Advertisement
ಗೋವಿಂದ ಪೈಯವರಿಗೂ (1883-1963) ಕಯ್ಯಾರರಿಗೂ (1915-2015) ಮೂರು ದಶಕಗಳ ಅಂತರವಿದೆ, ಸಮುಚಿತವಾದ ಗೌರವಾದರಗಳೂ ಉಭಯತ್ರರಲ್ಲಿತ್ತು.
Related Articles
Advertisement
1940 ಪೈಯವರ ಉಚ್ಛಾ†ಯ ಕಾಲ. ಅವರ ಚತುರ್ದಶ ಕವನಗಳನ್ನು ಓದಿ 25ರ ತರುಣ ರೈಯವರು ಮೆಚ್ಚುಗೆಯ ಪತ್ರ ಬರೆದರಂತೆ. ಪೈಯವರು ಪ್ರತಿಪತ್ರ ಬರೆದು ಭವಿಷ್ಯದಲ್ಲಿ ಹೆಸರಾಂತ ಕವಿಯಾಗುವ ಭವಿಷ್ಯ ನುಡಿದರು. ರೈಯವರು ಹಿಂದೆ ದುರ್ಗಾದಾಸನೆಂಬ ಹೆಸರಿನಲ್ಲಿ ಕವನ, ಲೇಖನಗಳನ್ನು ಬರೆಯುತ್ತಿದ್ದರು. ಕನ್ನಡ ನಿಘಂಟು ರಚನೆಕಾರ ರೆವರೆಂಡ್ ಕಿಟ್ಟೆಲ್‌ರ ಶತಮಾನೋತ್ಸವ ಕುರಿತು ಸಲಹೆ ಕೇಳಲು ಪೈಯವರನ್ನು ವಿದ್ಯಾರ್ಥಿ ನಾಯಕನಾಗಿದ್ದ ರೈಯವರು ಪ್ರಥಮ ಬಾರಿಗೆ ಭೇಟಿಯಾದಾಗ “ದುರ್ಗಾದಾಸ’ ನಾಮದ ಮೂಲಕ ಗುರುತಿಸಿದ್ದರು. ಈ ಪ್ರಥಮ ಪರಿಚಯ ಕೊನೆಯವರೆಗೂ ಮುಂದುವರಿಯಿತು.
“ಕನ್ನಡದಲ್ಲಿ ಚತುರ್ದಶ ಪದಿಗಳ ಯುಗವನ್ನು ಆರಂಭಿಸಿದವರು ಪೈಯವರು. ಪ್ರಾಸದ ತೊಡಕು ಮುರಿದು ಹೊಸ ಹಾದಿ ಹಾಕಿಕೊಟ್ಟವರು. ಪ್ರಾಸದ ತ್ರಾಸ ನಿಂತಿತು. ಈ ಮಹಾದಿಗ್ವಿಜಯದ ಸೇನಾನಿ ಗೋವಿಂದ ಪೈಯವರೆಂಬುದನ್ನು ಮರೆಯುವಂತಿಲ್ಲ’ ಎಂದು ಪ್ರಬುದ್ಧರಾದ ಬಳಿಕ ರೈಯವರು ಬರೆದಿದ್ದಾರೆ.
ಇವರಿಬ್ಬರೂ ಕಾಸರಗೋಡಿನಲ್ಲಿದ್ದು ಆ ನೆಲವನ್ನು ಪ್ರೀತಿಸಿದವರು, ಅದು ಕನ್ನಡದ ನೆಲವಾಗಿಯೂ ಕರ್ನಾಟಕದ ಕೈಬಿಟ್ಟು ಹೋಗುವಾಗ ಅದರ ವಿರುದ್ಧ ಕೊನೆಯವರೆಗೆ ಹೋರಾಡಿದವರು. “ಕಾಸರಗೋಡು ಎಂದಾಗ ನೆನಪಾಗುವುದು ಒಬ್ಬ ಪೈ ಮತ್ತು ಒಬ್ಬ ರೈ’ ಎಂದು ಸಾಹಿತಿ ಡಾ|ಹಾ.ಮಾ.ನಾಯಕರು ಉದ್ಗರಿಸಿದ್ದನ್ನು ರೈಯವರ ಬಂಧು ಮಣಿಪಾಲದ ಭುವನಪ್ರಸಾದ ಹೆಗ್ಡೆ ಸ್ಮರಿಸುತ್ತಾರೆ.
ಪೈ ಮತ್ತು ರೈಯವರ ನಡುವೆ ಇಷ್ಟೊಂದು ಆತ್ಮೀಯತೆ ಇದ್ದಿತ್ತಾದರೂ ಅವರ ಅನುಪಸ್ಥಿತಿಯಲ್ಲಿ ಆರಂಭವಾದ ಕಾದಾಟ ನಮಗೆ ತಿಳಿವಳಿಕೆಗೆ ಬರುವಾಗ ಅದು ಸಮುದಾಯಕ್ಕೆ ತಿರುಗಿದರೂ ಆಶ್ಚರ್ಯಪಡಬೇಕಿಲ್ಲ.
“ಎಲ್ಲ ವ್ಯವಸ್ಥೆಗಳೂ ಕೊನೆಯಲ್ಲಿ ಒಂದು ಮಠವಾಗಿ ಬಿಡುತ್ತದೆ. ಇದನ್ನು ಒಳಜಾತಿಯಂತೆ ಒಳಮಠವೆನ್ನಬಹುದು’ ಎಂದು ಅಂಕಣಕಾರ ಡಾ| ಬಿ. ಭಾಸ್ಕರ ರಾವ್ ವಿಶ್ಲೇಷಿಸುತ್ತಾರೆ. ಮಠ ಅಂದರೆ ಇಲ್ಲಿ “ವ್ಯಕ್ತಿ ನಿಷ್ಠ ತನ್ಮೂಲಕ ಗುಂಪುನಿಷ್ಠರನ್ನು ಕಾಪಿಟ್ಟುಕೊಳ್ಳುವುದು’ ಎಂದರ್ಥ. ಈ ಅರ್ಥದಲ್ಲಿ ಎಲ್ಲ ಮತಧರ್ಮಗಳೂ ಇದೇ ವ್ಯವಸ್ಥೆಯಲ್ಲೇ ಕಾರ್ಯಾಚರಿಸುತ್ತವೆ, ಜನನ ಮರಣಕ್ಕೂ ಸಹ. ಧರ್ಮ, ಸಾಹಿತ್ಯ, ಸಂಸ್ಕೃತಿ, ಪ್ರಕಾಶನ, ಶಿಕ್ಷಣ ಯಾವುದಿದ್ದರೂ ಒಂದು ಪಂಗಡ/ಸೂಕ್ಷ್ಮ ಪಂಗಡ/ಒಳಪಂಗಡದವರು ಗುಂಪಾಗುವುದು ಕಾಣುತ್ತದೆ. ಇದು ಸರಿಯಾಗಿದ್ದರೆ ಸರಿ, ಇಲ್ಲವಾದರೆ ಗುಂಪುಗಾರಿಕೆಯ ಕಾರ್ಬನ್ ಕಾಪಿಯಾಗಿ ಕಾಣಿಸುವುದಿಲ್ಲವೆ? ನಾವು ಯಾವ ವ್ಯವಸ್ಥೆಯನ್ನು ಟೀಕಿಸುತ್ತೇವೋ ಅದರ ಮೂಲನೀತಿಯನ್ನೇ ಹಿಂಬಾಲಿಸುತ್ತಿರುವುದು ಪ್ರಾಯಶಃ ನಮಗೂ ಗೊತ್ತಾಗುವುದಿಲ್ಲ. ವಿಚಾರನಿಷ್ಠೆ ಮತ್ತು ಗುಂಪುನಿಷ್ಠೆಗಳ ನಡುವೆ ಎಳೆಯಲೇಬೇಕಾದ ಸೂಕ್ಷ್ಮರೇಖೆಯನ್ನು ರೇಖೀಸಲೂ ಮರೆಯುತ್ತೇವೆ ಅಥವಾ ಮರೆತಂತೆ ನಟಿಸುತ್ತೇವೆ. ಈ ಗುಂಪುಗಾರಿಕೆ ಎಷ್ಟು ದೂರ ಸಾಗುತ್ತದೆ ಎಂದು ನೋಡಿದರೆ ಮೂಲವ್ಯಕ್ತಿಗಳು ಹೀಗೇ ಇದ್ದಿರ
ಬೇಕೆಂದೆನಿಸುವಷ್ಟು ವರ್ತಮಾನ ಕಾಲದವರನ್ನು ಕೊಂಡೊಯ್ಯುತ್ತವೆ. ಇದರ ಬದಲು ಮೂಲ ವ್ಯಕ್ತಿಗಳಲ್ಲಿದ್ದ ವಾಸ್ತವ ಸಂಬಂಧದ ಮೇಲೆ ಬೆಳಕು ಚೆಲ್ಲಬೇಕಾಗಿದೆ, ಯಾವುದನ್ನೂ ವೈಭವೀಕರಿಸುವ ಅಗತ್ಯವಿಲ್ಲ.
“ಅತೃಪ್ತ’ರಿಗೆ ಮೂಲವ್ಯಕ್ತಿಗಳ ಬಗೆಗೆ ಕಾಳಜಿ ಇಲ್ಲದಿರುವುದೂ ಕಂಡುಬರುತ್ತದೆ. ಸಾಹಿತ್ಯಿಕ ಕೊಡುಗೆಗಳನ್ನು ಗಮನಿಸದವರೂ “ಗದೆ’ ಎತ್ತಿ ಬರುವಂತೆ ಭಾಸವಾಗುತ್ತಿದೆ. ನಾವು ಈಗ ಇಂತಹ ಆರೋಪ ಪ್ರತ್ಯಾರೋಪಗಳನ್ನು “ರಾಜಕೀಯ’ ಎಂಬ ವ್ಯಾಖ್ಯಾನದಡಿ ತಂದಿರಿಸುತ್ತೇವೆ. ಈ ರಾಜಕೀಯ ಪಟ್ಟುಗಳೂ ಇಂದು, ನಿನ್ನೆಯದಲ್ಲ ಎಂದು ಎಷ್ಟೋ ಬಾರಿ ನಮ್ಮನ್ನು ನಾವೇ ಸಮಾಧಾನಪಡಿಸಿಕೊಳ್ಳುವುದಿದೆ. ಇದು ಸತ್ಯಕ್ಕೆ ಬೆನ್ನು ಹಾಕುವ ಇನ್ನೊಂದು ಬಗೆಯ ಆತ್ಮವಂಚನೆ. ಆದರೆ ಆಯಾ ಕಾಲದ ರಾಜಕೀಯ ಉದ್ದೇಶಗಳಿಗಾಗಿ ತೋರಿಸುವ “ಸಣ್ಣತನ’ ಮಾತ್ರ ಸಮಾಜದಲ್ಲಿ ದೀರ್ಘಕಾಲೀನ ಪೆಟ್ಟುಗಳನ್ನು ನೀಡುತ್ತವೆ. ತತ್ಕಾಲೀನ ರಾಜಕೀಯ ಲಾಭಗಳು ಇಂತಹ ಆರೋಪ ಪ್ರತ್ಯಾರೋಪಗಳಿಂದ ಕುದುರುವುದಾದರೂ ಆಗುವ ಸಾಮಾಜಿಕ ನಷ್ಟ ಅಪರಿಮಿತವಾಗಿರುತ್ತವೆ. ಸಮಾಜದಲ್ಲಿ ಬಹುವರ್ಗ ಯಾವತ್ತೂ ಒಂದು ಗುಂಪಿನ ಅನುಯಾಯಿಗಳು. ಪರಾಮರ್ಶೆ ಈ ದೊಡ್ಡ ವರ್ಗಕ್ಕೆ ಎಟಕುವುದೂ ಇಲ್ಲವೆನ್ನಿ. ಇಂತಹ ಸೂಕ್ಷ್ಮ ಸಂದರ್ಭ ಸಣ್ಣ ಪ್ರಮಾಣದಲ್ಲಿಯಾದರೂ ಪರಾಮರ್ಶೆ ಮಾಡುವ ವರ್ಗ ಕೈ ಕಟ್ಟಿ ಕುಳಿತರೆ ದೊಡ್ಡ ವರ್ಗಕ್ಕೆ ಭವಿಷ್ಯದಲ್ಲಿ ಬರುವ ತೊಂದರೆಗಳಿಗೆ ಕಾರಣವಾಗುತ್ತದೆ. ಆತ್ಮೀಯರಾಗಿದ್ದ ಸಮಕಾಲೀನರ ನಡುವೆಯೇ ಇಂತಹ ಕಂದರ ತಂದಿಡುವುದಾದರೆ ಅಸಮಕಾಲೀನರ ನಡುವೆ ನಾವು ಎಂತಹ ಕಂದರ ತಂದಿಡಬಹುದು? ಎಷ್ಟು ಕಂದರ ತೋಡಿ ಕೇಕೇ ಹಾಕಿದ್ದೇವೆ? ಇದನ್ನು ಎಷ್ಟು ಶಕ್ತಿಗಳು ದುರುಪಯೋಗಪಡಿಸಿಕೊಂಡಿವೆ? ಜಗತ್ತಿನ ಇತಿಹಾಸಗಳನ್ನು ಮಗುಚಿ ನೋಡಿದರೆ ಇದರದ್ದೇ ಛಾಯಾಪ್ರತಿಯಾಗಿ ಕಾಣುತ್ತದೆಯಲ್ಲ? ಇದಕ್ಕೆ ಕಡಿವಾಣ ಹೇಗೆ? ಎಂದು ಚಿಂತೆಯಾಗುತ್ತದೆ. ಪ್ರಜ್ಞಾವಂತ ಪರಾಮರ್ಶಕರು ಸಮಾಜದ ಕಾವಲುಗಾರನ ಪಾತ್ರ ನಿರ್ವಹಿಸುವುದೊಂದೇ ಪರ್ಯಾಯ ಮಾರ್ಗ.
– ಮಟಪಾಡಿ ಕುಮಾರಸ್ವಾಮಿ