ಕಾಪು: ಕಳೆದ ಕೆಲವು ತಿಂಗಳುಗಳಿಂದ ಕಾಪುವಿನ ಸರ್ವೀಸ್ ರಸ್ತೆಗೆ ಬಾರದೇ ಫ್ಲೈ ಓವರ್ ಮೇಲಿನ ಹೈವೇಯಲ್ಲೇ ಓಡಾಡುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ಗಳು ಶುಕ್ರವಾರದಿಂದ ಮತ್ತೆ ಸರ್ವೀಸ್ ರಸ್ತೆಯಲ್ಲಿ ಸಂಚಾರ ಪ್ರಾರಂಭಿಸಿವೆ.
ಕಾಪುವಿನ ಎಕ್ಸ್‌ಪ್ರೆಸ್ ಬಸ್ ನಿಲ್ದಾಣವು ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಚರಂಡಿ ರಚನೆ ಕಾಮಗಾರಿಯ ವೇಳೆ ಸರ್ವಿಸ್ ರಸ್ತೆ ಬಳಿಯಿಂದ ತಾತ್ಕಾಲಿಕವಾಗಿ ಫ್ಲೈ ಒವರ್‌ನ ಜಂಕ್ಷನ್ ಪ್ರದೇಶಕ್ಕೆ ಸ§ಳಾಂತರ ಗೊಂಡಿತ್ತು. ಇದರಿಂದಾಗಿ ಕಾಪು ಸುತ್ತಮುತ್ತಲಿನ ನೂರಾರು ಮಂದಿ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಸಂಚಾರ ವ್ಯವಸ್ಥೆಗೆ ಪರದಾಡುವಂತಾಗಿತ್ತು.
ಪೇಟೆಗಿಂತ ದೂರದಲ್ಲಿರುವ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಆ. 3ರ ಉದಯವಾಣಿಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಮಾತ್ರವಲ್ಲದೇ ಇಲ್ಲಿ ಬಸ್ ಪ್ರಯಾಣಿಕ್ಕಿಂತ ರಿಕ್ಷಾ ದರ ದುಬಾರಿಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕೂಡ ಉಡುಪಿ ಎಸ್ಪಿ, ಜಿಲ್ಲಾಧಿಕಾರಿ ಮತ್ತು ಕಾಪು ಪುರಸಭೆ ಅಧಿಕಾರಿಗೆ ದೂರವಾಣಿ ಮೂಲಕ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದ್ದರು.
ಇಲ್ಲಿನ ಜನರ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ, ಎಸ್ಪಿ ಸಹಿತ ಅಧಿಕಾರಿಗಳು ನವಯುಗ್ ಕಂಪೆನಿಯ ಅಧಿಕಾರಿಗಳು ಮತ್ತು ಬಸ್ ಮಾಲಕರಿಗೆ ಸೂಚನೆ ನೀಡಿದ್ದು, ಅದರಂತೆ ಶುಕ್ರವಾರದಿಂದಲೇ ಕಾಪುವಿನ ಸರ್ವೀಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ಪುನರ್ ಸಂಚಾರ ಪ್ರಾರಂಭಗೊಂಡಿದೆ.
ಉಡುಪಿಯಿಂದ ಮಂಗಳೂರಿಗೆ ತೆರಳುವ ಬಸ್‌ಗಳು ಕಾಪು ಉದಯ ಬಜಾರ್ ಮುಂಭಾಗದಲ್ಲಿ ಮತ್ತು ಮಂಗಳೂರಿನಿಂದ ಉಡುಪಿಗೆ ತೆರಳುವ ಬಸ್‌ಗಳು ಹೊಸ ಮಾರಿಗುಡಿ ಮುಂಭಾಗದಲ್ಲಿ ನಿಲುಗಡೆಯಾಗುತ್ತಿದೆ. ಆದರೆ ಹೆದ್ದಾರಿ ಯಿಂದ ಸರ್ವೀಸ್ ರಸ್ತೆಗೆ ಮತ್ತು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಜಂಕ್ಷನ್‌ನಲ್ಲಿ ಎಲ್ಲಾ ವಾಹನ ಚಾಲಕರೂ ಗಮನವಿರಿಸಿಕೊಂಡು ವಾಹನ ಚಲಾಯಿಸುವಂತೆ ಪೊಲೀಸರು ವಿನಂತಿಸಿದ್ದಾರೆ.
– ಉದಯವಾಣಿ ಫಲಶ್ರುತಿ