Advertisement
ಪುರಸಭೆ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಲ್ಲಾರು, ಉಳಿಯಾರಗೋಳಿ ಗ್ರಾಮಗಳ ಮನೆ ಮನೆಯಲ್ಲಿ ಸಂಗ್ರಹಿಸುವ ತ್ಯಾಜ್ಯ ವಸ್ತುಗಳನ್ನು ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿರುವ ಘನ ತ್ಯಾಜ್ಯ ನಿರ್ವಹಣ ಘಟಕದಲ್ಲಿ ಶೇಖರಿಸಲಾಗುತ್ತಿದ್ದು ಇಲ್ಲಿ ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ಹಸಿ ಕಸ, ಒಣ ಕಸ, ಮರು ಬಳಕೆಯ ಮತ್ತು ಅಪಾಯಕಾರಿ ಕಸಗಳನ್ನಾಗಿ ವಿಂಗಡಿಸಲಾಗುತ್ತದೆ.
ಹಸಿ ಕಸ ಗೊಬ್ಬರ ರೂಪದಲ್ಲಿ ಬಳಕೆಗಾಗಿ ಸ್ಥಳೀಯ ಕೃಷಿಕರು ಕೃಷಿ ಭೂಮಿ, ತೋಟ ಮತ್ತು ನರ್ಸರಿಗಳಿಗೆ ಬಳಸಲು ಕೊಂಡೊಯ್ಯತ್ತಾರೆ. ಆದರೆ ಈ ಬಾರಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಹಸಿ ಕಸ ಭಾರೀ ಮಳೆಯಿಂದಾಗಿ ವಿಲೇವಾರಿ ಘಟಕದಲ್ಲೇ ಕೊಳೆತು ಎಲ್ಲೆಡೆ ದುರ್ನಾತ ಬೀರುತ್ತಿದೆ. ಕೊಳೆತ ತ್ಯಾಜ್ಯ ವಸ್ತುಗಳ ರಾಶಿಯಿಂದ ಬರುವ ಕೊಳಚೆ ನೀರು ಸಮರ್ಪಕವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲದಿರುವುದರಿಂದ ಘಟಕದ ಸುತ್ತಮುತ್ತಲಿನ ಜನರಲ್ಲಿ ಸಾಂಕ್ರಾಮಿಕ ರೋಗ ಪಸರಿಸುವ ಭೀತಿ ಎದುರಾಗಿದೆ.
Related Articles
ಹೆದ್ದಾರಿ ಪಕ್ಕದಲ್ಲಿರುವ ಘಟಕಕ್ಕೆ ತಾಗಿಕೊಂಡು ಸಾರ್ವಜನಿಕ ಹಿಂದೂ ರುದ್ರ ಭೂಮಿ, ವಾಣಿಜ್ಯ ಕಟ್ಟಡ ಹಾಗೂ ಕೂಗಳತೆಯ ದೂರದಲ್ಲಿ ಮಹಾದೇವಿ ಪ್ರೌಢಶಾಲೆ, ಕಲ್ಕುಡ ದೈವಸ್ಥಾನ, ಪೆಟ್ರೋಲ್ ಬಂಕ್ ಮತ್ತು ಮಂದಾರ ಹೊಟೇಲ್ ಇದೆ. ಇಲ್ಲಿಂದ 100-150 ಮೀಟರ್ ವ್ಯಾಪ್ತಿಯೊಳಗೆ ಹಳೇ ಮಾರಿಯಮ್ಮ ದೇವಸ್ಥಾನ, ಕೊರಗಜ್ಜ ದೈವಸ್ಥಾನ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಶಾಲಾ ಮಕ್ಕಳು ಸುತ್ತಮುತ್ತಲಿನಲ್ಲಿ 20-25 ಮನೆಗಳಿವೆ. ಮನೆ ಬಾವಿಗಳಲ್ಲೂ ಕೊಳೆ ನೀರು ತುಂಬಿಕೊಳ್ಳುವಂತಾಗಿದೆ. ಇವರೆಲ್ಲರೂ ಇಲ್ಲಿನ ದುರ್ನಾತದ ವಾಸನೆಯಿಂದಾಗಿ ಮೂಗುಮುಚ್ಚಿಕೊಂಡು ಅಥವಾ ಪರ್ಯಾಯ ರಸ್ತೆ ಮೂಲಕ ಓಡಾಡಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.
Advertisement
ಶೀಘ್ರ ಶಾಶ್ವತ ಪರಿಹಾರರಾಷ್ಟ್ರೀಯ ಹೆದ್ದಾರಿ 66, ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳು ಹಾಗೂ ಜನ ವಸತಿ ಪ್ರದೇಶದ ಸನಿಹದಲ್ಲಿರುವ ಘನ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಹಸಿ ಕಸ ಮತ್ತು ತ್ಯಾಜ್ಯ ನೀರು ಶೇಖರಣೆಯಾಗಿ ದುರ್ನಾತ ಬೀರುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರ ಆರೋಗ್ಯದ ಜತೆಗೆ ಪರಿಸರ ಸಂರಕ್ಷಣೆ ಹಾಗೂ ಸ್ವತ್ಛ ಕಾಪು ನಿರ್ಮಾಣ ಘೋಷಣೆಗೆ ನಾವು ಬದ್ಧರಾಗಿದ್ದು ಆದಷ್ಟು ಶೀಘ್ರದಲ್ಲಿ ಜನವಸತಿ ಪ್ರದೇಶದಲ್ಲಿರುವ ಎಲ್ಲ ತ್ಯಾಜ್ಯ ವಸ್ತುಗಳನ್ನು ಎಲ್ಲೂರಿನ ಬೃಹತ್ ಘನತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸ್ಥಳಾಂತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ಗುರ್ಮೆ ಸುರೇಶ್ ಶೆಟ್ಟಿ
ಶಾಸಕರು, ಕಾಪು ದುರ್ನಾತ ಬರದಂತೆ ಕೆಮಿಕಲ್ ಸಿಂಪಡಣೆ
ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಶಾಸಕರು ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇಲ್ಲಿನ ನೀರು ಹೊರಗೆ ಹರಿದು ಹೋಗಲು ಬಿಟ್ಟರೆ ಜನರಿಗೆ ತೊಂದರೆಯಾಗಲಿದೆ. ಅದನ್ನು ಗಮನದಲ್ಲಿರಿಸಿಕೊಂಡು ಕೊಳಚೆ ನೀರು, ಕ್ರಿಮಿಕೀಟಗಳನ್ನು ನಾಶ ಪಡಿಸಲು ಮತ್ತು ದುರ್ನಾತವನ್ನು ಕಡಿಮೆ ಮಾಡಲು ಕೆಮಿಕಲ್ ಸಿಂಪಡಿಸಲಾಗಿದೆ. ಮುಂದಿನ ತಿಂಗಳಿನಿಂದ ಎಲ್ಲೂರಿನ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ತ್ಯಾಜ್ಯ ವಸ್ತುಗಳ ರವಾನೆಯಾಗಲಿದ್ದು ಬಳಿಕ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ.
-ರವಿಪ್ರಕಾಶ್ ಪರಿಸರ ಅಭಿಯಂತ, ಕಾಪು ಪುರಸಭೆ