Advertisement

ಕೆಸಿಸಿ ಟೂರ್ನಿ ಟಿಕೆಟ್‌ ಹಣ ಕೊಡಗು ಸಂತ್ರಸ್ತ ನಿಧಿಗೆ

11:11 AM Sep 02, 2018 | Team Udayavani |

ಸುದೀಪ್‌ ನೇತೃತ್ವದ ಕೆಸಿಸಿ ( ಕನ್ನಡ ಚಲನಚಿತ್ರ ಕಪ್‌) ಎರಡನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಪ್ಟೆಂಬರ್‌ 08 ಹಾಗೂ 09ರಂದು ನಡೆಯಲಿರುವ ಟೂರ್ನಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಪಂದ್ಯಗಳನ್ನು ಹೆಚ್ಚು ಪ್ರೇಕ್ಷಕರು ಕಣ್ತುಂಬಿಕೊಳ್ಳಬೇಕು ಹಾಗೂ ಇದರಿಂದ ಕೊಡಗು ಸಂತ್ರಸ್ತ ನಿಧಿಗೆ ಸಹಾಯವಾಗಬೇಕೆಂಬ ಕಾರಣಕ್ಕೆ ಟಿಕೆಟ್‌ಗೆ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ.

Advertisement

ಒಂದು ದಿನದ ಟಿಕೆಟ್‌ಗೆ 25 ರೂಪಾಯಿಯನ್ನು ನಿಗದಿಪಡಿಸಿದ್ದು, ಪ್ರೇಕ್ಷಕ 50 ರೂಪಾಯಿ ಕೊಟ್ಟು ಎರಡು ದಿನದ ಟಿಕೆಟ್‌ ಪಡೆಯುವುದು ಕಡ್ಡಾಯ. ಈ ಮೂಲಕ 50 ರೂಪಾಯಿಯಲ್ಲಿ ಚಿನ್ನಸ್ವಾಮಿಯಲ್ಲಿ ಎರಡು ದಿನ ಪಂದ್ಯ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ಕಲ್ಪಿಸಲಾಗಿದೆ. ಟಿಕೆಟ್‌ ಬೆಲೆಯಿಂದ ಸಂಗ್ರಹವಾದ ಹಣವನ್ನು ಕೊಡಗು ಸಂತ್ರಸ್ತರ ನಿಧಿಗೆ ಹಸ್ತಾಂತರಿಸುವ ಮೂಲಕ ಸಹಾಯ ಹಸ್ತ ಚಾಚಲು ಪಂದ್ಯ ಸಂಘಟಕರು ಮುಂದಾಗಿದ್ದಾರೆ.

ಕೆಸಿಸಿ ಟೂರ್ನಿಯ ಟಿಕೆಟ್‌ಗಳು ಸಂಗೀತಾ ಮೊಬೈಲ್ಸ್‌, ಆನ್‌ಲೈನ್‌ ಹಾಗೂ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ದೊರಕಲಿದೆ. ಟಿಕೆಟ್‌ನಿಂದ ಸಂಗ್ರಹವಾಗುವ ಮೊತ್ತವನ್ನು ಸೆಪ್ಟೆಂಬರ್‌ 08 ರಂದು ಪಂದ್ಯ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಲಾಗುತ್ತದೆ. 
ಎಲ್ಲಾ ಓಕೆ, ಟಿಕೆಟ್‌ ಬೆಲೆ ಕಡಿಮೆ ಇಡಲು ಕಾರಣವೇನೆಂದು ನೀವು ಕೇಳಬಹುದು. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಸುವ ಸಾಮಾನ್ಯ ಪ್ರೇಕ್ಷಕನಿಗೆ ಪಂದ್ಯ ನೋಡುವ ಅವಕಾಶವನ್ನು ಕಡಿಮೆ ಬೆಲೆಗೆ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ.

ಸೆಪ್ಟೆಂಬರ್‌ 08 ನಾಲ್ಕು ಪಂದ್ಯಗಳು ನಡೆಯಲಿದ್ದು, ಸೆ.09 ರಂದು ಎರಡು ಪಂದ್ಯಗಳ ಜೊತೆಗೆ ಫೈನಲ್‌ ಪಂದ್ಯ ಕೂಡಾ ನಡೆಯಲಿದೆ. ಕೆಸಿಸಿಯಲ್ಲಿ  ಕದಂಬ ಲಯನ್ಸ್‌, ವಿಜಯನಗರ ಪೆಟ್ರಿಯಾಟ್ಸ್‌, ಹೊಯ್ಸಳ ಈಗಲ್ಸ್‌, ಗಂಗಾ ವಾರಿಯರ್, ಒಡೆಯರ್‌ ಚಾರ್ಜರ್ ಹಾಗೂ ಕರ್ನಾಟಕ ಪ್ಯಾಂಥರ್ ಎಂಬ ಒಟ್ಟು ಆರು ತಂಡಗಳು ಸೆಣಸಾಡಲಿದ್ದು, ಈ ತಂಡಗಳನ್ನು ಆರು ಮಂದಿ ಪ್ರತಿನಿಧಿಸುವ ಜೊತೆಗೆ ಸ್ಟಾರ್‌ ನಟರು ಕೂಡಾ ತಂಡದಲ್ಲಿ ಆಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next