Advertisement
ಬದಿಯಡ್ಕ: ಕವಿ, ಕನ್ನಡ ಹೋರಾಟಗಾರ, ನಾಡೋಜ ಕಯ್ನಾರ ಕಿಞ್ಞಣ್ಣ ರೈಯವರ ಹೆಸರಲ್ಲಿ ಅವರು ವಾಸವಾಗಿದ್ದ ಊರಲ್ಲಿ ಸ್ಥಾಪಿತವಾಗಿದ್ದ ವಾಚನಾಲಯ ಇಂದು ಅನಾಥವಾಗಿದೆ. ಉಪಯೋಗಶೂನ್ಯವಾಗಿ ಮೂಲೆ ಗುಂಪಾಗಿದೆ. ಪ್ರಸಿದ್ಧ ಕವಿ, ಶ್ರೇಷ್ಠ ಅಧ್ಯಾಪಕನ ಹೆಸರಲ್ಲಿ ಸ್ಥಾಪಿತವಾದ ವಾಚನಾಲಯವು ಈಗ ಪೊದೆಯಿಂದ ಆವೃತವಾಗಿದ್ದು ಅಸ್ತಿತ್ವವೇ ಮರೆಯಾಗಿರುವುದು ಕಂಡುಬರುತ್ತದೆ. ಸಾರ್ವಜನಿಕರಿಗೆ ಸಹಾಯಕವಾಗುವಂತೆ ಆರಂಭಿಸಿದ ವಾಚನಾಲಯವು ಓದುಗರಿಗೆ ಪ್ರಯೋಜನವಿಲ್ಲದಂತಾಗಿರುವುದು ಕಯ್ನಾರರಿಗೆ ಮಾಡಿದ ಅವಮಾನ.ಈ ಹಿಂದಿನ ಪಂಚಾಯತು ಆಡಳಿತದ ಅವಧಿಯಲ್ಲಿ ಬದಿಯಡ್ಕ ಕೃಷಿ ಭವನದ ಬಳಿ ಪಂಚಾಯತು ವತಿಯಿಂದ ವ್ಯವಸ್ಥಿತವಾದ ವಾಚನಾಲಯವನ್ನು ಸ್ಥಾಪಿಸಲಾಗಿತ್ತು. ಹತ್ತು ಹಲವು ಜನಪ್ರತಿನಿಧಿಗಳ, ಸಾಹಿತಿಗಳ, ಕನ್ನಡ ಹೋರಾಟಗಾರರ ಉಪಸ್ಥಿತಿಯಲ್ಲಿ ಈ ವಾಚನಾಲಯವು ಅಂದಿನ ಶಿಕ್ಷಣ ಸಚಿವ ಅಬ್ದು ರಬ್ ಅವರಿಂದ ಉದ್ಘಾಟನೆಗೊಂಡಾಗ ಕಯ್ನಾರರ ಮೇಲೆ ಇದ್ದ ಪ್ರೀತಿ ಗೌರವ ಈಗ ಮಾಯವಾಗಿರುವುದು ವಿಪರ್ಯಾಸ. ಅಂದು ವಾಚನಾಲಯಕ್ಕೆ ಓರ್ವ ನೌಕರನನ್ನು ಕೂಡಾ ನೇಮಕ ಮಾಡಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಈ ನೌಕರನನ್ನು ಹಿಂದಕ್ಕೆ ಕರೆಯಲಾಗಿತ್ತು. ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಲಾಗಿದೆ. ಇದೀಗ ಕಾಡು ಪೊದೆಯಿಂದ ಆವೃತವಾಗಿರುವ ವಾಚನಾಲಯವು ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದು ವಾಚಕರಿಗೆ ಇದು ಇದ್ದೂ ಇಲ್ಲದಂತಾಗಿದೆ. ವಿಶ್ವ ತುಳು ಸಮ್ಮೇಳನದಂತಹ ಮಹತ್ವದ ಚಟುವಟಿಕೆಗಳಿಗೆ ವೇದಿಕೆಯಾಗಿರುವ, ಕನ್ನಡಿಗರೇ ಹೆಚ್ಚಾಗಿ ವಾಸವಾಗಿರುವ ಕನ್ನಡ ಪ್ರದೇಶದಲ್ಲಿ ಕನ್ನಡದ ಕವಿಗೆ ಮಾಡಿದ ಅವಮಾನ ಇಡೀ ಕನ್ನಡಿಗರಿಗೆ ಆದ ಅವಮಾನವೇ ಸರಿ. ಕಯ್ನಾರರ ಊರಲ್ಲಿ ಅವರದೇ ಹೆಸರಲ್ಲಿ ನಿರ್ಮಿಸಿದ ವಾಚನಾಲಯದ ಪಕ್ಕದಿಂದ ಹಾದುಹೋಗುವ ಕಯ್ನಾರ ಕಿಂಞಣ್ಣ ರೈ ರಸ್ತೆಯ ಅವಸ್ಥೆಯೂ ಇದಕಿಂತ ಹೊರತಲ್ಲ. ನಡೆದುಹೋಗುವುದೇ ಕಷ್ಟವಾಗಿರುವ ರಸ್ತೆಯಲ್ಲಿ ಸಂಚಾರವೂ ದುಸ್ತರವೆನಿಸಿದೆ. ಇದಕ್ಕೆ ಯಾರು ಹೊಣೆ? ಕಾಸರಗೋಡಿನ ಕನ್ನಡ ಸಂಘಟನೆಗಳೂ , ಹೋರಾಟಗಾರರೂ ಯಾಕೆ ಮೌನವಾಗಿದ್ದಾರೆ. ಮಾತ್ರವಲ್ಲದೆ ಕನ್ನಡ ಪ್ರದೇಶದ ಕನ್ನಡಿಗರ ಪಂಚಾಯತು ಕೂಡಾ ಇತ್ತ ಗಮನ ಹರಿಸದಿರಲು ಕಾರಣವೇನು? ಅಂದು ಕನ್ನಡಾಭಿಮಾನಿಗಳು ಹಲವಾರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು.
Related Articles
Advertisement