Advertisement

WI vs ENG: ಕಿಂಗ್‌, ಕಾರ್ಟಿ ಶತಕ ವಿಂಡೀಸ್‌ಗೆ ಏಕದಿನ ಸರಣಿ

06:54 PM Nov 07, 2024 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಆರಂಭಕಾರ ಬ್ರ್ಯಾಂಡನ್‌ ಕಿಂಗ್‌ ಮತ್ತು ವನ್‌ಡೌನ್‌ ಬ್ಯಾಟರ್‌ ಕೇಸಿ ಕಾರ್ಟಿ ಸಿಡಿಸಿದ ಅಮೋಘ ಶತಕಗಳ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ವೆಸ್ಟ್‌ ಇಂಡೀಸ್‌, ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

ಇಂಗ್ಲೆಂಡ್‌ 8 ವಿಕೆಟಿಗೆ 263 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 43 ಓವರ್‌ಗಳಲ್ಲಿ 2 ವಿಕೆಟಿಗೆ 267 ರನ್‌ ಬಾರಿಸಿತು. ಬ್ರ್ಯಾಂಡನ್‌ ಕಿಂಗ್‌ 117 ಎಸೆತಗಳಿಂದ 102 ರನ್‌ ಬಾರಿಸಿದರೆ (13 ಬೌಂಡರಿ, 1 ಸಿಕ್ಸರ್‌), ಕೇಸಿ ಕಾರ್ಟಿ 114 ಎಸೆತಗಳಿಂದ 124 ರನ್‌ ಹೊಡೆದು ಅಜೇಯರಾಗಿ ಉಳಿದರು (15 ಬೌಂಡರಿ, 2 ಸಿಕ್ಸರ್‌). ಇವರಿಬ್ಬರ 2ನೇ ವಿಕೆಟ್‌ ಜತೆಯಾಟದಲ್ಲಿ 209 ರನ್‌ ಹರಿದು ಬಂತು. ಕಿಂಗ್‌ 3ನೇ ಸೆಂಚುರಿ ಹೊಡೆದರೆ, ಕಾರ್ಟಿ ಪಾಲಿಗೆ ಇದು ಚೊಚ್ಚಲ ಶತಕವಾಗಿತ್ತು.

ಇಂಗ್ಲೆಂಡ್‌ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. 10 ಓವರ್‌ ಅಂತ್ಯಕ್ಕೆ 4 ವಿಕೆಟಿಗೆ 24 ರನ್‌ ಗಳಿಸಿ ಚಡಪಡಿಸುತ್ತಿತ್ತು. ಆರಂಭಕಾರ ಫಿಲ್‌ ಸಾಲ್ಟ್ (74) ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. ಉಳಿದಂತೆ ಕೆಳ ಕ್ರಮಾಂಕದ ಆಟಗಾರರಾದ ಡ್ಯಾನ್‌ ಮೌಸ್ಲಿ (57), ಸ್ಯಾಮ್‌ ಕರನ್‌ (40), ಜೋಫ‌Å ಆರ್ಚರ್‌ (ಅಜೇಯ 38) ಮತ್ತು ಜೇಮಿ ಓವರ್ಟನ್‌ (32) ಸಾಹಸದಿಂದ ಸವಾಲಿನ ಮೊತ್ತ ದಾಖಲಾಯಿತು.

ವೆಸ್ಟ್‌ ಇಂಡೀಸ್‌ ಪರ ಮ್ಯಾಥ್ಯೂ ಫೋರ್ಡ್‌ 3, ಅಲ್ಜಾರಿ ಜೋಸೆಫ್ ಮತ್ತು ರೊಮಾರಿಯೊ ಶೆಫ‌ರ್ಡ್‌ ತಲಾ 2 ವಿಕೆಟ್‌ ಕೆಡವಿದರು.
ಬ್ರ್ಯಾಂಡನ್‌ ಕಿಂಗ್‌ ಪಂದ್ಯಶ್ರೇಷ್ಠ, ಮ್ಯಾಥ್ಯೂ ಫೋರ್ಡ್‌ ಸರಣಿಶ್ರೇಷ್ಠರೆನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next