Advertisement

2 ತಿಂಗಳಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರು

09:59 AM Jul 22, 2023 | Team Udayavani |

ಬೆಂಗಳೂರು: ಜಲಮಂಡಳಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಕಾವೇರಿ 5ನೇ ಹಂತದ ಯೋಜನೆಯು ಅಂತಿಮ ಹಂತದಲ್ಲಿದ್ದು, ಮುಂದಿನ ಎರಡೇ ತಿಂಗಳುಗಳಲ್ಲಿ ಬೆಂಗಳೂರು ಹೊರ ವಲಯದಲ್ಲಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಹರಿದು ಬರಲಿದೆ.

Advertisement

ಜಲಮಂಡಳಿಯು ಕೈಗೆತ್ತಿಕೊಂಡಿರುವ ಕಾವೇರಿ 5ನೇ ಹಂತದ ಯೋಜನೆಯು ಹಲವಾರು ವರ್ಷಗಳ ಬಳಿಕ ಕೊನೆಗೂ ಅಂತಿಮ ಹಂತಕ್ಕೆ ಬಂದು ನಿಂತಿದೆ. 110 ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಈಗಾಗಲೇ ಪ್ರತಿ ಬಡಾವಣೆಗಳಲ್ಲಿ ಪೈಪ್‌ಲೈನ್‌ (ಕೊಳವೆಗಳು) ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಕಾವೇರಿ ನದಿಯಿಂದ ಹಳ್ಳಿಗಳಿಗೆ ನೀರು ಪೂರೈಸಲು ಬೇಕಾಗಿರುವ ಪೈಪ್‌ ಲೈನ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಕೊಳವೆಗಳ ಜೋಡಣೆ ಕಾಮಗಾರಿಗೆ ಸ್ವಲ್ಪ ದಿನ ಗಳು ಹಿಡಿಯಬಹುದು. ಈ ಕಾಮಗಾರಿ ಮುಗಿದ ಬೆನ್ನಲ್ಲೇ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಅಕ್ಟೋಬರ್‌ನಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲಾಗು ವುದು ಎಂದು ಜಲಮಂಡಳಿ ಅಧ್ಯಕ್ಷ ಎನ್‌.ಜಯರಾಮ್‌ ಉದಯವಾಣಿಗೆ ತಿಳಿಸಿ ದ್ದಾರೆ.

ಜೈಕಾದಿಂದ 4,661 ಕೋಟಿ ರೂ. ಸಾಲ: ಕಾವೇರಿ 5ನೇ ಹಂತದ ಯೋಜನೆಯನ್ನು ಜಪಾನ್‌ ಇಂಟರ್‌ ನ್ಯಾಷನಲ್‌ ಕೋ- ಆಪರೇಟಿವ್‌ ಏಜೆನ್ಸಿ (ಜೈಕಾ) ಆರ್ಥಿಕ ನೆರವಿ ನೊಂದಿಗೆ ಕೈಗೆತ್ತಿಕೊಳ್ಳಲಾಗಿದೆ. ಜೈಕಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಯೋಜನೆಗೆ 5,550 ಕೋಟಿ ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಜೈಕಾದಿಂದ 4,661 ಕೋಟಿ ರೂ. (ಶೇ.84) ಸಾಲದ ನೆರವು ಪಡೆಯ ಲಾಗಿದೆ. ರಾಜ್ಯ ಸರ್ಕಾರವು 444.50 ಕೋಟಿ ರೂ. (ಶೇ.8) ಆರ್ಥಿಕ ಸಹಾಯ ನೀಡಿದೆ. ಇನ್ನು ಜಲಮಂಡಳಿ ಪಾಲೂ ಸಹ 444.50 ಕೋಟಿ ರೂ. (ಶೇ.8) ಇದೆ. ನೀರು ಸರಬರಾಜು ಯೋಜ ನೆಗಾಗಿ 4,336 ಕೋಟಿ ರೂ. ಹಾಗೂ ಸಮಾಲೋ ಚಕರ ಸೇವೆಯ ವೆಚ್ಚಕ್ಕೆ 224.47 ಕೋಟಿ ರೂ. ವ್ಯಯಿಸಲಾಗಿದೆ. ಈ ಯೋಜನೆಯಡಿಯಲ್ಲಿ ಶೇ.71.99ರಷ್ಟು ಬೌತಿಕ ಪ್ರಗತಿ ಹಾಗೂ ಶೇ.62.1ರಷ್ಟು ಆರ್ಥಿಕ ಪ್ರಗತಿ ಆಗಿದೆ.

ಮೂರು ಕಡೆ ಪಂಪಿಂಗ್‌ ಸ್ಟೇಷನ್‌: ಗ್ರಾಮಗಳಿಗೆ ನೀರು ಹರಿಸಲು ಬೇಕಾಗುವ ಪಂಪಿಂಗ್‌ ಸ್ಟೇಷನ್‌ ಗಳನ್ನು ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿ ಯಲ್ಲಿ ನಿರ್ಮಿಸಲು ಚಿಂತನೆ ನಡೆದಿದೆ. ಕಾವೇರಿ ನದಿಯಿಂದ ನಗರಕ್ಕೆ ಕೊಳವೆ ಜೋಡಣೆ ಮಾಡುವ ಕಾಮಗಾರಿಗೆ ಕಾರ್ಮಿಕರನ್ನು ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಉತ್ತರ ಪ್ರದೇಶ ದಂತಹ ರಾಜ್ಯಗಳಿಂದ ಕರೆ ತರಲಾಗುತ್ತಿದೆ. ಕೆಲ ತಿಂಗಳ ಹಿಂದೆಯೇ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್‌, ಕಾರ್ಮಿಕರ ಕೊರತೆ, ವಿದೇಶಗಳಿಂದ ಬಿಡಿ ಭಾಗಗಳ ಆಮದು ವಿಳಂಬ ಸೇರಿದಂತೆ ಕಾರಣಾಂತರಗಳಿಂದ ಯೋಜನೆ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ವಿದೇಶಗಳಿಂದ ಯಂತ್ರ ಆಮದು : ನೀರನ್ನು ಸಮರ್ಥವಾಗಿ ಪೂರೈಸಬಲ್ಲ ಪಂಪ್‌ಗ್ಳು, ಮೋಟಾರುಗಳು, ಸ್ಲೂಸ್‌ ವಾಲ್ವ್ ಗಳು, ಪಂಪ್‌ ಮಾನಿಟರಿಂಗ್‌ ಸಿಸ್ಟಮ್‌ಗಳು ಆಸ್ಟ್ರೇಲಿಯಾ, ಟರ್ಕಿ, ಜಪಾನ್‌ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ನೀರು ಶುದ್ಧೀಕರಣ ಯಂತ್ರಗಳು, ಸೆನ್ಸಾರ್‌ಗಳನ್ನು ಜರ್ಮನಿ ಹಾಗೂ ಫ್ರಾನ್ಸ್‌ನಿಂದ ತರಿಸಿಕೊಳ್ಳಲಾಗಿದೆ. ಲಭ್ಯವಿರುವ ನೀರು ಬಳಸಿಕೊಂಡು 110 ಹಳ್ಳಿಗಳ ಪೈಕಿ 51 ಹಳ್ಳಿಗಳಿಗೆ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. 9 ಪ್ಯಾಕೇಜ್‌ಗಳಲ್ಲಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯು ಮುಕ್ತಾಯಗೊಂಡ ಬಳಿಕ ಬಿಬಿಎಂಪಿ ವ್ಯಾಪ್ತಿಗೆ ಬರುವ 110 ಹಳ್ಳಿಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜಾಗಲಿದೆ. ‌

Advertisement

110 ಹಳ್ಳಿಗಳು ಯಾವುವು?: ಮಹದೇವಪುರ ವಲಯಗಳಲ್ಲಿ ಚೆನ್ನಸಂದ್ರ, ದೇವರಬೀಸನಹಳ್ಳಿ, ಕಾಡಬೀಸನಹಳ್ಳಿ, ವರ್ತೂರು, ಹೊರಮಾವು ಸೇರಿ 23 ಹಳ್ಳಿಗಳು ಬರಲಿವೆ. ಆರ್‌ಆರ್‌ ನಗರ ವಲಯಗಳಲ್ಲಿ ಉಳ್ಳಾಲು, ವಸಂತಪುರ, ಹೊಸಹಳ್ಳಿ, ಸುಬ್ರಹ್ಮಣ್ಯಪುರ, ಸೋಂಪುರ, ಹೆಮ್ಮಿಗೆಪುರ ಸೇರಿ 17 ಹಳ್ಳಿಗಳು ಬರಲಿವೆ. ಬ್ಯಾಟರಾಯನಪುರ ವಲಯಗಳಲ್ಲಿ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಗೋವಿಂದಪುರ, ಹೊರಮಾವು ಆಗರ, ಬೈರತಿ, ದಾಸರಹಳ್ಳಿ, ಚಿಕ್ಕನಹಳ್ಳಿ, ಕೊತ್ತನೂರು ಸೇರಿ 26 ಹಳ್ಳಿಗಳು ಬರಲಿವೆ. ಬೊಮ್ಮನಹಳ್ಳಿ ವಲಯಗಳಲ್ಲಿ ಅಂಬಲಿಪುರ, ಬೇಗೂರು ಸೇರಿ 33 ಹಳ್ಳಿಗಳು ಬರಲಿವೆ. ದಾಸರಹಳ್ಳಿ ವಲಯಗಳಲ್ಲಿ ಚಿಕ್ಕಲಸಂದ್ರ, ಅಬ್ಬಿಗೆರೆ, ಹೇರೋಹಳ್ಳಿ, ಹೊಸಹಳ್ಳಿ ಸೇರಿದಂತೆ 11 ಗ್ರಾಮಗಳು ಬರಲಿವೆ.

5ನೇ ಹಂತದ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಯೋಜನೆಯಿಂದ ಲಕ್ಷಾಂತರ ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ನಗರದ ಬಹುತೇಕ ಕಡೆ ನೀರಿನ ಸಮಸ್ಯೆ ನೀಗಿಸಲು ಸಹಕಾರಿ. ●ಎನ್‌.ಜಯರಾಮ್‌, ಅಧ್ಯಕ್ಷ, ಜಲಮಂಡಳಿ

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next