Advertisement

ಕಾಪು ಮೊಗವೀರ ಮಹಾಸಭಾ ಮುಂಬಯಿ: ಲಾಲಾಜಿ ಮೆಂಡನ್‌ ಭೇಟಿ

04:33 PM May 22, 2019 | Team Udayavani |

ಮುಂಬಯಿ: ತಮ್ಮ ಖಾಸಗಿ ಕೆಲಸ ನಿಮಿತ್ತ ಮುಂಬಯಿಗೆ ಆಗಮಿಸಿರುವ ಕಾಪು ಶಾಸಕರಾದ ಲಾಲಾಜಿ ಆರ್‌. ಮೆಂಡನ್‌ ಅವರು ಮೇ 19ರಂದು ಸಂಜೆ ಸಾಕಿನಾಕಾದಲ್ಲಿರುವ ಕಾಪು ಮೊಗವೀರ ಮಹಾಸಭಾ ಮುಂಬಯಿ ಇದರ ಕಚೇರಿಗೆ ಭೇಟಿ ನೀಡಿದರು. ಶಾಸಕರೊಂದಿಗೆ ಕಾಪು ಪಡುಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ರಾಜ್‌ ಕೂಡ ಇದ್ದರು. ಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಕಾರ್ಯದರ್ಶಿ ಬಾಲಕೃಷ್ಣ ಎಸ್‌. ಸಾಲ್ಯಾನ್‌ ಅವರು ಇಬ್ಬರೂ ಅತಿಥಿಗಳನ್ನು ಸಭೆಯ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿದರು. ಅಧ್ಯಕ್ಷರಾದ ಸತೀಶ್‌ ಎನ್‌. ಕರ್ಕೇರ ಅವರು ಲಾಲಾಜಿ ಮೆಂಡನ್‌ ಅವರಿಗೆ ಫಲ ಪುಷ್ಪಗಳನ್ನು ನೀಡಿದರಲ್ಲದೆ ಉಪಾಧ್ಯಕ್ಷರುಗಳಾದ ವಸಂತ್‌ ಆರ್‌. ಕುಂದರ್‌ ಮತ್ತು ನೀಲಾಧರ ಎಂ. ಸಾಲ್ಯಾನ್‌ ಶಾಲು ಹೊದಿಸಿ ಶಾಸಕರನ್ನು ಸಮ್ಮಾನಿಸಿದರು. ಶಿಕ್ಷಕಿ ಗೀತಾ ರಾಜ್‌ ಅವರನ್ನೂ ಪುಷ್ಪ ಗುತ್ಛ ನೀಡಿ ಗೌರವಿಸಲಾಯಿತು.

Advertisement

ಕಾಪು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತನ್ನ ಮೇಲೆ ಪ್ರೀತಿ ವಿಶ್ವಾಸವಿರಿಸಿ ಈತನಕ ಈ ಕ್ಷೇತ್ರದಿಂದ ಸ್ಪರ್ಧಿಸಿರುವವರಿಗಿಂತ ಅತ್ಯಧಿಕ ದಾಖಲೆಯ ಮತಗಳಿಂದ ತನ್ನನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆಯನ್ನು ಹೇಳಿದ ಮೆಂಡನ್‌ ಅವರು ಯಾವುದೇ ಸಂದರ್ಭದಲ್ಲಿ ಜನರ ಸುಖ ಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವೇನಲ್ಲ. ಎಷ್ಟೇ ಉತ್ತಮ ಕೆಲಸ ಮಾಡಿದರೂ ಜನರ ಟೀಕೆ ಟಿಪ್ಪಣಿಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕೆಲವೊಮ್ಮೆ ಮಾನಸಿಕ ಹಿಂಸೆಯಾಗುತ್ತಿದೆ ಎಂದರು.

ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಮೆಂಡನ್‌ ಅವರು ಇದಕ್ಕಾಗಿ ಈಗಾಗಲೇ ಕೇಂದ್ರ ಸರಕಾರವು 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಬಂದರಿನ ಕನಸು ನನಸಾಗುವ ತನಕ ತಾನು ವಿರಮಿಸಲಾರೆ ಎಂದರು.

ಇದೇ ಸಂದರ್ಭದಲ್ಲಿ ಲಾಲಾಜಿ ಮೆಂಡನ್‌ ಅವರೊಂದಿಗಿದ್ದ ಮುಂಬಯಿ ಲೇಖಕ ಸೋಮನಾಥ ಎಸ್‌. ಕರ್ಕೇರ ಮಾತನಾಡುತ್ತ, ಇಂದು ರಾಜಕೀಯ ರಂಗವು ಅತ್ಯಂತ ಹೊಲಸಾಗಿದ್ದರೂ ಇಲ್ಲಿ ಲಾಲಾಜಿ ಮೆಂಡನ್‌ ಅವರಂತಹ ಸಚ್ಚಾರಿತ್ರÂವುಳ್ಳ ಬೆರಳೆಣಿಕೆಯಷ್ಟು ರಾಜಕಾರಣಿಗಳು ಇರುವುದು ಸಮಾಧಾನದ ಸಂಗತಿಯಾಗಿದೆ ಎಂದರಲ್ಲದೆ ಮೆಂಡನ್‌ ಅವರಿಗೆ ಮಂತ್ರಿಯಾಗುವ ಯೋಗ ಲಭಿಸಲಿ ಎಂದು ಹಾರೈಸಿದರು.

ಅನಂತರ ಮಾತನಾಡಿದ ಶಿಕ್ಷಕಿ ಗೀತಾ ರಾಜ್‌, ಕಾಪು ಮೊಗವೀರ ಮಹಾಸಭಾ ಮುಂಬಯಿ ಹಾಗೂ ಕಾಪು ಮೊಗವೀರ ಪರಸ್ಪರ ಸಹಾಯಕ ಸಂಘ ಮುಂಬಯಿ ತನಗೆ ನೀಡುತ್ತಿರುವ ಪ್ರೋತ್ಸಾಹಕ್ಕಾಗಿ ಇವೆರಡೂ ಸಂಸ್ಥೆಗಳಿಗೆ ತಾನು ಋಣಿಯಾಗಿದ್ದೇನೆ ಎಂದರು.

Advertisement

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಸಂತ್‌ ಆರ್‌. ಕುಂದರ್‌, ನೀಲಾಧರ ಎಂ. ಬಂಗೇರ, ಮಾಜಿ ಅಧ್ಯಕ್ಷರಾದ ರಮೇಶ ಎಂ. ಬಂಗೇರ, ಸಮಿತಿ ಸದಸ್ಯರಾದ ಮೋಹನ್‌ ಒ. ಮೆಂಡನ್‌ ಮಾತನಾಡಿ ಇಬ್ಬರೂ ಅತಿಥಿಗಳಿಗೆ ಶುಭ ಹಾರೈಸಿದರು.

ಮಹಾಸಭಾದ ಅಧ್ಯಕ್ಷರಾದ ಸತೀಶ್‌ ಎನ್‌. ಕರ್ಕೇರ ಮಾತನಾಡುತ್ತ, ಹಾಲಿ ಶಾಸಕರಾಗಿರುವ ಲಾಲಾಜಿ ಮೆಂಡನ್‌ ಅವರು ಭವಿಷ್ಯದಲ್ಲಿ ಸಂಸದರಾಗಿ, ಮಂತ್ರಿಯಾಗಿ ಇನ್ನಷ್ಟು ಜನಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಕೊನೆಯಲ್ಲಿ ಕಾರ್ಯದರ್ಶಿ ಬಾಲಕೃಷ್ಣ ಎಸ್‌. ಸಾಲ್ಯಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next