Advertisement

2ನೇ ಬಾರಿಗೆ ಸಚಿವ ಸ್ಥಾನ ಪಡೆದ ಕೆಸಿಎನ್‌

05:00 PM Aug 05, 2021 | Team Udayavani |

ಮಂಡ್ಯ: ಸಚಿವ ಕೆ.ಸಿ.ನಾರಾಯಣಗೌಡ ಒಂದೇ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಎರಡು ಬಾರಿ ಸ್ಥಾನ ಪಡೆದ ಜಿಲ್ಲೆಯ ಎರಡನೇ ಸಚಿವರಾಗಿದ್ದಾರೆ.

Advertisement

2004ರಲ್ಲಿ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್‌ ಅವರ ಸಂಪುಟದಲ್ಲಿ ಎನ್‌. ಚಲುವರಾಯಸ್ವಾಮಿ ಮೊದಲ ಬಾರಿಗೆ ಸಚಿವರಾಗಿದ್ದರು. ನಂತರ ರಾಜಕೀಯ ಸ್ಥಿತ್ಯಂತರದಿಂದ 2006ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅವರ ಅವಧಿಯಲ್ಲೂ ಎರಡನೇ ಬಾರಿಗೆ ಒಂದು ವರ್ಷಗಳ ಕಾಲ ಸಚಿವರಾಗಿದ್ದರು. ಅಲ್ಲದೆ, ಎರಡೂ ಬಾರಿಯೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿ: ಅದೇ ರೀತಿ ಕೆ.ಸಿ.ನಾರಾಯಣ ಗೌಡ ಒಂದೇ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಕೆ.ಸಿ.ನಾರಾಯಣಗೌಡರಿಗೂ ಮುಂದಿನ ಸಂಪುಟದಲ್ಲಿ ಸ್ಥಾನದ ಬಗ್ಗೆ ಸಾಕಷ್ಟು ಗೊಂದಲ, ಅನುಮಾನಗಳು ಉಂಟಾಗಿದ್ದವು. ಆದರೂ ಕೊನೆಗೂ ಬಿಜೆಪಿ ಹೈಕಮಾಂಡ್‌ ಹಾಗೂ ಯಡಿಯೂರಪ್ಪ ಅವರ ಕೃಪಾಕಟಾಕದಿಂದ ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಎರಡನೇ ಬಾರಿಗೆ ಸಚಿವ ಸ್ಥಾನ ಪಡೆಯುವಲ್ಲಿ ಕೆ.ಸಿ.ನಾರಾಯಣಗೌಡ ಯಶಸ್ವಿಯಾಗಿದ್ದಾರೆ.

ಸರ್ಕಾರ ರಚನೆಗೆ ಕೆಸಿಎನ್‌ ಪಾತ್ರ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು 17 ಶಾಸಕರ ಪೈಕಿ ನಾರಾಯಣಗೌಡ ಕೂಡ ಒಬ್ಬರಾಗಿದ್ದರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆದ್ದು ಸರ್ಕಾರ ರಚನೆಗೆ ಬೆಂಬಲ ನೀಡಿದ್ದರು. ಆದರೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿದ್ದವು.

ಕಪ್ಪುಚುಕ್ಕೆ ಇಲ್ಲದೇ ಸಚಿವ ಸ್ಥಾನ ನಿರ್ವಹಣೆ: ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಮೊದಲ ಬಾರಿಗೆ ಸಚಿವರಾದ ನಾರಾಯಣಗೌಡ, ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಖಾತೆಗಳನ್ನು ನಿಭಾಯಿಸಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಖಾತೆ ಬದಲಾವಣೆಗೊಂಡು ಯುವಜನ ಕ್ರೀಡೆ ಸಚಿವರಾಗಿದ್ದರು. ಈ ಎಲ್ಲ ಖಾತೆಗಳಲ್ಲೂ ಯಾವುದೇ ಕಪ್ಪುಚುಕ್ಕೆ ಇಲ್ಲದೆ ನಿಭಾಯಿಸಿದ್ದರು. ಅಲ್ಲದೆ, ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇಕೋವಿಡ್‌ ಸಂದರ್ಭದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.

Advertisement

ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೆ ಪೂರಕ: ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಕೆ.ಸಿ.ನಾರಾಯಣಗೌಡರಿಗೆ ಸಲ್ಲುತ್ತದೆ. ‌ ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿದ್ದರು.ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಲು ಸಚಿವ ಸ್ಥಾನ ಅಗತ್ಯವಾಗಿತ್ತು. ಇದನ್ನೆಲ್ಲ ಮನಗಂಡಿರುವ ವರಿಷ್ಠರು ಮತ್ತೆ ಸಚಿವ ಸ್ಥಾನ ನೀಡಿರುವುದು ಪಕ್ಷದಕಾರ್ಯಕರ್ತರಲ್ಲಿ ಹುರುಪು ಹೆಚ್ಚುವಂತೆ ಮಾಡಿದೆ.

ಜಿಲ್ಲಾ ಉಸ್ತುವಾರಿ ನಿರೀಕ್ಷೆ
ಕೆ.ಸಿ.ನಾರಾಯಣಗೌಡರಿಗೆ ಈಗಾಗಲೇ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿರುವುದರಿಂದ ಈ ಬಾರಿಯೂ ಜಿಲ್ಲಾ ಉಸ್ತುವಾರಿ ವಹಿಸುವ ನಿರೀಕ್ಷೆ ಇದೆ. ಈಗಾಗಲೇ ಮೂರ್‍ನಾಲ್ಕು ಖಾತೆ ನಿಭಾಯಿಸಿರುವ ಅನುಭವವಿದೆ. ಜಿಲ್ಲೆಯವರನ್ನೇ ಉಸ್ತುವಾರಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿಯಾಗಲಿದ್ದು, ಜತೆಗೆ ಮುಂದಿನ ಜಿಪಂ, ತಾಪಂ ಚುನಾವಣೆಗೆ ಪಕ್ಷ ಸಂಘಟಿಸುವ ಅಗತ್ಯವಿರುವುದರಿಂದ ನಾರಾಯಣಗೌಡರಿಗೆ ಜಿಲ್ಲಾ ಉಸ್ತುವಾರಿ ವಹಿಸುವುದು ಅನಿವಾರ್ಯ

ಕಾರ್ಯಕರ್ತರ ಸಂಭ್ರಮ
ಕೆ.ಸಿ.ನಾರಾಯಣಗೌಡರಿಗೆ ಸಂಪುಟದಲ್ಲಿ ಮತ್ತೂಮ್ಮೆ ಸಚಿವ ಸ್ಥಾನ ನೀಡುವ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಮಂಡ್ಯ ನಗರ ಸೇರಿದಂತೆ ಕೆ.ಆರ್‌.ಪೇಟೆಯಲ್ಲೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ನಾರಾಯಣಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಒತ್ತಾಸೆಯಾಗಿತ್ತು.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next