ಹೈದರಾಬಾದ್: 2019ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನಾಪಡೆ ಪಾಕ್ ಆಕ್ರಮಿತ ಪ್ರದೇಶದೊಳಕ್ಕೆ ನುಗ್ಗಿ ನಡೆಸಿದ್ದ ಸರ್ಜಿಕಲ್ ದಾಳಿ ಬಗ್ಗೆ ನಾನೂ ಕೂಡಾ ಪುರಾವೆ ಕೇಳುವೆ ಎಂದು ಹೇಳಿಕೆ ನೀಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಭಾರತೀಯ ಜನತಾ ಪಕ್ಷ ತೀವ್ರ ವಾಗ್ದಾಳಿ ನಡೆಸಿದ್ದು, ಕೆಸಿಆರ್ ದೇಶದ್ರೋಹಿ ರೀತಿ ಮಾತನಾಡುತ್ತಿರುವುದಾಗಿ ಆರೋಪಿಸಿದೆ.
ಇದನ್ನೂ ಓದಿ:ಹಿಜಾಬ್ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ: ಸಿಎಂ ಭೇಟಿಯಾದ ಕಾಂಗ್ರೆಸ್ ಮುಸ್ಲಿಂ ನಿಯೋಗ
ಪಂಚರಾಜ್ಯ ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಧರ್ಮ ಮತ್ತು ಸೇನೆಯ ಉಲ್ಲೇಖಗಳನ್ನು ಬಳಸುತ್ತಿದೆ ಎಂದು ಕೆ.ಚಂದ್ರಶೇಖರ್ ರಾವ್ ಸೋಮವಾರ ಆರೋಪಿಸಿದ್ದು, 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಸರ್ಜಿಕಲ್ ದಾಳಿ ನಡೆಸಿದ ಕೀರ್ತಿ ಸೇನೆಗೆ ಸಲ್ಲುತ್ತದೆಯೇ ಹೊರತು, ಬಿಜೆಪಿಗಲ್ಲ ಎಂದು ದೂರಿದ್ದರು.
ಕೆಸಿಆರ್ ಹೇಳಿಕೆ ವಿರುದ್ಧ ಮಂಗಳವಾರ (ಫೆ.15) ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾರತೀಯ ಸೇನೆಯನ್ನು ಬುಡಮೇಲು ಮಾಡಲು ದೇಶದ್ರೋಹಿ ರೀತಿ ಮಾತನಾಡುತ್ತಿದ್ದಾರೆ. ಕೆಸಿಆರ್ ಪಾಕಿಸ್ತಾನ, ಚೀನಾ ಏಜೆಂಟ್ ರೀತಿ ವರ್ತಿಸುತ್ತಿದ್ದು, ಚಂದ್ರಶೇಖರ್ ರಾವ್ ತೆಲಂಗಾಣ ರಾಜ್ಯಕ್ಕೆ ಅರ್ಹವಾದ ವ್ಯಕ್ತಿಯಲ್ಲ. ಖಂಡಿತವಾಗಿಯೂ ತೆಲಂಗಾಣದ ಜನರು ಕೆಸಿಆರ್ ಅವರನ್ನು ಓಡಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತೆಲಂಗಾಣ ಮುಖ್ಯಮಂತ್ರಿಯ ಹೇಳಿಕೆ ಜನರನ್ನು ರೊಚ್ಚಿಗೆಬ್ಬಿಸಿದ್ದು, ಅವರ ರಕ್ತ ಕುದಿಯುತ್ತಿದೆ ಎಂದು ಸಂಜಯ್ ತಿಳಿಸಿದ್ದಾರೆ. ಕೆಸಿಆರ್ ಭಾರತೀಯ ಸೇನೆಯನ್ನು ಅವಮಾನಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.