Advertisement

 Kaup: ಮರೆಯಾಗುತ್ತಿದ್ದಾರೆ ಕಿನ್ನರಿ ಜೋಗಿಗಳು !

06:02 PM Oct 23, 2024 | Team Udayavani |

ಕಾಪು: ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಶರನ್ನವರಾತ್ರಿ ಮಹೋತ್ಸವ, ದೀಪಾವಳಿ ಸಂಭ್ರಮ ಹಾಗೂ ಮುಂಗಾರು ಬೆಳೆ ಕಟಾವು ಮುಗಿದು, ದವಸ ಧಾನ್ಯಗಳು ಮನೆಯ ದಾಸ್ತಾನು ಕೋಣೆ ಸೇರುವ ಸಂದರ್ಭಗಳಲ್ಲಿ ತುಳುನಾಡಿನಾದ್ಯಂತ ಕಿನ್ನರಿ ನುಡಿಸುತ್ತಾ ತಮಗೆ ತಲೆತಲಾಂತರಗಳಿಂದ ಬಳುವಳಿಯಾಗಿ ಬಂದಿದ್ದ ಕಲೆಯನ್ನು ಪ್ರದರ್ಶಿಸುತ್ತಾ ಮನೆ ಮನೆಗೆ ಭೇಟಿ ನೀಡುತ್ತಿದ್ದ ಕಿನ್ನರಿ ಜೋಗಿಗಳು ಮರೆಯಾಗುತ್ತಿದ್ದಾರೆ.

Advertisement

ಹೌದು ! ಕಿನ್ನರಿ ಬಾರಿಸುತ್ತಾ ಮನೆಮನೆಗೆ ಬರುವ ಜೋಗಿಗಳು ರಾಮಾಯಣ, ಮಹಾಭಾರತ, ಜೋಗಿ ಕಥೆ ಸಹಿತವಾಗಿ ಭಕ್ತಿ, ಜಾನಪದ, ಗೀಗೀ ಹಾಡು ಮತ್ತು ಲಾವಣಿ ಪದಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅವಿಭಕ್ತ ಕುಟುಂಬದ ಮನೆಮಂದಿ ಬಂದವರಿಗೆ ಮಜ್ಜಿಗೆ, ಬೆಲ್ಲ ನೀರು ಸಹಿತವಾಗಿ ಭಕ್ಷೀಸು ರೂಪದಲ್ಲಿ ಹಣ, ಧವಸ ಧಾನ್ಯ, ಬಟ್ಟೆಬರೆಗಳನ್ನು ಪಡೆದು ಕೃತಾರ್ಥರಾಗುತ್ತಿದ್ದರು. ಆದರೆ ಇತೀ¤ಚಿನ ದಿನಗಳಲ್ಲಿ ಈ ಕಿನ್ನರಿ ಜೋಗಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಬೆರಳೆಣಿಕೆಯಲ್ಲಿ ಬರುವ ಇವರು ಮನೆ ಮನೆ ಭೇಟಿಯನ್ನು ಬಿಟ್ಟು ಪೇಟೆ ಸಂಚಾರಕ್ಕಷ್ಟೇ ಸೀಮಿತವಾಗಿದ್ದಾರೆ.

ಕಿನ್ನರಿ ಜೋಗಿಗಳು ನುಡಿಸುವ ಕಲಾಪ್ರಕಾ ರವು ಪುರಾತನ ಜಾನಪದ ಕಲಾಪ್ರಕಾರಗಳಲ್ಲಿ ಒಂದಾಗಿದೆ. ತಲೆತಲಾಂತರದಿಂದಲೂ ಹಿರಿಯರು, ಪೂರ್ವಿಕರಿಂದ, ತಲೆಮಾರಿ ನಿಂದ ಕಲಿತು ಕೊಂಡು ಬಂದಿದ್ದ ಕಿನ್ನರಿ ನುಡಿಯು ಒಂದು ರೀತಿಯ ಧಾರ್ಮಿಕ ವೃತ್ತಿಯ ಕಲೆಯೂ ಹೌದು. ಶಿವಮೊಗ್ಗ, ಮಲೆ ನಾಡು ಮತ್ತು ಬಯಲು ಸೀಮೆ ಪ್ರದೇಶವು ಕಿನ್ನರಿ ನುಡಿಯ ಮೂಲವಾದರೂ ಕಿನ್ನರಿ ನುಡಿಸುತ್ತಾ ಮನೆ ಮನೆಗೆ ಬರುವ ಇವರಿಗೆ ಕದ್ರಿ ಮಠದಲ್ಲಿ ಆರಾಧನೆ ಪಡೆಯುತ್ತಿರುವ ಭೈರವೇಶ್ವರ ದೇವರು ಮೂಲ ದೇವರು.

ಹೇಗಿರುತ್ತಾರೆ ಇವರು ?
ಭೈರವ ದೇವರನ್ನು ಮನೆದೇವರನ್ನಾಗಿ ಆರಾಧಿಸಿಕೊಂಡು ಬರುತ್ತಿರುವ ಕಿನ್ನರಿ ಜೋಗಿಗಳು ಕಲಾವೃತ್ತಿಗೆ ಹೊರಡುವಾಗ ತಲೆಗೆ ಕೆಂಪು ರುಮಾಲನ್ನು ಪೇಟದ ಶೈಲಿಯಲ್ಲಿ ಕಟ್ಟುತ್ತಾರೆ. ಕೊರಳಿಗೆ ರುದ್ರಾಕ್ಷಿ ಮಾಲೆ, ಕಿವಿಗೆ ನೇತಾಡುವ ಕರ್ಣ ಕುಂಡಲ ವನ್ನು ಧರಿಸುತ್ತಾರೆ. ಹಣೆಗೆ ವಿಭೂತಿ ನಾಮ ಅಥವಾ ಸಿಂದೂರ ತಿಲಕವನ್ನು ಇಟ್ಟುಕೊಳ್ಳುತ್ತಾರೆ. ಬಣ್ಣದ ಅಂಗಿ ಧರಿಸಿ, ಹೆಗಲಲ್ಲಿ ಭಿಕ್ಷೆ ಪಡೆಯಲು ಜೋಳಿಗೆ ಇರುತ್ತದೆ. ಬೀದಿ ನಾಯಿಗಳನ್ನು ಓಡಿಸಲು ಕೈಯ್ಯಲ್ಲಿ ಕೋಲನ್ನು ಇಟ್ಟುಕೊಳ್ಳುತ್ತಾರೆ. ಬಲಿತ ಸೋರೆ ಕಾಯಿಯನ್ನು ಒಣಗಿಸಿ, ಅದಕ್ಕೆ ಆಸರೆಯಾಗಿ ಮರದ ಕೋಲಿಗೆ ತಂತಿ ಅಳವಡಿಸಿ, ಅದರಿಂದ ತಯಾರಿಸಿದ ಸಾಧನದಲ್ಲಿ ಕಿನ್ನರಿ ನುಡಿಸುತ್ತಾರೆ. ಅದ ರಿಂದ ಸ್ವರ ಹೊರಡಿಸುತ್ತಾರೆ. ಕಿನ್ನರಿಯ ತುದಿಗೆ ನವಿಲು ಗರಿಗಳನ್ನು ಪೋಣಿಸಿ ಸುಂದರತೆಯನ್ನು ಮೆರೆಯುತ್ತಾರೆ. ಅದಕ್ಕೆ ಪೂರಕ ವಾಗಿ ಹಾಡು ನುಡಿಸುತ್ತಾ, ಹಾಡಿನ ರಾಗ ಆಲಾಪನೆ ಸಂದರ್ಭ ಹೆಬ್ಬರಳಿಗೆ ಉಂಗುರಾ ಕೃತಿಯಲ್ಲಿ ಹಾಕಿಕೊಂಡ ಗೆಜ್ಜೆಯಿಂದ ಶಬ್ದ ಹೊರ ಹೊಮ್ಮಿಸುತ್ತಾರೆ. ಆದರೆ ಕೆಲವರ ಬಟ್ಟೆ, ದಿರಿಸುಗಳ ಶೈಲಿಯು ಕಾಲಕ್ಕೆ ತಕ್ಕಂತೆ ಬದ ಲಾಗಿದೆ. ಕಿನ್ನರಿ ನುಡಿ, ವಾದನ ಮಾತ್ರ ಅದೇ ರೀತಿಯ ಪರಂಪರಾಗತ ಶೈಲಿಯನ್ನು ಉಳಿಸಿಕೊಂಡು ಬಂದಿದ್ದಾರೆ ಎನ್ನುವುದಷ್ಟೇ ಸಮಧಾನಕರ ಅಂಶ.

ಕಿನ್ನರಿ ಜೋಗಿ ಪರಂಪರೆ ಉಳಿಸಲು ಪ್ರಾಮಾಣಿಕ ಪ್ರಯತ್ನ: ಕೋಟೇಶ್ವರ ಜೋಗಿ
ಹಲವು ತಲೆಮಾರುಗಳಿಂದ ಕಿನ್ನರಿ ನುಡಿಸುತ್ತಾ ಪರಂಪರಾಗತ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಜ್ಜ, ತಂದೆ ಸಹಿತ ಹಲವು ಮಂದಿ ಕಿನ್ನರಿ ನುಡಿಸುವ ಅಲೆಮಾರಿ ಜೋಗಿಗಳು ನಮ್ಮ ಕುಟುಂಬದಲ್ಲಿದ್ದರು. ಕಳೆದ 40 ವರ್ಷಗಳಿಂದ ಈ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಮುಂದಿನ ಪೀಳಿಗೆಯವರು ಕಿನ್ನರಿ ನುಡಿಸುವುದರತ್ತ, ಈ ಕಲೆಯನ್ನು ಮುಂದುವರಿಸುವತ್ತ ಮನಸ್ಸು ಹಾಯಿಸುತ್ತಿಲ್ಲ. ಈ ಕಲೆಯನ್ನು ಉಳಿಸಲು ನಮ್ಮಿಂದಾಗುವ ಪ್ರಯತ್ನ ಸಾಗುತ್ತಿದೆ. ಉಡುಪಿ, ಕುಂದಾಪುರ, ಕುಮಟಾ, ಮಂಗಳೂರು ಪರಿಸರದಲ್ಲಿ ಈ ಕಲೆಗೆ ವಿಶೇಷ ಪ್ರೋತ್ಸಾಹ ಸಿಗುತ್ತಿದೆ ಎನ್ನುತ್ತಾರೆ 72ರ ಹರೆಯದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊರಕೋಡು ಗ್ರಾಮದ ಕೋಟೇಶ್ವರ ಜೋಗಿ ಯಾನೆ ಕಿನ್ನರಿ ಜೋಗಿ.

Advertisement

ಹೆಸರು ಹಲವು; ವೃತ್ತಿ ಒಂದೇ
ಅಲೆಮಾರಿಗಳಂತೆ ಊರೂರು ಸುತ್ತುತ್ತಾ ಬರುವ ಇವರನ್ನು ಕೆಲವು ಕಡೆಗಳಲ್ಲಿ ಅಲೆಮಾರಿ ಜೋಗಿಗಳು, ಜೋಗಿಗಳು, ಜೋಗಪ್ಪ, ಜೋಗಯ್ಯ, ದಾಸಯ್ಯರು ಎಂದೂ ಕರೆಯಲಾಗುತ್ತದೆ. ಕಿನ್ನರಿ ಜೋಗಿಗಳು ಕಿನ್ನರಿ ನುಡಿಸುತ್ತಾ ಮನೆಮನೆಗಳಲ್ಲಿ ಸಂಗ್ರಹಿಸುವ ಭಿಕ್ಷೆಯಲ್ಲಿ ಸ್ವಲ್ಪ ಭಾಗವನ್ನು ತಾವು ಆರಾಧಿಸುವ ಚಂದ್ರಗುತ್ತಿ ಮಠ, ಹಲ್ವಾರಿ ಮಠ ಮತ್ತು ಕದ್ರಿ ಮಠಗಳಿಗೆ ತೆರಳಿ ಅಲ್ಲಿ ಕಾಣಿಕೆ ರೂಪದಲ್ಲಿ ಸಮರ್ಪಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next