Advertisement

ಪುರಾತನ ದೇವಾಲಯಗಳ ಜೀರ್ಣೋದ್ಧಾರ ಪುಣ್ಯದ ಕೆಲಸ: ಮಾಣಿಲ ಶ್ರೀ

09:00 PM Mar 20, 2018 | Karthik A |

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಾವುನಲ್ಲಿ ನವೀಕರಣಗೊಂಡಿರುವ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ರವಿವಾರ ಆರಂಭವಾಯಿತು. ಬೆಳಗ್ಗೆ ತ್ರಿಗುಣಾತ್ಮಿಕ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಪುಣ್ಯದ ಕೆಲಸ. ದೇವಸ್ಥಾನ, ದೈವಸ್ಥಾನ, ಭಜನ ಮಂದಿರಗಳು ಬದುಕಿನ ಶಕ್ತಿ ಕೇಂದ್ರಗಳಾಗಿವೆ. ಬದುಕಿನ ರಕ್ಷಣೆ, ಸಾರ್ಥಕತೆಗಾಗಿ ಹಿರಿಯರು ಗ್ರಾಮ, ಸೀಮೆ ದೇವಸ್ಥಾನಗಳನ್ನು ಹುಟ್ಟುಹಾಕಿದ್ದಾರೆ ಎಂದರು. 

Advertisement

ಮನಸ್ಸಿನ ಸ್ವಚ್ಛತೆ ಅಗತ್ಯ
ಸ್ವಾಮೀಜಿಗಳು ಹಿಂದೂ ಸಮಾಜದ ಪ್ರತಿ ಪಾದಕರು. ಅವರಲ್ಲಿ ಭೇದ-ಭಾವವಿಲ್ಲ. ಮಠಾಧಿಪತಿಗಳಿಗೆ ಗೌರವ ಕೊಡುವಲ್ಲಿ ಜಾತಿ, ಪೈಪೋಟಿ ಬೇಡ. ಹಿಂದೂ ಧರ್ಮಕ್ಕೆ ಎಂದೂ ನಾಶ ಇಲ್ಲ. ಆದರೆ ಆಚಾರ, ವಿಚಾರ, ಬದುಕಿನ ಬಗ್ಗೆ ಅವಲೋಕನ ಮಾಡುವ ಆವಶ್ಯಕತೆ ಇದೆ ಎಂದು ಹೇಳಿದ ಸ್ವಾಮೀಜಿ, ಮನಸ್ಸಿನ ಸ್ವಚ್ಛತೆಯನ್ನು ಧರ್ಮಕ್ಷೇತ್ರಗಳು, ಮಠ ಮಂದಿರಗಳು ಮಾಡಬೇಕಾಗಿದೆ ಎಂದು ಹೇಳಿದರು.

ಆರೆಸ್ಸೆಸ್‌ ಉಜಿರೆ ಸಂಘಚಾಲಕ ಕೃಷ್ಣ ಭಟ್‌ ಕೊಕ್ಕಡ ಮಾತನಾಡಿ, ಮನೆಗಳನ್ನು ಜೋಡಿಸುವ ಶಕ್ತಿ ಹಿಂದೂ ಪರಂಪರೆಯಲ್ಲಿದೆ. ಊರಿನ ಜನ ತಾಯಿ ಮನೆ ಎಂಬ ದೃಷ್ಟಿಯಲ್ಲಿ ಪ್ರತಿನಿತ್ಯವೂ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಎಲ್ಲರೂ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಟ್ರಸ್ಟ್‌ನ ಪ್ರಧಾನ ಸಲಹೆಗಾರ ಎನ್‌. ಈಶ್ವರ ಭಟ್‌ ಕೊಡೆಂಕಿರಿ ಮಾತನಾಡಿ, ದೇವಸ್ಥಾನದ ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯ. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕೆಂದು ಹೇಳಿದರು.

ಶಿಲಾಮಯ ದೇಗುಲ 
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಗಣೇಶ್‌ ಪ್ರಸಾದ್‌ ನೆಕ್ಕರ್ಲ, 2015ರ ಜೂನ್‌ನಲ್ಲಿ ಅಷ್ಟಮಂಗಲ ಪ್ರಶ್ನೆಯಿಟ್ಟು ಬಳಿಕ ಜೀರ್ಣೋದ್ಧಾರ ಕೆಲಸ ನಡೆದಿದೆ. ದೇವಾಲಯಕ್ಕೆ ಕೆ. ಈಶ್ವರ ಭಟ್‌ ಕೊಡೆಂಕಿರಿ ಅವರು 3 ಎಕ್ರೆ ಜಾಗ ದಾನವಾಗಿ ನೀಡಿದ್ದಾರೆ. ದೇವಾಲಯದ ವ್ಯಾಪ್ತಿಗೆ 125 ಕುಟುಂಬಗಳು ಬರುತ್ತಿದ್ದು, ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ಶಿಲಾಮಯ ದೇಗುಲ ನಿರ್ಮಾಣಗೊಳಿಸಲಾಗಿದೆ. ಮಹಿಳೆಯರು 10.50 ಲಕ್ಷ ರೂ. ಧನ ಸಂಗ್ರಹ ಮಾಡಿದ್ದಾರೆ ಎಂದರು.

Advertisement

ಕೊಕ್ಕಡ ಪಂಚಮಿ ಹಿತಾಯುರ್ಧಾಮದ ಡಾ| ಮೋಹನದಾಸ್‌ ಗೌಡ, ದಾಮೋದರ ಶೆಟ್ಟಿ ನೂಜೆ, ಕೌಕ್ರಾಡಿ ಗ್ರಾ.ಪಂ. ಸದಸ್ಯರಾದ ಮಹೇಶ್‌ ಪಿಲತ್ತಿಂಜ, ಜಾನಕಿ, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ರಾವ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಜೀರ್ಣೋದ್ಧಾರ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಾರ್ದನ ಮೂಡುಬೈಲು ದಂಪತಿ ಸ್ವಾಮೀಜಿಗೆ ಗೌರವಾರ್ಪಣೆ ಮಾಡಿದರು. 

ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಶ್ರಮಿಸಿದ 99 ಮಹಿಳೆಯರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು. ಕಾರ್ಯಾಲಯ ಸಮಿತಿ ಸದಸ್ಯೆ ಮಮತಾ ವಂದಿಸಿದರು. ಉಪನ್ಯಾಸಕ ಚೇತನ್‌ ಆನೆಗುಂಡಿ ಅವರು ಕಾರ್ಯಕ್ರಮ ನಿರೂಪಿಸಿದರು. ವೇದಶ್ರೀ, ತನುಜಾ ಪ್ರಾರ್ಥಿಸಿದರು.

ಹೊರೆಕಾಣಿಕೆ ಸಮರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಬ್ರಹ್ಮಕಲಶೋತ್ಸವದ ಮೊದಲ ದಿನ ದೇವಾಲಯಕ್ಕೆ ಬೃಹತ್‌ ಪ್ರಮಾಣದಲ್ಲಿ ಹೊರೆಕಾಣಿಕೆ ಸಮರ್ಪಣೆಯಾಗಿದೆ. ಕೌಕ್ರಾಡಿ, ಕೊಕ್ಕಡ, ಪಟ್ರಮೆ,ನಿಡ್ಲೆ, ನೆಲ್ಯಾಡಿ ಗ್ರಾಮಸ್ಥರು ಹೊರೆಕಾಣಿಕೆಗಳನ್ನು ದೇವಾಲಯಕ್ಕೆ ತಂದೊಪ್ಪಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಬ್ರಹ್ಮಶ್ರೀ ಎಡಮನೆ ದಾಮೋದರ ತಂತ್ರಿಗಳು ಅರವತ್‌ ಮತ್ತು ತಂಡದವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ರಾತ್ರಿ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ, ಅಂಕುರಾರೋಪಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ರಾತ್ರಿಪೂಜೆ ನಡೆಯಿತು. ಭಜನ ಕಾರ್ಯಕ್ರಮದ ಅಂಗವಾಗಿ ಸಂಜೆ ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನ ಮಂಡಳಿ, ಬಲ್ಯ ಶ್ರೀ ಉಮಾಮಹೇಶ್ವರಿ ಭಜನ ಮಂಡಳಿ, ನಿಡ್ಲೆ ಶ್ರೀ ಮಹಾಗಣಪತಿ ಭಜನ ಮಂಡಳಿ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇಂದು ಪರಿವಾರ ದೈವಗಳ ಪ್ರತಿಷ್ಠೆ
ಬ್ರಹ್ಮಕಲಶೋತ್ಸವದ 3ನೇ ದಿನವಾದ ಮಾ. 20ರಂದು ಬೆಳಗ್ಗೆ 5.30ರ ಕುಂಭಲಗ್ನ ಸುಮುಹೂರ್ತದಲ್ಲಿ ಮೂಡುಬೈಲು ಹಾಗೂ  ಕೊಡಂಕಿರಿಯಲ್ಲಿರುವ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ ನಡೆಯಲಿದೆ. ಬೆಳಗ್ಗೆ ಹಾಗೂ ಸಂಜೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಬೆಳಗ್ಗೆ ಕಳೆಂಜ, ಪುದುವೆಟ್ಟು, ಧರ್ಮಸ್ಥಳ, ಶಿರಾಡಿ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಸಂಜೆ ಭಜನ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಯಕ್ಷ ಗಾನ ವೈಭವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next