ಕುಂಬಳೆ: ಪೈವಳಿಕೆ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತ್‌ಗೆ ಪರಸ್ಪರ ಸಂಪರ್ಕ ಕಲ್ಪಿಸುವ ಕಯ್ನಾರು ಪರಂಬಳ ಜೋಡುಕಲ್ಲು ರಸ್ತೆಯ ಅವಸ್ಥೆ ಶೋಚನೀಯವಾಗಿದೆ. ಸುಮಾರು 4 ಕಿ.ಮೀ. ಉದ್ದದ ಗ್ರಾಮೀಣ ಪ್ರದೇಶದ ಈ ರಸ್ತೆಯಲ್ಲಿ ಜನ-ವಾಹನ ಸಂಚರಿಸಲು ಹರಸಾಹಸ ಪಡಬೇಕಾಗಿದೆ.
ಕಳೆದ 5 ವರ್ಷದ ಹಿಂದೆ ಕ್ಷೇತ್ರದ ಶಾಸಕರ ವಿಶೇಷ ಅನುದಾನದಿಂದ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 1.5 ಕೋಟಿ ರೂ. ನಿಧಿ ಮಂಜೂರುಗೊಂಡಿದೆ.ರಸ್ತೆ ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸಲು ಸರ್ವಪಕ್ಷದ ಎಲ್ಲರನ್ನೊಳಗೊಂಡ ಫಲಾನುಭವಿ ಸಮಿತಿಯನ್ನು ರಚಿಸಲಾಯಿತು.
ಕಾಮಗಾರಿಯ ಮೇಲ್ವಿಚಾರಣೆಗೆ ಪ್ರತ್ಯೇಕ ತಜ್ಞರ ಸಮಿತಿಯನ್ನೂ ರಚಿಸಲಾಯಿತು. ಕರಾರಿನ ಬಳಿಕ ಕಾಮಗಾರಿ ಆರಂಭಗೊಂಡಿತು. ಆದರೆ ಕಾಮಗಾರಿ ಆರಂಭದಲ್ಲೇ ರಸ್ತೆ ಕಳಪೆಯಾದ ಕಾರಣ ಮೇಲ್ನೋಟ ಸಮಿತಿಯವರು ಗುತ್ತಿಗೆಯವರೊಂದಿಗೆ ರಾದ್ಧಾಂತಕ್ಕೆ ಇಳಿಯಬೇಕಾಯಿತು. ಉತ್ತಮ ಕಾಮಗಾರಿ ನಡೆಸದಿದ್ದಲ್ಲಿ ಕಾಮಗಾರಿಗೆ ಬಿಡುವುದಿಲ್ಲ ಎಂಬುದಾಗಿಯೂ ಸಮಿತಿಯವರು, ಇಲಾಖೆಯ ಯೋಜನೆಯಲ್ಲಿ ಒಳಪಡಿಸಿದಂತೆ ನಮಗೆ ಎಷ್ಟು ಸಾಧ್ಯವೆಂಬ ಗುತ್ತಿಗೆದಾರರ ಜಟಾಪಟಿಯಲ್ಲಂತೂ ವಿವಾದದಲ್ಲಿ ಕಾಮಗಾರಿ ಮುಗಿಸಲಾಯಿತು.
ಇದರ ಫಲ ಮುಂದಿನ ಪ್ರಥಮ ಮಳೆಗಾಲದಲ್ಲೇ ಪ್ರಕಟವಾಯಿತು. ಒಂದೇ ಮಳೆಗೆ ರಸ್ತೆ ಹೊಂಡ ಮಯವಾಯಿತು. ಕೆಸರು ಕಂಬಳ ರಸ್ತೆಯಾಯಿತು. ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬುದಾಗಿ ವಿಜಿಲೆನ್ಸ್ ಅಧಿಕಾರಿಗೆ ದೂರು ಸಲ್ಲಿಸಿದರೂ ಕಳ್ಳರಿಗೆ ಬೆಳಕು ತೋರಿಸುವ ಅಧಿಕಾರಿಗಳಿಂದ ಪರಿಣಾಮ ಸೊನ್ನೆಯಾಗಿ ಪರಿಣಮಿಸಿತು.
ರಸ್ತೆ ತೀರಾ ಕೆಟ್ಟು ಹೋಗಿ ಸಂಚರಿಸಲಸಾಧ್ಯವಾ ದಾಗ ಕಾಸರಗೋಡು ಜಿಲ್ಲಾ ಪಂಚಾಯತ್, ಪೈವಳಿಕೆ ಗ್ರಾಮ ಪಂಚಾಯತ್‌ಗಳಿಂದ ಮತ್ತೆ ರಸ್ತೆಗೆ ನಿಧಿ ವ್ಯಯಿಸಿ ರಸ್ತೆ ಡಾಮರೀಕರಣ ನಡೆಸಲಾಯಿತು.ಆದರೆ ಈ ಕಾಮಗಾರಿಯ ಆಯುಷ್ಯವೂ ಕುಂಠಿ ತವಾಗಿತ್ತು. ಪ್ರಕೃತ ರಸ್ತೆಯುದ್ದಕ್ಕೂ ಇಂಗು ಗುಂಡಿಯಾಗಿದೆ. ರಸ್ತೆಯಲ್ಲಿ ಸಂಚರಿಸಲು ಸರ್ಕಸ್ ಸಾಹಸ ಮಾಡಬೇಕಾಗಿದೆ.
ಕಲ್ಲಿನ ಲಾರಿಗಳ ಕೊಡುಗೆ: ರಸ್ತೆ ಕಾಮಗಾರಿ ಕಳಪೆಯಾಗಿರುವುದಕ್ಕೆ ಘನವಾಹನಗಳ ಒಂದಷ್ಟು ಕೊಡುಗೆಯೂ ಇದೆ. ಕೆಂಪು ಕಲ್ಲು ಮತ್ತು ಕಗ್ಗಲ್ಲು ತುಂಬಿದ ಸಾಕಷ್ಟು ಲಾರಿಗಳು ಈ ರಸ್ತೆಯಲ್ಲಿ ನಿತ್ಯ ಸಾಗುವುದು. ಈ ಭಾರ ತುಂಬಿದ ಲಾರಿಗಳ ಸಂಚಾರದಿಂದಲೂ ರಸ್ತೆ ಕೆಡಲು ಕಾರಣವಾಗಿದೆ. ಕಳಪೆ ಕಾಮಗಾರಿಯ ಮೇಲೆ ಈ ಲಾರಿಗಳು ಸಾಗಿದಾಗ ರಸ್ತೆ ಪಕ್ಕನೆ ಕೆಡಲು ಕಾರಣವಾಯಿತು. ಉಭಯ ಪಂಚಾಯತ್ ಸಂಪರ್ಕ ಕಲ್ಪಿಸುವ ಈ ರಸ್ತೆ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತಿ ಅಗತ್ಯ ವಾಗಿದೆ. ದೇವಾಲಯಗಳು, ವಿದ್ಯಾಲಯಗಳು, ವಿವಿಧ ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ದುರಸ್ಥಿ ಅನಿವಾರ್ಯವಾಗಿದೆ. ಸಂಬಂಧ ಪಟ್ಟವರು ರಸ್ತೆ ಹೊಂಡಕ್ಕೆ ಕನಿಷ್ಠ ಕಲ್ಲನ್ನಾದರೂ ಸುರಿದು ಪುಣ್ಯ ಕಟ್ಟಿಕೊಳ್ಳಬೇಕಾಗಿದೆ.