Advertisement

ಕಾಪು ಸುಗ್ಗಿ ಮಾರಿಪೂಜೆ: ಪುರಸಭೆ ವತಿಯಿಂದ ಸ್ವಚ್ಛತೆಗೆ ಆದ್ಯತೆ

10:13 PM Mar 28, 2018 | Team Udayavani |

ವಿಶೇಷ ವರದಿ
ಕಾಪು: ಎರಡು ದಿನಗಳ ಕಾಲ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಕಾಪು ಸಿದ್ಧಗೊಂಡಿದ್ದು, ಸ್ವಚ್ಛ ಕಾಪು – ಸುಂದರ ಕಾಪು ಘೋಷಣೆಯೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಪು ಪುರಸಭೆ ಕೂಡಾ ವಿವಿಧ ಸಿದ್ಧತೆಗಳನ್ನು ನಡೆಸಿದೆ. ಕಾಪುವಿನ ಮೂರು ಮಾರಿಗುಡಿಗಳ ಆಸುಪಾಸಿನಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ವ್ಯಾಪಕ ಕ್ರಮ ತೆಗೆದುಕೊಂಡಿದೆ. ಸಂಪೂರ್ಣ ಸ್ವಚ್ಛತೆಯ ಚಿಂತನೆಯೊಂದಿಗೆ ಸುಮಾರು 25 ಮಂದಿ ಪೌರ ಕಾರ್ಮಿಕರನ್ನು ಸ್ವಚ್ಛತಾ ಕೆಲಸಕ್ಕಾಗಿ ನಿಯೋಜಿಸಲಾಗಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

Advertisement

ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣ, ತ್ಯಾಜ್ಯ ಮುಕ್ತ ಕಾಪು ರಚನೆಯೂ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅವರು ಉದಯವಾಣಿಗೆ ತಿಳಿಸಿದ್ದಾರೆ.

24×7 ಮಾದರಿಯಲ್ಲಿ ಕಾರ್ಯನಿರ್ವಹಣೆ
ಕಾಪು ಪೇಟೆ ಮತ್ತು ಮೂರು ಮಾರಿಗುಡಿಗಳ ವಠಾರವೂ ಸೇರಿದಂತೆ ವಿವಿಧೆಡೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕಸ – ತ್ಯಾಜ್ಯ ಎಸೆಯಲು 45 ಡ್ರಮ್‌ಗಳನ್ನು ಇಡಲಾಗಿದೆ. ಸ್ವತ್ಛತೆಯ ಬಗ್ಗೆ ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧೆಡೆ ಸುಮಾರು 85ಕ್ಕೂ ಅಧಿಕ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಪೂರಕವಾಗಿ 25 ಮಂದಿ ಪೌರ ಕಾರ್ಮಿಕರು 24×7 ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಬಾರಿಯೂ ಇದೇ ರೀತಿಕಾರ್ಯನಿರ್ವಹಣೆ  
ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರಿಗೆ ಇದು 2ನೇ ಸುಗ್ಗಿ ಮಾರಿಪೂಜೆಯಾಗಿದ್ದು, ಕಳೆದ ವರ್ಷವೂ ಇದೇ ರೀತಿಯ ಸ್ವಚ್ಛತಾ ಕ್ರಮಗಳನ್ನು ಅನುಸರಿಸಿದ್ದರು. ಪುರಸಭೆಯ ಮೂಲಕವಾಗಿ ಸ್ವಚ್ಛತೆಗೆ ಪೂರಕವಾಗಿ, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕ ಪ್ರಶಂಸೆಗೂ ಕಾರಣರಾಗಿದ್ದರು.

ಪ್ಲಾಸ್ಟಿಕ್‌ ಬಳಸಿದಲ್ಲಿ ದಂಡ
ಘನ ಮತ್ತು ದ್ರವ ತ್ಯಾಜ್ಯವನ್ನು ಬೇರ್ಪಡಿಸಿ ಕಸದ ಬುಟ್ಟಿಯಲ್ಲಿ ಹಾಕುವ ಬಗ್ಗೆ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಎಲ್ಲೆಡೆಯಲ್ಲಿ ವಿವಿಧ ಪ್ರಚಾರ ಫಲಕಗಳನ್ನು ಅಳವಡಿಸಲಾಗಿದೆ. ಮಾರಿಪೂಜೆಯ ಸಂದರ್ಭ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್‌ ಬಳಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next