ಮೈಸೂರು: ಜೀವನದಿ ಕಾವೇರಿ ಉಳಿವಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಕೈಗೊಂಡಿರುವ ಕಾವೇರಿಯಾತ್ರೆ ಮತ್ತು ವಾಹನ ಜಾಥಾ ಮೈಸೂರಿನಲ್ಲಿ ಸಂಚರಿಸಿ ಜೀವನದಿ ಕಾವೇರಿ ಉಳಿಸುವಂತೆ ಜಾಗೃತಿ ಮೂಡಿಸಿದೆ ಎಂದು ಕೌನ್ಸಿಲ್‌ನ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪತ್ತಿನಲ್ಲಿರುವ ದಕ್ಷಿಣ ಭಾರತದ ಜೀವನದಿ ಕಾವೇರಿ ರಕ್ಷಿಸುವಂತೆ ಜಾಗೃತಿ ಮೂಡಿಸಲು ತಲಕಾವೇರಿಯಿಂದ ಪೂಂಪ್‌ಹಾರ್‌ವರೆಗೆ ಕಾವೇರಿ ಯಾತ್ರೆ ಮತ್ತು ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ.
ಇದರ ಮೂಲಕ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಮತ್ತು ನದಿಪಾತ್ರದ ಜನರನ್ನು ಕಾವೇರಿ ರಕ್ಷಣೆಗೆ ಮುಂದಾಗಲು ಅಣಿಯಾಗಿಸುವ ಸಲುವಾಗಿ ಯಾತ್ರೆ ನಡೆಸಲಾಗುತ್ತಿದೆ.
ಮೇ 24ರಂದು ತಲಕಾವೇರಿಯಿಂದ ಪ್ರಾರಂಭವಾದ ಈ ಯಾತ್ರೆ ನಾಪೋಕ್ಲು, ಮಡಿಕೇರಿ, ಮೂರ್ನಾಡು, ಗೋಣಿಗೊಪ್ಪ, ಸಿದ್ದಾಪುರ, ಕುಶಾಲನಗರ ಮಾರ್ಗವಾಗಿ ಹೊಗೆನಕಲ್ ಫಾಲ್ಸ್ ಮೂಲಕ ಮೇ 26ರಂದು ತಮಿಳುನಾಡು ಪ್ರವೇಶಿಸಿ, ಮೇ 30ರಂದು ಪೂಂಪ್‌ಹಾರ್‌ನಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.
ಉತ್ತರಖಂಡ್ ಮತ್ತು ಮಧ್ಯಪ್ರದೇಶ ಸರ್ಕಾರಗಳು ಈಗಾಗಲೇ ಗಂಗಾ, ಯಮುನಾ ಮತ್ತು ನರ್ಮದಾ ನದಿಗಳಿಗೆ ಜೀವಂತ ವ್ಯಕ್ತಿ(ಲಿವಿಂಗ್ ಎಂಟಿಟಿ ವಿತ್ ದ ಸ್ಟೇಟಸ್ ಆಪ್ ಲೀಗಲ್ ಪರ್ಸನ್)ಯ ಶಾಸನಬದ್ಧ ಕಲ್ಪಿಸಿದ್ದು, ಅದೇ ರೀತಿಯಲ್ಲಿ ಕಾವೇರಿ ನದಿಗೂ ಶಾಸನಬದ್ಧ ಸ್ಥಾನಮಾನ ನೀಡಬೇಕಿದೆ.
ಒಂದೊಮ್ಮೆ ಕಾವೇರಿ ನದಿಯ ವಿಚಾರದಲ್ಲಿ ಎಚ್ಚರ ವಹಿಸದಿದ್ದರೆ ನಾವು ಕಾವೇರಿ ನದಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮುತ್ತಮ್ಮ ಪೊನ್ನಂಚಿ, ಡಾ.ಪದ್ಮಿಣಿ, ಸ್ವಾತಿ ಕಿರಣ್, ಶಾಂತಿ ಸೋಮಯ್ಯ, ರೇಖಾ ನಾಚಪ್ಪ, ಸ್ವಾತಿ ಕಾಳಪ್ಪಹಾಜರಿದ್ದರು.