ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 30ನೇ ಮೇಯರ್ ಆಗಿ ಕಾಂಗ್ರೆಸ್‌ನ ಕವಿತಾ ಸನಿಲ್ ಹಾಗೂ ಉಪಮೇಯರ್ ಆಗಿ ರಜನೀಶ್ ಆಯ್ಕೆಯಾಗಿದ್ದಾರೆ.
ಪಾಲಿಕೆ ಪರಿಷತ್ 19ನೇ ಅವಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕವಿತಾ ಸನಿಲ್ ಹಾಗೂ ಬಿಜೆಪಿಯಿಂದ ಪೂರ್ಣಿಮಾ ಸ್ಪರ್ಧಿಸಿದ್ದರು. ಕವಿತಾ ಅವರು ಪೂರ್ಣಿಮಾ ವಿರುದ್ಧ 18 ಮತಗಳ ಅಂತರದಿಂದ ಜಯ ಸಾಧಿಸಿ ಮೇಯರ್ ಆಗಿ ಚುನಾಯಿತರಾದರು.
60 ಸದಸ್ಯಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಓರ್ವ ಸಂಸದ, ಇಬ್ಬರು ಶಾಸಕರು ಹಾಗೂ ಇಬ್ಬರು ವಿ. ಪರಿಷತ್ ಸದಸ್ಯರು ಸೇರಿ ಒಟ್ಟು 65 ಮಂದಿಗೆ ಮತದಾನ ಮಾಡಲು ಅವಕಾಶವಿದೆ. ಇದರಲ್ಲಿ ಸಂಸದ ನಳಿನ್ ಹಾಗೂ ವಿ. ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಗೈರು ಹಾಜರಾಗಿದ್ದರು. ವಿ. ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ, ಶಾಸಕರಾದ ಜೆ.ಆರ್. ಲೋಬೋ, ಮೊದಿನ್ ಬಾವ ಮತದಾನ ಮಾಡಿದರು.
ಕವಿತಾ ಸನಿಲ್ ಪರವಾಗಿ ಒಟ್ಟು 38 ಮತಗಳು ಚಲಾವಣೆಯಾದರೆ, ಪೂರ್ಣಿಮಾ ಅವರ ಪರವಾಗಿ 20 ಮತಗಳು ಚಲಾವಣೆಯಾದವು. ಒಟ್ಟು 60 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್-35, ಬಿಜೆಪಿ-20, ಜೆಡಿಎಸ್-2, ಎಸ್‌ಡಿಪಿಐ-1, ಸಿಪಿಎಂ-1 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಜೆಡಿಎಸ್, ಎಸ್‌ಡಿಪಿಐ, ಸಿಪಿಎಂ ಹಾಗೂ ಪಕ್ಷೇತರ ಸದಸ್ಯರು ತಟಸ್ಥರಾಗಿ ಉಳಿದಿದ್ದರು.
ನೂತನ ಮೇಯರ್ ಕವಿತಾ ಸನಿಲ್ ಕರಾಟೆ ಹಾಗೂ ಪವರ್‌ಲಿಫ್ಟಿಂಗ್‌ನಲ್ಲಿ ರಾಷ್ಟ್ರೀಯ- ಅಂತಾರಾಷ್ಟ್ರೀಯವಾಗಿ ಹಲವು ಪ್ರಶಸ್ತಿ ಪಡೆದಿದ್ದಾರೆ. 1992ರಿಂದ 2008ರ ವರೆಗೆ ಕರಾಟೆಯಲ್ಲಿ ರಾಷ್ಟ್ರೀಯ ಪದಕಗಳನ್ನು ಪಡೆದಿದ್ದಾರೆ. ಅವರು ಒಟ್ಟು 58 ಚಿನ್ನದ ಪದಕ, 18 ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಉಪಮೇಯರ್ ಅವಿರೋಧ ಆಯ್ಕೆ
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ರಜನೀಶ್ ಅವರ ಏಕಮಾತ್ರ ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾದರು. ಮೇಯರ್ ಹಾಗೂ ಉಪಮೇಯರ್ ಚುನಾವಣೆ ಬಳಿಕ, ಪಾಲಿಕೆಯ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆಯಿತು.
ನೂತನ ಮೇಯರ್, ಉಪ ಮೇಯರ್ ಅಧಿಕಾರಾವಧಿ 2018ರ ಮಾ. 8ರ ವರೆಗೆ ಇರಲಿದೆ.