ಬೆಳಗಾವಿ: ಲೋಕಮಾನ್ಯ ಟಿಳಕರ ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆ ಬೆಳಗಾವಿ ನೆಲದಿಂದಲೇ ಮೊಳಗಿದೆ ಎಂದು ಮಾಜಿ ಶಾಸಕ, ಸ್ವಾತಂತ್ರ್ಯ ಹೋರಾಟಗಾರ ಪರುಶರಾಮಭಾವು ನಂದಿಹಳ್ಳಿ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಘಟಕ ಹಾಗೂ ಕಾಂಗ್ರೆಸ್ ಸೇವಾದಳ ವತಿಯಿಂದ ನಡೆದ ಕ್ವಿಟ್ ಇಂಡಿಯಾ ಚಳವಳಿಯ 76ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಬೆಳಗಾವಿಯ ಕಂಗ್ರಾಳಗಲ್ಲಿ ಬಳಿಯ ವಿಶಾಲ ಖುಲ್ಲಾ ಜಾಗದಲ್ಲಿ ಆಗ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮಕ್ಕೆ ಲೋಕಮಾನ್ಯ ಟಿಳಕರು ಆಗಮಿಸಿದ್ದರು. ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆ ಕೂಗುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಭಾಷ್ಯ ಬರೆದಿದ್ದರು. ಆದರೆ ಈ ಘೋಷಣೆ ಮಾತ್ರ ಉಳಿದುಕೊಂಡಿದೆ. ಆದರೆ ಇದು ಬೆಳಗಾವಿ ನೆಲದಿಂದಲೇ ಮೊಳಗಿದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ ಎಂದರು. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪ್ರತಿಯೊಬ್ಬ ಯುವಕರು ತಿಳಿದುಕೊಳ್ಳಬೇಕು. ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಎಷ್ಟೋ ಮಹಾನ್ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಜೀವನ ಚರಿತ್ರೆ ಓದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ ಯಾಳಗಿ ಮಾತನಾಡಿ, ಚಲೇಜಾವ್ ಚಳವಳಿ ಮೂಲಕ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಯುವಕರಲ್ಲಿ ಹೊಸ ಹುರುಪ ಮೂಡಿತ್ತು. ಪ್ರತಿಯೊಬ್ಬ ಭಾರತೀಯರು ಈ ಹೋರಾಟದ ಮೂಲಕ ಬ್ರಿಟಿಷರಿಗೆ ನಡುಕ ಹುಟ್ಟಿಸಿದರು. ಈ ಎಲ್ಲ ಹೋರಾಟಗಳು ಇಂದಿನ ಯುವ ಪೀಳಿಗೆಗೆ ಗೊತ್ತಾಗಬೇಕು. ಆ. 9ನೇ ತಾರೀಖು ಚಲೇಜಾವ್ ಚಳವಳಿಯನ್ನು ನೆನಪಿಸಲು ಕ್ರಾಂತಿ ದಿನವನ್ನಾಗಿ ಆಚರಿಸುತ್ತಿರುವ ಕಾಂಗ್ರೆಸ್‌ನ ಕಾರ್ಯ ಮೆಚ್ಚುವಂಥದ್ದು ಎಂದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ಪರುಶರಾಮಭಾವು ನಂದಿಹಳ್ಳಿ, ವಿಠಲರಾವ ಯಾಳಗಿ ಹಾಗೂ ಶಿವಾಜಿರಾವ ಕದಂ ಅವರನ್ನು ಸತ್ಕರಿಸಲಾಯಿತು.
ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲಪ್ಪ ಮುರಗೋಡ, ಮೂಡಲಗಿಯ ಸುಭಾಷ ಸೋನವಾಲಕರ, ಪ್ರಕಾಶ ದೇಶಪಾಂಡೆ, ಮೋಹನ ರಡ್ಡಿ, ಅರವಿಂದ ದಳವಾಯಿ, ರಾಜಾಸಲೀಮ ಕಾಶೀಮನವರ, ಸಂತೋಷ ಹಂಜಿ, ಕಾರ್ತಿಕ ಪಾಟೀಲ, ಬಾಳೇಶ ದಾಸನಟ್ಟಿ, ಮಲ್ಲೇಶ ಚೌಗಲೆ, ಲತಾ ಅನಾಸಕರ, ಮೀನಾಕ್ಷಿ ನೆಳಗಲಿ ಸೇರಿದಂತೆ ಇತರರು ಇದ್ದರು. ನಂತರ ಕಾಂಗ್ರೆಸ್ ಕಚೇರಿಯಿಂದ ಕ್ಲಬ್ ರಸ್ತೆ ಮೂಲಕ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಹಾಗೂ ಸೇವಾದಳ ಕಾರ್ಯಕರ್ತರು ಹಿಂಡಲಗಾ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಹುತಾತ್ಮ ಚೌಕ್ ಎಂಇಎಸ್‌ದ್ದಲ್ಲ ನಗರದ ಮಧ್ಯ ಭಾಗದಲ್ಲಿರುವ ಹುತಾತ್ಮಚೌಕ ಎಂಇಎಸ್‌ನವರು ಆಕ್ರಮಿಸಿಕೊಂಡು ತಮ್ಮವರೇ ಹುತಾತ್ಮರು ಎಂಬುದನ್ನು ಬಿಂಬಿಸಿದ್ದಾರೆ. ಆದರೆ ಇದೆಲ್ಲವೂ ಸುಳ್ಳು. ಸ್ವಾತಂತ್ರ್ಯ ಹೋರಾಟಕ್ಕೆ ಶಹಾಪುರದ ಬಾಬು ಕಾಕೇರು ಎಂಬವರು ಮಹಾರಾಷ್ಟ್ರದ ವಸಂತದಾದಾ ಪಾಟೀಲ ಅವರೊಂದಿಗೆ ಹೋಗಿದ್ದರು. ಆಗ ಬಾಬು ಕಾಕೇರು ಅವರು ಬ್ರಿಟಿಷರ ಗುಂಡಿಗೆ ಹುತಾತ್ಮರಾಗಿದ್ದರು. ವಸಂತದಾದಾ ಗುಂಡು ತಗುಲಿ ಗಾಯಗೊಂಡಿದ್ದರು. ಬಾಬು ಕಾಕೇರು ಸ್ಮರಣಾರ್ಥವಾಗಿ ಆ ವೃತ್ತಕ್ಕೆ ಹುತಾತ್ಮಾಚೌಕ್ ಎಂಬುದಾಗಿ ಹೆಸರಿಡಲಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಪರುಶರಾಮಭಾವು ನಂದಿಹಳ್ಳಿ ತಿಳಿಸಿದರು.