ಧಾರವಾಡ: ಅರಣ್ಯ ಹಾಗೂ ಅದರ ಸುತ್ತಲಿನ ಕೆರೆಕಟ್ಟೆಗಳು ಇಂದಿನ ಸಮಾಜದ ನಿರ್ಲಕ್ಷ್ಯದಿಂದ ಹಾಳಾಗುತ್ತಿದ್ದು, ಮುಂದೆ ಭೂಮಿಯ ಮೇಲಿನ ಎಲ್ಲ ಜೀವರಾಶಿಗಳಿಗೆ ಬದುಕು ದುರ್ಲಭವಾಗುತ್ತದೆ ಎಂದು ಧಾರವಾಡ ವಿಭಾಗ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳಿದರು.
ವಿಶ್ವ ಅರಣ್ಯ ದಿನಾಚರಣೆಯಂಗವಾಗಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ಬಣದೂರು ಅರಣ್ಯ ಪ್ರದೇಶದಲ್ಲಿನ ರಸ್ತೆ ಅಕ್ಕಪಕ್ಕ ಸ್ವತ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರ ಸ್ವತ್ಛವಾಗಿಟ್ಟುಕೊಂಡು ನಮ್ಮ ಜತೆಗೆ ಪಶು-ಪಕ್ಷಿ-ಪ್ರಾಣಿಗಳು ಬದುಕುವಂತೆ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ. ಆ ದಿಶೆಯಲ್ಲಿ ಅರಣ್ಯ ಇಲಾಖೆ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಯುವ ಬ್ರಿಗೇಡ್, ಇನ್ನರ್‌ವೀಲ್ ಕ್ಲಬ್ ಹಾಗೂ ಇತರೆ ಸ್ವಯಂಸೇವಾ ಸಂಸ್ಥೆಗಳಿಂದ ಕಾರ್ಯಕ್ರಮ ಸಂಘಟಿಸಲಾಗಿದೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಸುವ ಯೋಜನೆ-ಯೋಚನೆ ನಮ್ಮದಾಗಿದೆ. ನಾಗರಿಕರು ಸಹಕಾರ ನೀಡಬೇಕೆಂದರು.
ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಪರಿಸರ ಬಗ್ಗೆ ಕಾಳಜಿ ವಹಿಸಿ ವಾಸಿಸುವ ಪ್ರದೇಶದ ಸುತ್ತಮುತ್ತಲಿನ ಸ್ವತ್ಛತೆ ಕಾಯ್ದುಕೊಂಡರೆ ಇಂತಹ ಪರಿಸರ ಮಾಲಿನ್ಯ ಆಗುತ್ತಿರಲಿಲ್ಲ. ಎಲ್ಲರೂ ಜವಾಬ್ದಾರಿ ಅರಿತು ಪರಿಸರ ರಕ್ಷಣೆ ಕಾರ್ಯ ಮಾಡಬೇಕೆಂದರು.
ಪರಿಸರವಾದಿ, ಮಕ್ಕಳ ಸಾಹಿತಿ ಕೆ.ಎಚ್ .ನಾಯಕ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮ ಮೂಡಿಸುವಂತಹ ಪರಿಸರ ಮಿತ್ರ ಶಾಲಾ ಕಾರ್ಯಕ್ರಮ ಪುನರ್ ಆರಂಭವಾಗಬೇಕು ಎಂದರು. ಹಳಿಯಾಳ ರಸ್ತೆಯ ಬಣದೂರ ನಾಕಾದಿಂದ ಎರಡು ಕಿಲೋಮೀಟರ್ ರಸ್ತೆಯ ಎರಡೂ ಮಗ್ಗಲಲ್ಲಿ ಪ್ಲಾಸ್ಟಿಕ್, ಗ್ಲಾಸ್, ಭೂಮಿಯಲ್ಲಿ ಕೊಳೆಯಲಾರದಂತಹ ಕಸ ಆರಿಸಿ, ಬಂದೂರ್ ಕೆರೆಯ ಸುತ್ತಮುತ್ತ ಸ್ವತ್ಛತಾ ಕಾರ್ಯ ನಡೆಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಸೌರಬಕುಮಾರ, ಓಟೆಲಿ ಅನ್ನಬನ್, ಡಾ|ವಿಲಾಸ ಕುಲಕರ್ಣಿ, ಆರ್.ಜಿ ತಿಮ್ಮಾಪುರ, ಎಸ್.ಎಂ. ಪಾಟೀಲ,ರೋಟರಿ ಇನ್ನರ್‌ವೀಲ್ ಕ್ಲಬ್, ಮೋದಿ, ರೇಲ್ವೆ ಇಲಾಖೆಯ ರಾಜೇಶ್, ಭಾರತ ಸ್ಕೌಟ್ಸ್,ಮುರಳಿ ಬಿಲ್ಲೆ, ಹೇಮಂತ್ ಬೈಟ್ರಾಯ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್. ಉಪ್ಪಾರ, ಯುವ ಬ್ರಿಗೇಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.