗೆ ಹತ್ತುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂಧನ ಬಳಕೆ ಹೆಚ್ಚಾಗಿದೆ. ಇದೀಗ ಎಲ್ಲ ವಾಹನಗಳು ಸಿಎನ್‌ಜಿ ಬಳಸುವುದರಿಂದ ಹೆಚ್ಚುವರಿ ಬಂಕ್‌ಗಳಲ್ಲಿ ತೆರೆಯಬೇಕಾಗಿದೆ ಎನ್ನುತ್ತಾರೆ ಮಲ್ಪೆ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಹರೀಶ್ ಸಾಲ್ಯಾನ್. ಎಲ್ಲ ಬಂಕ್‌ಗಳಲ್ಲಿ ಸಿಎನ್‌ಜಿ ಸಿಗಲಿ
ವಾಹನಗಳು ಇಂಧನ ತುಂಬಿಸಿಕೊಳ್ಳಲು ವಾಹನಗಳು ಒಂದೇ ಕಡೆ ಸೇರುವುದರಿಂದ ರಸ್ತೆಯಲ್ಲಿ ಇತರ ವಾಹನಗಳಿಗೆ, ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ರಿಕ್ಷಾ ಚಾಲಕರು ಬಾಡಿಗೆಯನ್ನು ಬಿಟ್ಟು ಇಂಧನಕ್ಕಾಗಿ ಕಾಯುವ ಆನಿವಾರ್ಯತೆ ಉಂಟಾಗಿದೆ. ಸರಕಾರ ಜಿಲ್ಲೆಯ ಪ್ರತಿಯೊಂದು ಬಂಕ್‌ಗಳಲ್ಲಿ ಸಿಎನ್‌ಜಿ ಇಂಧನ ಕೇಂದ್ರವನ್ನು ಸ್ಥಾಪನೆ ಮಾಡಬೇಕಾಗಿದೆ.
-ಪ್ರಕಾಶ್ ಎಂ. ಕಲ್ಮಾಡಿ, ಅಧ್ಯಕ್ಷರು, ಮಲ್ಪೆ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ