ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ದಿವಂಗತ ನಟ ಸಂಚಾರಿ ವಿಜಯ್ ಅವರ ಆಸೆಯನ್ನು ಗೀತ ರಚನಾಕಾರ ಕವಿರಾಜ್ ಅವರು ಪೂರ್ಣಗೊಳಿಸುತ್ತಿದ್ದಾರೆ.
ಕೋವಿಡ್ ಸಂಕಷ್ಟ ಸಮಯದಲ್ಲಿ ಸಂಚಾರಿ ವಿಜಯ್ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಕಾರಿನಲ್ಲಿ ಫುಡ್ ಕಿಟ್ ಗಳನ್ನು ತೆಗೆದುಕೊಂಡು ಅಗತ್ಯ ಇರುವವರಿಗೆ ತಲುಪಿಸುತ್ತಿದ್ದರು. ಕವಿರಾಜ್ ಅವರ ‘ಉಸಿರು’ ತಂಡದ ಜೊತೆ ಕೈ ಜೋಡಿಸಿ ಸಾಕಷ್ಟು ಒಳ್ಳೆಯ ಕಾರ್ಯದಲ್ಲಿ ಭಾಗವಹಿಸಿದ್ದರು.
ಸಂಚಾರಿ ವಿಜಯ್ ಅವರು ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಹಾಡಿ ಮನೆಗಳ ಶಿಥಿಲ ಮೇಲ್ಚಾವಣೆ ಹೊದಿಸುವ ಉದ್ದೇಶ ಹೊಂದಿದ್ದರು. ಆದರೆ, ಅಷ್ಟರಲ್ಲಾಗಲೇ ಅವರ ಇಹಲೋಕ ತೈಜಿಸಿದರು. ಅವರು ಮಾಡಬೇಕು ಎಂದಿದ್ದ ಕಾರ್ಯವನ್ನು ಇದೀಗ ಕವಿರಾಜ್ ಅವರು ಪೂರ್ಣಗೊಳಿಸುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಉಸಿರು ಬಳಗದ ವತಿಯಿಂದ ನಮ್ಮ ಬಳಗದಲ್ಲಿದ್ದ ಸಂಚಾರಿ ವಿಜಯ್ ಅವರ ಆಶಯದ ಅಪೂರ್ಣ ಕಾರ್ಯಗಳಲ್ಲೊಂದಾದ ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಹಾಡಿ ಮನೆಗಳ ಶಿಥಿಲ ಮೇಲ್ಚಾವಣಿಗಳಿಗೆ ಟಾರ್ಪಾಲಿನ್ ಹೊದಿಕೆ ಹೊದಿಸುವ ಕಾರ್ಯಕ್ಕೆ ಸಕಲ ಸಿದ್ಧತೆಯಾಗಿದೆ. ಟಾರ್ಪಾಲಿನ್ ಕಂಪೆನಿಯವರನ್ನೇ ಕರೆದುಕೊಂಡು ಹೋಗಿ ಅಳತೆ ಪಡೆದು ಬಂದ 60 ಮನೆಗಳ ಪಟ್ಟಿಗೆ ತಕ್ಕಂತೆ ಟಾರ್ಪಾಲಿನ್ ಕಟ್ ಮಾಡಿಸಿ ಹುಕ್ಸ್ ಹಾಕಿಸಿ ಹೊಲಿಸಿ ಕಂಪೆನಿಯ ನುರಿತ ಕೆಲಸಗಾರರರನ್ನೇ ಕರೆದುಕೊಂಡು ಹೋಗಿ ಬಹಳ ವ್ಯವಸ್ಥಿತವಾಗಿ ಗಟ್ಟಿ ಮುಟ್ಟಾಗಿ ಅವನ್ನು ಅಳವಡಿಸಿ ಬರುವ ಕಾರ್ಯಕ್ರಮ ಈ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿದ್ದೇವೆ. ಅದೇ ಜಾಗದಲ್ಲೇ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸುವ ಪುಟ್ಟ ಕಾರ್ಯಕ್ರಮವು ನಡೆಯಲಿದೆ. ಬಹುತೇಕ ನಮ್ಮ ಉಸಿರು ಬಳಗ ಅಲ್ಲಿ ಭಾಗವಹಿಸಲಿದೆ’ ಎಂದು ಕವಿರಾಜ್ ಹೇಳಿದ್ದಾರೆ.
ಇನ್ನು ಸಂಚಾರಿ ವಿಜಯ್ ಅವರು ಕೇಲವ ನಟನಾಗಿ ಗುರುತಿಸಿಕೊಂಡಿರಲಿಲ್ಲ. ಸಮಾಜಪರ ಕಳಕಳಿ ಹೊಂದಿದ್ದ ಅವರು ಬಡವರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಅದಕ್ಕೆ ಸಾಕ್ಷಿ ಬುಡಕಟ್ಟು ಜನಾಂಗದ ಗುಡಿಸಲುಗಳಿಗೆ ಟರ್ಪಾಲ್ ಹೊದಿಸುವುದಾಗಿತ್ತು. ಇದೀಗ ಅದು ನನಸಾಗುತ್ತಿದೆ.