Advertisement

ಕವನಗಳು ಓದುವ ಆಸಕ್ತಿ ಹೆಚ್ಚಿಸಲಿ : ಶ್ರೀ

07:05 PM Feb 08, 2021 | Team Udayavani |

ಗದಗ: ಇತ್ತೀಚಿನ ದಿನಗಳಲ್ಲಿ ಅನೇಕ ಕವನ ಸಂಕಲನಗಳು ಬಿಡುಗಡೆಯಾದರೂ, ಬಹುಪಾಲು ಕವನಗಳು  ಓದಿಸಿಕೊಂಡು ಹೋಗುವಲ್ಲಿ ವಿಫಲವಾಗುತ್ತವೆ. ಆದರೆ, ನಿರ್ಮಲಾ ಶೆಟ್ಟರ ವಿರಚಿತ “ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನ ಇದಕ್ಕೆ ಅಪವಾದ. ಸರಳ ನಿರೂಪಣೆ ಹೊಂದಿರುವ ಈ ಕೃತಿ ಎಲ್ಲ ಸರಹದ್ದು ಒಡೆದು ಯಶಸ್ಸಿನತ್ತ ಮುನ್ನುಗ್ಗುವ ಪ್ರಜ್ಞೆ ಮೂಡಿಸುತ್ತದೆ ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಲಕ್ಷ್ಮೇಶ್ವರದ ಪಾಲ್ಗುಣಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ “ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಕವನದ ಆಶಯಗಳು ಟಿಪ್ಪಣಿ ಮಾಡಿಟ್ಟುಕೊಳ್ಳಲು ಯೋಗ್ಯವಾಗಿವೆ. ಕಾವ್ಯ ರಚನೆಗೆ ಎಲ್ಲೆಗಳಿಲ್ಲ, ಉದ್ದೇಶ ಮೌಲ್ಯಯುತವಾಗಿದ್ದರೆ ಅವುಗಳ ಹುಟ್ಟು-ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಬದುಕಿನ ಪ್ರತಿ ಹಂತದಲ್ಲೂ ಆಶಾಭಾವನೆ ಇಟ್ಟುಕೊಳ್ಳಬೇಕು ಎಂದು ಕಲಿಸುವ ಈ ಕವನ ಸಂಕಲನ ಬದುಕಿಗೆ ನವಚೈತನ್ಯ ತುಂಬಬಲ್ಲದು.

ಡಾ| ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯೋಜಕ ಡಾ| ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು, ಮಕ್ಕಳಿಗೆ ಸರ್ವರಂಗಗಳಲ್ಲೂ ಸ್ವಾತಂತ್ರ್ಯ ದೊರೆತರೆ ಉತ್ತುಂಗಕ್ಕೆ ತಲುಪಬಲ್ಲರು. ಅವರು ಸಮಾಜಕ್ಕೆ ಅದ್ವಿತೀಯ ಕೊಡುಗೆ ನೀಡಬಲ್ಲರು. ನಮ್ಮದು ಮರೆವಿನ ಸಂಸ್ಕೃತಿಯಾಗದೇ, ಅರಿವಿನ ಸಂಸ್ಕೃತಿಯಾಗಿ ಕಾಲವಾಹಿನಿಯ ಹರವಿನ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದರು.

ಸಂಶೋಧಕ ಡಾ| ದೇವೇಂದ್ರಪ್ಪ ಜಾಜಿ ಮಾತನಾಡಿ, ಆಧುನಿಕ ಯುಗದ ಭರಾಟೆ ಬದುಕಿನ ಜಂಜಾಟಕ್ಕೆ ಕಾವ್ಯ ಮದ್ದಾಗಿದೆ. ಮಾನವ ತನ್ನ ಚೌಕಟ್ಟಿಗೆ ಸೀಮಿತವಾಗುವ ಸಂಕುಚಿತತೆ ತೊರೆದು, ಎಲ್ಲೆ ಮೀರಿ ಬೆಳೆಯುವ ಪ್ರವೃತ್ತಿಯುಳ್ಳವನಾಗಬೇಕು ಎಂದರು.

Advertisement

ಪತ್ರಕರ್ತ ನಾಗರಾಜ ಹರಪನಹಳ್ಳಿ ಮಾತನಾಡಿ, ಕಾವ್ಯ ಮತ್ತು ಚಳವಳಿಗಳು ಒಂದಾಗಬೇಕು. ಸಾಹಿತಿಗಳು ಅಹಮ್ಮಿಕೆ ತೊರೆದು, ಬಸವಣ್ಣನಂತೆ “ಎನಗಿಂತ ಕಿರಿಯರಿಲ್ಲ’ ಎಂಬ ವಿನೀತ ಸದ್ಭಾವನೆ ಬೆಳೆಸಿಕೊಂಡರೆ, ಜನ ಅವರನ್ನು ಒಪ್ಪಿ-ಅಪ್ಪುವುದರಲ್ಲಿ ಸಂಶಯವಿಲ್ಲ. ನಿರ್ಮಲಾ ಶೆಟ್ಟರ್‌ ಕವನ ಸಂಕಲನ ಪ್ರಕೃತಿ ಮತ್ತು ಮಹಾತ್ಮರ ಜೀವನ ದರ್ಶನ ಒಳಗೊಂಡು, ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಅಪರೂಪದ ಕೃತಿಯಾಗಿದೆ ಎಂದರು.

ಇದನ್ನೂ ಓದಿ :ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ದೌರ್ಜನ್ಯ : ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಸಾಹಿತಿ ಡಾ| ಆನಂದ ಋಗ್ವೇದಿ ಕೃತಿ ಪರಿಚಯಿಸಿದರು. ಕವನ ಸಂಕಲನದ ಲೇಖಕಿ ನಿರ್ಮಲಾ ಶೆಟ್ಟರ್‌ ಮಾತನಾಡಿ, ತಮ್ಮ ಕವನ ಸಂಕಲನದ ಆಶಯ ತಿಳಿಸಿದರು. ಇದೇ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ಈರಮ್ಮ ಮುತಗಾರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವಿಜಯ ಕಿರೇಸೂರ, ಸಾಹಿತಿಗಳಾದ ಪ್ರಕಾಶ ಖಾಡೆ, ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ, ಅಣ್ಣಿಗೇರಿಯ ದಿ. ನಿಂಗಮ್ಮ ಹೂಗಾರ ಕಾಲೇಜಿನ ಪ್ರಾಚಾರ್ಯ ಎಸ್‌.ಎಸ್‌. ಹರ್ಲಾಪುರ, ಸಾಹಿತಿ ಎ.ಎಸ್‌. ಮಕಾನದಾರ, ವಿನಾಯಕ ಕಮತದ, ಮರುಳಸಿದ್ಧಪ್ಪ ದೊಡ್ಡಮನಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ತೋಂಟದಾರ್ಯ ಮಠದ ಶಿವಾನುಭವ ಸಮಿತಿ ಚೇರ್‌ಮನ್‌ ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. ಪ್ರೊ| ಕೆ.ಬಿ. ಸಂಕನಗೌಡರ ನಿರೂಪಿಸಿದರು. ಪ್ರೊ| ಶಿವರಾಮ ಬಂಡೇಮೇಗಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next