ಮಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯ ಅಡೆತಡೆಗಳನ್ನು ನಿವಾರಿಸಿ ಕ್ಷಿಪ್ರ ನೋಂದಣಿಗೆ ಅವಕಾಶ ಕಲ್ಪಿಸಿ ಅಭಿವೃದ್ಧಿಪಡಿಸಲಾದ “ಕಾವೇರಿ- 2′ ತಂತ್ರಾಂಶವು ಮೈಸೂರು ವಿಭಾಗಕ್ಕೊಳಪಡುವ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಉಪ ನೋಂದಣಿ ಕಚೇರಿಗಳಲ್ಲಿ ಜೂನ್ 26ರೊಳಗೆ ಲಭ್ಯವಾಗಲಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಉಪ ನೋಂದಣಿ ಕಚೇರಿಯಲ್ಲಿ ಜೂ. 7ರಂದು ಆರಂಭಗೊಂಡು ಜೂ. 14ರೊಳಗೆ ಹಾಗೂ ದ.ಕ. ಜಿಲ್ಲೆಯಲ್ಲಿ ಎ. 15ರಂದು ಬಂಟ್ವಾಳ ಉಪ ನೋಂದಣಿ ಕಚೇರಿಯಿಂದ ಆರಂಭಿಸಿ ಜೂ. 26ರೊಳಗೆ ಎಲ್ಲ ಉಪ ನೋಂದಣಿ ಕಚೇರಿಗಳಲ್ಲಿ ಈ ತಂತ್ರಾಂಶ ಅನುಷ್ಠಾನಗೊಳ್ಳಲಿದೆ.
ಮೈಸೂರು ವಿಭಾಗದ ಮಂಡ್ಯ ಜಿಲ್ಲೆಯ ಉಪ ನೋಂದಣಿ ಕಚೇರಿಗಳಲ್ಲಿ ಎ. 12ಕ್ಕೆ “ಕಾವೇರಿ- 2′ ತಂತ್ರಾಂಶ ಅಳವಡಿಕೆ ಪೂರ್ಣಗೊಂಡಿದೆ. ಬಳಿಕ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನಗಳಲ್ಲಿ ಅನುಷ್ಠಾನ ಪ್ರಕ್ರಿಯೆ ಮುಗಿದು, ಉಡುಪಿಯ ಉಪ ನೋಂದಣಿ ಕೇಂದ್ರಗಳಲ್ಲಿ ಅನುಷ್ಠಾನಗೊಳ್ಳಲಿದೆ. ಉಡುಪಿಯ 6 ಉಪ ನೋಂದಣಿ ಕೇಂದ್ರಗಳು ಹಾಗೂ ದ.ಕ. ಜಿಲ್ಲೆಯ 9 ಉಪ ನೋಂದಣಿ ಕೇಂದ್ರಗಳಲ್ಲಿ ಈ ತಂತ್ರಾಂಶ ಜಾರಿಯಾಗಲಿದೆ.
ರಾಜ್ಯ ಸರಕಾರವು ಮಂಗಳೂರು ತಾಲೂಕು ಸೇರಿದಂತೆ ರಾಜ್ಯದ 6 ಉಪ ನೋಂದಣಿ ಕೇಂದ್ರಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಸಲು ಮುಂದಾಗಿತ್ತು. ಅದರಂತೆ ಚಿಂಚೋಳಿಯಲ್ಲಿ ಫೆ. 1ರಂದು ಪ್ರಾಯೋಗಿಕವಾಗಿ ಜಾರಿಯಾಗಿ, ಫೆ. 2ನೇ ವಾರದಲ್ಲಿ ಮಂಗಳೂರು ತಾಲೂಕಿನಲ್ಲಿಯೂ ತಂತ್ರಾಂಶ ಅಳವಡಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ತಂತ್ರಾಂಶದ ಬಗ್ಗೆ ಗೊಂದಲಗಳಿವೆ ಎಂಬ ಕಾರಣಕ್ಕೆ ಪ್ರಾಯೋಗಿಕ ಜಾರಿ ಪ್ರಕ್ರಿಯೆ ಕೈ ಬಿಡುವಂತೆ ವಕೀಲರ ಸಂಘ ಆಕ್ಷೇಪಿಸಿದ್ದ ಕಾರಣ, ಪ್ರಾಯೋಗಿಕ ಜಾರಿಯನ್ನು ಮಂಗಳೂರು ತಾಲೂಕಿನಲ್ಲಿ ಸ್ಥಗಿತಗೊಳಿಸಲಾಗಿತ್ತು.
ಈ ನಡುವೆ, ರಾಜ್ಯದ ಹಲವು ಕಡೆಗಳಲ್ಲಿ ಪ್ರಾಯೋಗಿಕ ಜಾರಿಯ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾ. 21ರಂದು ಅಧಿಸೂಚನೆ ಪ್ರಕಟಿಸಿ ರಾಜ್ಯದ ಎಲ್ಲ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ಉಪ ನೋಂದಣಿ ಕಚೇರಿಗಳಲ್ಲಿ ನಿಯಮಾನುಸಾರ ತಂತ್ರಾಂಶವನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿತ್ತು. ಇದರಂತೆ ಮೈಸೂರು ವಿಭಾಗದಲ್ಲಿ ಎಪ್ರಿಲ್ 1ರಂದು ಮಂಡ್ಯದ ಮದ್ದೂರು ಉಪ ನೋಂದಣಿ ಕೇಂದ್ರದ ಮೂಲಕ ಅನುಷ್ಠಾನ ಪ್ರಕ್ರಿಯೆ ಚಾಲನೆಗೊಂಡಿತ್ತು.
ಪಾಸ್‌ಪೋರ್ಟ್ ಕಚೇರಿ ಮಾದರಿ ಸೇವೆ
ಕಾವೇರಿ ತಂತ್ರಾಂಶ- 2ರಡಿ ಉಪ ನೋಂದಣಿ ಕಚೇರಿಗಳಲ್ಲಿ ಸ್ಥಿರಾಸ್ತಿ, ಚರಾಸ್ತಿ, ದಸ್ತಾವೇಜು, ನೋಂದಣಿ ಪ್ರಕ್ರಿಯೆ ಸುಮಾರು 15 ನಿಮಿಷಗಳಲ್ಲಿ ಮುಗಿಯಲಿದ್ದು, ಪಾಸ್‌ಪೋರ್ಟ್ ಕಚೇರಿ ಮಾದರಿಯಲ್ಲಿ ಆಸ್ತಿ ನೋಂದಣಿದಾರರಿಗೆ ಸೇವೆ ಲಭ್ಯವಾಗಲಿದೆ.
“ಕಾವೇರಿ-2′ ಕೇಂದ್ರೀಕೃತ (ರಾಜ್ಯ ದತ್ತಾಂಶ ಕೋಶ) ಸರ್ವರ್ ವ್ಯವಸ್ಥೆಯನ್ನು ಹೊಂದಿರಲಿದ್ದು, ಇಲ್ಲಿ ನೋಂದಣಿ ಮಾಡುವುದು ಮಾತ್ರವಲ್ಲದೆ, ಬಳಿಕ ಅಗತ್ಯ ದಾಖಲೆಗಳನ್ನು ಜನಸಾಮಾನ್ಯರು ಪಡೆಯುವುದು ಕೂಡ ಸುಲಭ. ನೋಂದಣಿಯಾದ ದಾಖಲೆಗಳು ಡಿಜಿ ಲಾಕರ್‌ನಲ್ಲಿಯೂ ಲಭ್ಯವಾಗುವ ಕಾರಣ ಸಾರ್ವಜನಿಕರು ದೃಢೀಕೃತ ದಾಖಲೆಯ ಪ್ರತಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಉಪ ನೋಂದಣಾಧಿಕಾರಿಯ ಡಿಜಿಟಲೀಕೃತ ಸಹಿಯುಳ್ಳ ದಾಖಲೆಗಳ ಪ್ರತಿಯನ್ನು ಡಿಜಿ ಲಾಕರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಬಳಕೆದಾರರು ಅಗತ್ಯ ವಿವರ, ದಾಖಲೆ ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿ ನಿರ್ದಿಷ್ಟ ಸಮಯ ಗೊತ್ತುಪಡಿಸಿಕೊಂಡು ನೋಂದಣಿಗೆ ಸಮಯ ನಿಗದಿಪಡಿಸಿಕೊಳ್ಳಲು ಈ ತಂತ್ರಾಂಶದಲ್ಲಿ ಅವಕಾಶವಿದೆ. ಆಯಾ ಉಪ ನೋಂದಣಿ ಕೇಂದ್ರಗಳಲ್ಲಿ ಈ ತಂತ್ರಾಂಶ ಅನುಷ್ಠಾನಗೊಂಡ ದಿನಾಂಕದಿಂದ ಆಸ್ತಿ ನೋಂದಣಿಗೆ ಮ್ಯಾನುವಲ್ ಚಲನ್ ಬಳಕೆಯಾಗದು.