ಮೈಸೂರು: ಕೆರೆಗಳಿಗೆ ಚರಂಡಿ ನೀರು ಸೇರದಂತೆ ಕ್ರಮವಹಿಸಿ, ಕಟ್ಟಡ ಅವಶೇಷಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ನಿಗದಿತ ಸ್ಥಳದಲ್ಲಿ ವಿಲೇವಾರಿಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮೈಸೂರು ನಗರ ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಗೃಹ ರೊಚ್ಚು ನೀರು ನಿರ್ವಹಣೆ ಹಾಗೂ ಪರಿಸರ ಸಂಬಂಧಿ ವಿಷಯಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ನಗರಪಾಲಿಕೆಯ ವತಿಯಿಂದ ವಿದ್ಯಾರಣ್ಯಪುರಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತ್ಯಾಜ್ಯ ನಿರ್ವಹಣಾ ಘಟಕ, ಕೆಸರೆ ಹಾಗೂ ರಾಯನಕೆರೆಯಲ್ಲಿ ಇರುವ ಘಟಕಗಳ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ಪಡೆದ ಅವರು, ಕೆರೆಗಳಿಗೆ ಚರಂಡಿ ನೀರು ಹರಿಯುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಆ ಬಗ್ಗೆ ಎಚ್ಚರ ವಹಿಸಿ ಚರಂಡಿ ನೀರು ಕೆರೆಗಳಿಗೆ ಸೇರ್ಪಡೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಟ್ಟಡಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ನಿರ್ದಿಷ್ಟವಾಗಿ ಗುರುತಿಸಿದ ಸ್ಥಳದಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ಜರುಗಿಸಬೇಕು. ಮುಡಾ ಜತೆಗೆ ಮಾತುಕತೆ ನಡೆಸಿದ ನಂತರ ಹೊಸ ಬಡಾವಣೆಗಳನ್ನು ಹಸ್ತಾಂತರ ಮಾಡಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಾಲಿಕೆ ಆಯುಕ್ತ ಜಿ.ಜಗದೀಶ, ಮುಡಾ ಆಯುಕ್ತ ಡಾ.ಎಂ.ಮಹೇಶ್, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿಗಳಾದ ಯತೀಶ್, ಲಿಂಗರಾಜ್, ಗೀತಾ, ಪಾಲಿಕೆ ಅಧೀಕ್ಷಕ ಎಂಜಿನಿಯರ್ ಸುರೇಶ್‌ಬಾಬು, ಆರೋಗ್ಯಾಧಿಕಾರಿಗಳಾದ ಡಾ. ರಾಮಚಂದ್ರ, ಡಾ. ನಾಗರಾಜ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.