Advertisement

Kaup: ಬೆಳಪು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಗ್ರಹಣ; ಇನ್ನೂ ಪೂರ್ಣಗೊಂಡಿಲ್ಲ ಕಾಮಗಾರಿ!

07:17 PM Aug 19, 2024 | Team Udayavani |

ಕಾಪು: ರಾಜ್ಯ ಸರಕಾರದಿಂದ ಮಂಜೂರುಗೊಂಡು ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕವಾಗಿ ಅನುಷ್ಠಾನ ಗೊಳ್ಳುತ್ತಿರುವ ಬೆಳಪುವಿನ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ಮುಕ್ತಾಯ ಹಂತದಲ್ಲಿರುವಾಗ ಗ್ರಹಣ ಬಡಿದಂತಾಗಿದೆ. 9 ವರ್ಷದ ಹಿಂದೆ ಚಾಲನೆ ದೊರಕಿದ್ದ ಯೋಜನೆಯ ಪ್ರಥಮ ಹಂತದ ಕಾಮಗಾರಿಯು ಶೇ. 80ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಗೆ ಸಮರ್ಪಕ ಅನುದಾನದ ಕೊರತೆ, ತರಗತಿ ಪ್ರಾರಂಭಕ್ಕೆ ಬೇಕಾದ ವ್ಯವಸ್ಥೆಗಳ ಜೋಡಣೆಯಲ್ಲಿ ವಿಳಂಬವಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿ ಬಿದ್ದಿದೆ.

Advertisement

141 ಕೋ. ರೂ. ವೆಚ್ಚದ ಬೃಹತ್‌ ಯೋಜನೆ
ಮಂಗಳೂರು ವಿ.ವಿ. ಸಂಯೋಜಿತ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ಥಾಪನೆಗೆ ಸೆನೆಟ್‌ ಸಮಿತಿಯು ಮಂಜೂರಾತಿ ನೀಡಿತ್ತು.  ಬೆಳಪು ಗ್ರಾ.ಪಂ. ಈ ಹಿಂದೆ ಕೊಜೆಂಟ್ರಿಕ್ಸ್‌ ಯೋಜನೆಯ ಪುನರ್‌ ವಸತಿ ಕಾಲನಿಗೆ ನೀಡಿ, ಬಳಿಕ ಕಾನೂನು ಸಮರ ನಡೆಸಿ ಮರಳಿ ತನ್ನ ತೆಕ್ಕೆಗೆ ಪಡೆದು ಕೊಂಡಿದ್ದ 68 ಎಕ್ರೆ ಸರಕಾರಿ ಜಾಗದಲ್ಲಿ 24.26 ಎಕ್ರೆ ಭೂಮಿಯನ್ನು ಕೇಂದ್ರಕ್ಕೆ ಮೀಸಲಿಟ್ಟಿತ್ತು. ಅದನ್ನು ಕೆಎಐಡಿಬಿ ಮೂಲಕವಾಗಿ ಮಂಗಳೂರು ವಿವಿಗೆ ಒಪ್ಪಿಸಿತ್ತು. 141 ಕೋ. ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿತ್ತು.

ಈ ಅಧ್ಯಯನ ಕೇಂದ್ರಕ್ಕೆ 2013ರಲ್ಲಿ ರಾಜ್ಯ ಸರಕಾರ ಮಂಜೂರಾತಿ ನೀಡಿದ್ದು 2015ರ ಮೇ 4ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್‌. ಸಿದ್ಧರಾಮಯ್ಯ ಅವರೇ ಸ್ವತಃ ಬೆಳಪುವಿಗೆ ಬಂದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.   ಕರ್ನಾಟಕ ಗೃಹ ಮಂಡಳಿಯ ಉಸ್ತುವಾರಿಯಲ್ಲಿ ದೇವಿಪ್ರಸಾದ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈ. ಲಿ. ಕಂಪೆನಿಗೆ ಕಾಮಗಾರಿಯ ಗುತ್ತಿಗೆ ವಹಿಸಿ ಕೊಡಲಾಗಿತ್ತು. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೀಗ ವಿವಿಯೇ ಹಣಕಾಸು ಬಿಕ್ಕಟ್ಟಿನಲ್ಲಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಏನೇನು ಕಟ್ಟಡಗಳಿವೆ?
ಬೆಳಪು ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಆಡಳಿತ ಸೌಧ, ಅತಿಥಿಗೃಹ, ಅಧಿಕಾರಿಗಳ ವಸತಿ ಗೃಹ, ಬೋಧಕೇತರ ಸಿಬಂದಿಗಳ ವಸತಿಗೃಹ, ವಿಜ್ಞಾನ ಸಂಕೀರ್ಣ ಕಟ್ಟಡ, ಸಂಶೋಧನಾ ಕೇಂದ್ರ ಕಟ್ಟಡ, ನಿರ್ದೇಶಕರ ಕೊಠಡಿ, ಉಪಾಹಾರ ಗೃಹ, ಅಟೆಂಡರ್ ಬ್ಲಾಕ್‌ ಸಹಿತ 13 ಕಟ್ಟಡಗಳು ನಿರ್ಮಾಣಗೊಳ್ಳಲಿವೆ.

ಪ್ರಥಮ ಹಂತದಲ್ಲಿ ಆಡಳಿತ ಸೌಧ (9.15 ಕೋ.), ಅತಿಥಿ ಗೃಹ (4.78 ಕೋ.), ವಸತಿ ಗೃಹ (5.04 ಕೋ.), ಬೋಧ‌ಕೇತರ ಸಿಬಂದಿಗಳ ವಸತಿಗೃಹ (2.29 ಕೋ.), ಸೈಯನ್ಸ್‌ ಬ್ಲಾಕ್‌ (6.62 ಕೋ.), ಸಂಶೋಧನಾ ಕೇಂದ್ರ ಕಟ್ಟಡ (7.78 ಕೋ.), ನಿರ್ದೇಶಕರ ಬಂಗಲೆ (2.14 ಕೋ.), ಅಟೆಂಡರ್ ವಸತಿ ಗೃಹ (2.25 ಕೋ.), ರಸ್ತೆ, ಚರಂಡಿ, ನೀರಿನ ಟ್ಯಾಂಕ್‌, ಯುಜಿಡಿ ಸಹಿತ ಮೂಲ ಸೌಕರ್ಯಗಳ ಜೋಡಣೆ (4.85 ಕೋ.) ಸೇರಿದಂತೆ 44.92 ಕೋ. ರೂ. ವೆಚ್ಚದಲ್ಲಿ 9 ಕಾಮಗಾರಿಗಳನ್ನು ನಡೆಸಲು ಮಂಜೂರಾತಿ ನೀಡಲಾಗಿದೆ.

Advertisement

ತನಿಖೆಯಾಗಲಿ
ಅಧ್ಯಯನ ಕೇಂದ್ರ ನಿರ್ಮಾಣ ವಿಳಂಬದಿಂದ  ಗ್ರಾಮಸ್ಥರಿಗೆ ಮತ್ತು ಉನ್ನತ ಶಿಕ್ಷಣದ ಕನಸನ್ನು ಕಾಣುತ್ತಿರುವ ಬಡ ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ. ಇದೀಗ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಯಾಗಿರುವುದರಿಂದ ಅವರೇ ಅನುದಾನ ಬಿಡುಗಡೆಗೊಳಿಸಿ, ಉದ್ಘಾಟಿಸುವಂತಾಗಲಿ. ಅನುದಾನ ಒಂದು ಪಾಲನ್ನು ವಿವಿ ಬೇರೆ ಕೆಲಸಕ್ಕೆ ವಿನಯೋಗಿಸಿರುವ ಆರೋಪದ ಬಗ್ಗೆ ತನಿಖೆಯಾಗಲಿ.
-ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾ.ಪಂ.

ವಿ.ವಿ.ಗೆ ಮನವಿ
ಸರಕಾರ ಬಿಡುಗಡೆಗೊಳಿಸಿದ ಪೂರ್ಣ ಹಣವನ್ನು ಬಿಡುಗಡೆಗೊಳಿಸುವಂತೆ ಮಂಗಳೂರು ವಿ.ವಿ.ಗೆ ಮನವಿ ಮಾಡಲಾಗಿದೆ. ಕೊರೊನಾ, ಅವಶ್ಯಕತೆಗೆ ತಕ್ಕಂತೆ ಸಿಗದ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಅನುದಾನ ಅಲಭ್ಯತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು, ಹಂತ ಹಂತವಾಗಿ ಒಂದೊಂದೇ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು.
-ಅಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ

ಉತ್ತರ ಸಿಕ್ಕಿಲ್ಲ
ಕಾಮಗಾರಿ ವಿಳಂಬದ ಬಗ್ಗೆ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ. ಅಧಿವೇಶನದಲ್ಲಿ ಪ್ರಶ್ನೆಯನ್ನೂ ನೀಡಲಾಗಿದೆ. ಆದರೆ ಅಧಿವೇಶನ ಒಂದು ದಿನ ಮುಂಚಿತವಾಗಿ ಮುಗಿದಿದ್ದು ಉತ್ತರ ಸಿಕ್ಕಿಲ್ಲ. ಆದರೆ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು, ಸೂಕ್ತ ಅನುದಾನ ನೀಡುವಂತೆ ಒತ್ತಡ ಹೇರಲಾಗುವುದು.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಈಗ ಏನೇನು ಕೆಲಸ ಬಾಕಿ?
ಪ್ರಥಮ ಹಂತದ ಯೋಜನೆಯ ನಿರ್ಮಾಣ ಹಂತದ ಕಾಮಗಾರಿ ಪೂರ್ಣಗೊಂಡಿವೆ. ಕಟ್ಟಡಗಳಿಗೆ ಒಳಗಿನ ಕಿಟಿಕಿ ಬಾಗಿಲುಗಳ ಜೋಡಣೆ, ಬಾಗಿಲುಗಳ ಜೋಡಣೆ ಕೆಲಸ ಪ್ರಗತಿಯಲ್ಲಿದೆ. ಆರ್‌ಸಿಸಿ ಡ್ರೈನ್‌ ಕೆಲಸ ಶೇ. 70ರಷ್ಟು ಪೂರ್ಣಗೊಂಡಿದೆ. ಎಂಟು ಬ್ಲಾಕ್‌ಗಳಲ್ಲಿನ ವಯರಿಂಗ್‌ ಸಹಿತ ವಿದ್ಯುತ್‌ ಜೋಡಣೆ, ಪ್ಲಂಬಿಂಗ್‌, ಪೈಂಟಿಂಗ್‌, ಎಸ್‌ಟಿಪಿ ಪ್ಲಾಂಟ್‌, ಕಂಪೌಂಡ್‌ ಹಾಲ್‌ ನಿರ್ಮಾಣ ಸಹಿತ ಕೆಲವು ಕೆಲಸಗಳಷ್ಟೇ ಬಾಕಿಯುಳಿದಿವೆ.

ಕಾಮಗಾರಿ ವಿಳಂಬಕ್ಕೆ ಕಾರಣಗಳೇನು?
ರಾಜ್ಯ ಸರಕಾರ 38.30 ಕೋ. ರೂ. ಅನುದಾನ ಮಂಜೂರು ಮಾಡಿದೆ. ಅದರಲ್ಲಿ 30.50 ಕೋ. ರೂ. ಹಣವನ್ನು ಮಂಗಳೂರು ವಿವಿ ಕಾಮಗಾರಿಯ ನಿರ್ವಹಣೆ ವಹಿಸಿಕೊಂಡಿರುವ ಕೆಎಚ್‌ಬಿ ಮೂಲಕ  ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಉಳಿದ ಹಣವನ್ನು  ಮಂಗಳೂರು ವಿವಿ ಇತರ ಯೋಜನೆಗಳಿಗೆ ಬಳಸಿಕೊಂಡಿರುವ  ಆರೋಪಗಳಿವೆ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next