Advertisement
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡ ಗಡಿಕಾಯೆ, ಗುಡಿ ಕಾಯೆ, ನುಡಿ ಕಾಯೆ,
ಕಾಯಲಾರನೆ ಸಾಯೆ! ಓ ಬನ್ನಿ ಬನ್ನಿ.
ಹಾರೆ ಗುದ್ದಲಿ ಕೊಡಲಿ ನೊಗ ನೇಗಿಲೆತ್ತುತಲಿ
ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡ ನಾಡಿನಿಂದ ಕಾಡಿಂದ ಗೂಡಿಂದ
ಕಡಲಿಂದ ಸಿಡಿಲಿಂದ ಗುಡುಗಿ ಬನ್ನಿ…
Related Articles
Advertisement
ಕಯ್ಯಾರರ ಮಾತೃಭಾಷೆ ತುಳುವಾದರೂ ಇವರ ಮೈ-ಮನ ಗಳಲ್ಲೆಲ್ಲ ಕನ್ನಡದ್ದೇ ದರ್ಬಾರು. ಬಾಲ್ಯದಿಂದಲೂ ಕನ್ನಡದ ಜತೆಗೆ ಸಂಸ್ಕೃತ ದಲ್ಲಿ ಆಸಕ್ತಿ ಹೊಂದಿದ್ದ ಇವರ ಮೇಲೆ ಅಕ್ಕಪಕ್ಕದ ಮನೆಯ ಮಲೆಯಾಳ ಭಾಷೆಯ ಪ್ರಭಾವ ಕೂಡ ಇತ್ತು. ಹಾಗಾಗಿ ಇವರು ಪದವೀಧರರಾಗುವಷ್ಟರಲ್ಲಿ ತುಳು, ಕನ್ನಡ, ಸಂಸ್ಕೃತ, ಮಲೆಯಾಳ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ವಿದ್ಯಾರ್ಥಿ ದಿಶೆಯಲ್ಲೇ ಸಾಹಿತ್ಯ ಕೃಷಿಯತ್ತಲೂ ಹೆಜ್ಜೆಯಿರಿಸಿದ್ದ ಕಯ್ಯಾರ ರು, ಗಾಂಧೀಜಿ ಅವರನ್ನು ಕಾಣುವ ತವಕದಿಂದ 1943ರಲ್ಲಿ ಪೆರಡಾಲದಿಂದ ಕಾಲು ನಡಿಗೆಯಲ್ಲೇ ಸಹಪಾಠಿಗಳೊಡನೆ ಮಂಗಳೂರಿನ ಕೊಡಿಯಾಲಬೈಲಿಗೆ ಬಂದು ಗಾಂಧೀಜಿಯವರ ದರ್ಶನ ಪಡೆದಿದ್ದರು. ಆ ಕ್ಷಣ ಅವರಿಗೆ ಈ ದೇವಮಾನವನ ಮುಂದೆ ಬೇರೆ ದೇವರು ಏಕೆ? ಎಂಬ ಭಾವ ಮೂಡಿತ್ತಂತೆ. ಆಗ ಅವರು ಗಾಂಧೀ ದರ್ಶನ ಎಂಬ ಕವಿತೆ ಬರೆದರು. ಇವತ್ತಿಗೂ ಅದು ಅತ್ಯಂತ ಮೌಲಿಕ ಕವಿತೆಯಾಗಿದೆ.
ಬಾಲ್ಯದಲ್ಲೇ ಪತ್ರಿಕೋದ್ಯಮದ ಸೆಳೆತಕ್ಕೂ ಒಳಗಾಗಿದ್ದ ಕಯ್ಯಾರರು ತಮ್ಮ ಶಾಲಾ ದಿನಗಳಲ್ಲೇ ಸುಶೀಲಾ ಎಂಬ ಹಸ್ತಪ್ರತಿ ಪತ್ರಿಕೆಯನ್ನು ಶಿಕ್ಷಕರ ಪ್ರೇರಣೆಯಿಂದ ಹೊರತಂದಿದ್ದರು. ಆಶ್ಚರ್ಯ ವೆಂದರೆ ಆಗ ಇವರಿಗೆ ಕೇವಲ ಹನ್ನೆರಡು ವರ್ಷ. ಮುಂದೆ ಸ್ವದೇಶಾಭಿಮಾನ, ಜಯಕರ್ನಾಟಕ, ದೇಶಾಭಿಮಾನಿ, ರಾಷ್ಟ್ರಬಂಧು ಮುಂತಾದ ಪತ್ರಿಕೆಗಳ ಒಡನಾಡಿಯಾಗಿ ತಮ್ಮ ಲೇಖನಿಯನ್ನು ಹರಿಯಬಿಟ್ಟು ಬರೆವಣಿಗೆಯ ಬೆಟ್ಟವನ್ನೇ ಕಟ್ಟಿದರು. ಕಯ್ಯಾರರು ಆ ಕಾಲದ ಎಲ್ಲ ಪತ್ರಿಕೆಗಳಲ್ಲೂ ಕಥೆ, ಕವನ, ಲೇಖನಗಳನ್ನು ಬರೆದು ಆ ಮುಖೇನ ಕನ್ನಡ ಸಾರಸ್ವತ ಲೋಕ ದಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲೂ ಪ್ರಸಿದ್ಧರಾದರು.
ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಅವರ ಗರಡಿಯಲ್ಲಿ ಪಳಗಿದ ಕಯ್ಯಾರರು ಸೃಜನಶೀಲ ಸಾಹಿತ್ಯ ಮತ್ತು ಸೃಜನೇ ತರ ಸಾಹಿತ್ಯಗಳೆರಡರಲ್ಲೂ ಬಹಳ ಎತ್ತರದ ಸಾಧನೆ ಮಾಡಿದ ವರು. ವಿದ್ವತ್ತಿನ ಮೇರು ಶಿಖರವಾಗಿ ಬೆಳೆದವರು. ಬರೆವಣಿಗೆ ಹಾಗೂ ಕನ್ನಡಪರ ಹೋರಾಟವಲ್ಲದೆ ಗಾಂಧೀಜಿ ಅವರಿಂದ ಪ್ರಭಾ ವಿತರಾಗಿ ಅಪ್ರತಿಮ ದೇಶಪ್ರೇಮಿಯೂ ಆಗಿದ್ದರು. 1935ರಲ್ಲಿ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದ ನಾರಾಯಣ ಕಿಲ್ಲೆ, ಕೆ.ಕೆ. ಶೆಟ್ಟಿ, ಕೃಷ್ಣಪ್ಪ ತಿಂಗಳಾಯ, ಡಾ| ಯು.ಪಿ.ಮಲ್ಯ, ಶ್ರೀನಿವಾಸ ಮಲ್ಯ ಮುಂತಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಜತೆಗೂಡಿದ್ದ ಕಯ್ಯಾರರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮ ದನಿಯನ್ನು ಕರಾವಳಿಯಲ್ಲಿ ಮೊಳಗಿಸಿದ್ದರು.ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡುವಂತಹ ಸಾಹಿತ್ಯಗಳನ್ನು ರಚಿಸಿದ್ದರು. ಪ್ರೌಢ ಶಿಕ್ಷಣ ಮುಗಿಯುತ್ತಿದ್ದಂತೆಯೇ 1945ರಲ್ಲಿ ಪೆರಡಾ ಲದ ನವಜೀವನ ಪ್ರೌಢಶಾಲೆಯಲ್ಲಿ ಉಪಾಧ್ಯಯರಾಗಿ ವೃತ್ತಿ ಜೀವನ ಆರಂಭಿಸಿದ ಕಯ್ಯಾರರು ಶಿಕ್ಷಕರಾಗಿದ್ದುಕೊಂಡೇ ಮುಂದಿನ ತಮ್ಮೆಲ್ಲ ಉನ್ನತ ವಿದ್ಯಾಭ್ಯಾಸವನ್ನು ಮಾಡಿಕೊಂಡು ಸಾಧನೆಯ ಮೆಟ್ಟಿಲೇರಿದರು. ಉಪಾಧ್ಯಾಯ ವೃತ್ತಿ, ವ್ಯಾಸಂಗ ಇವೆಲ್ಲದರ ಜತೆಜತೆಯಲ್ಲೇ ಹೋರಾಟ, ಬರೆವಣಿಗೆ ಎಲ್ಲವನ್ನೂ ಮಾಡಿ ಕನ್ನಡವನ್ನು ಕಟ್ಟಿದ ಕನ್ನಡ ಕಟ್ಟಾಳಿವರು. 32 ವರ್ಷಗಳ ಸುದೀರ್ಘ ಕಾಲ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೇಷ್ಠ ಶಿಕ್ಷಕರಾದ ಇವರು ಕೇಂದ್ರ ಸರಕಾರದಿಂದ ಶ್ರೇಷ್ಠ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಣೋತ್ತಮರೂ ಹೌದು. “ಶ್ರೀಮುಖ’ ಕವನ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕ ಪ್ರವೇಶಿಸಿದ ಕಯ್ಯಾರರು ಕಥೆ, ಕವನ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಶಿಶು ಸಾಹಿತ್ಯ, ಖಂಡಕಾವ್ಯ, ವ್ಯಾಕ ರಣ, ಪ್ರಬಂಧ, ಸಂಪಾದನೆ, ಅನುವಾದ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು ನೂರು ಕೃತಿಗಳನ್ನು ಕನ್ನಡ ಮ್ಮನ ಸಾಹಿತ್ಯ ಭಂಡಾರಕ್ಕೆ ನೀಡಿದ್ದಾರೆ. ಇಷ್ಟೊಂದು ವೈವಿಧ್ಯಮಯವಾಗಿ ಸಾಹಿತ್ಯ ಕೃಷಿ ಮಾಡಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಯ್ಯಾರರ ಪುಸ್ತಕಗಳು ಬಂದಿದ್ದರೂ ಇವರು ಕವಿಯಾಗಿಯೇ ಹೆಚ್ಚು ಪ್ರಸಿದ್ಧರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಭಾರತ ಸರಕಾರದಿಂದ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸರಕಾರದಿಂದ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ, ಪ್ರಥಮ ಅಖಿಲ ಭಾರತ ಜನಪರ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷತೆ, ಅಖಿಲ ಭಾರತ ತುಳು ಸಮ್ಮೇ ಳನದ ಗೌರವ ಪ್ರಶಸ್ತಿ, 66ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಮಹಾಗೌರವ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ನಾಡೋಜ ಪುರ ಸ್ಕಾರ, ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ-ಪುರಸ್ಕಾರ, ಸಮ್ಮಾನ-ಗೌರವಗಳಿಗೆ ಕಯ್ಯಾರರು ಭಾಜನರಾಗಿದ್ದಾರೆ. ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಕಯ್ಯಾರ ಕಿಂಞಣ್ಣ ರೈ ಅವರು ತಮ್ಮ ಬದುಕಿನಲ್ಲಿ ಶತಮಾನೋತ್ಸವ ಕಂಡು 101 ವರ್ಷಗಳ ಸಾರ್ಥಕ ಜೀವನ ನಡೆಸಿದವರು. 2015ರ ಆಗಸ್ಟ್ 9ರಂದು ಇವರು ಇಹಲೋಕದಿಂದ ಕಣ್ಮರೆಯಾದರೂ ಸಮಗ್ರ ಕರ್ನಾಟಕದ ಕಯ್ಯಾರರು ಎಂದೂ ಆರದ ನಂದಾದೀಪ.
(ಲೇಖಕರು: ಸಾಹಿತಿ, ಪತ್ರಕರ್ತರು) -ಬನ್ನೂರು ಕೆ.ರಾಜು