ಕಾಪು: ಕಾಪು ಲೈಟ್ ಹೌಸ್ ಬೀಚ್ ಬಳಿ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಹೈದರಾಬಾದ್ ಮೂಲದ ಇಬ್ಬರು ಪ್ರವಾಸಿಗರನ್ನು ಕಾಪು ಬೀಚ್‌ನ ಲೈಫ್ ಗಾರ್ಡ್‌ಗಳು ರಕ್ಷಿಸಿದ್ದಾರೆ.
ಹೈದರಾಬಾದ್‌ನ ನವೀನ್ (25) ಮತ್ತು ಸಾಯಿತೇಜ (27) ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ವೇಳೆ ಲೈಫ್ ಗಾರ್ಡ್‌ಗಳಿಂದ ಜೀವದಾನ ಪಡೆದ ಪ್ರವಾಸಿಗರು.
ಗುರುವಾರ ಸಂಜೆ ಕಾಪು ಬೀಚ್‌ಗೆ ಬಂದಿದ್ದ ಹೈದರಾಬಾದ್‌ನ ಇಬ್ಬರು ಯುವಕರು ಮತ್ತು ಓರ್ವ ಯುವತಿ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಈ ಸಂದರ್ಭ ಅವರನ್ನು ಲೈಫ್ ಗಾರ್ಡ್‌ಗಳು ಎಚ್ಚರಿಕೆ ನೀಡಿ ಅವರನ್ನು ನೀರಿನಿಂದ ಮೇಲಕ್ಕೆ ಕಳುಹಿಸಿದ್ದರು. ಎರಡು ಮೂರು ಸಾರಿ ಹೇಳಿದ್ದರೂ ನಿರ್ಲಕ್ಷಿಸಿ ಲೈಟ್‌ಹೌಸ್‌ನ ಬಂಡೆಯ ಮೇಲೆ ಹೋಗಿದ್ದ ಯುವಕರು ಕಲ್ಲಿನಲ್ಲಿ ಜಾರುತ್ತಾ ಸಮುದ್ರದೊಳಗೆ ಬಿದ್ದಿದ್ದಾರೆ.
ಹೆಲ್ಪ್ ಹೆಲ್ಪ್ ಕರೆಗೆ ಸ್ಪಂಧಿಸಿದ ಲೈಫ್ ಗಾರ್ಡ್‌ಗಳು : ನವೀನ್ ಮತ್ತು ಶ್ರೀತೇಜ ಸಮುದ್ರಕ್ಕೆ ಬಿದ್ದು ಹೆಲ್ಪ್ ಹೆಲ್ಪ್ ಎಂದು ಬೊಬ್ಬೆ ಹೊಡೆದಿದ್ದರು. ಇದನ್ನು ಗಮನಿಸಿದ ಲೈಫ್ ಗಾರ್ಡ್‌ಗಳಾದ ಲಕ್ಷ್ಮಣ್ ಟಿ. ಚೆಲುವಾದಿ, ಸಂದೇಶ್, ಸುಜಿನ್ ಹಾಗೂ ಬೋಟ್ ರೈಡರ್ ತಂಡದ ಹುಸೇನ್ ಮತ್ತು ಕಾರ್ತಿಕ್ ಸಮುದ್ರಕ್ಕೆ ತೆರಳಿ ನೀರು ಪಾಲಾಗುತ್ತಿದ್ದ ಯುವಕರನ್ನು ರಕ್ಷಿಸಿದ್ದಾರೆ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡ ಯುವಕರು ಬಳಿಕ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿ ನಿರ್ಗಮಿಸಿದ್ದಾರೆ.
ಎಚ್ಚರಿಕೆ ನಿರ್ಲಕ್ಷಿಸಬೇಡಿ : ವಿಶ್ವಪ್ರಸಿದ್ದ ದೀಪಸ್ಥಂಭವನ್ನು ಹೊಂದಿರುವ ಕಾಪು ಕಡಲ ಕಿನಾರೆ ಕರಾವಳಿಯ ಅತ್ಯಂತ ಸುಂದರವಾದ ಮತ್ತು ಶುಚಿಯಾದ ಬೀಚ್ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಇಲ್ಲಿ ಬೀಚ್ ನಿರ್ವಹಣಾ ಸಮಿತಿಯ ಮೂಲಕವಾಗಿ ಕರ್ತವ್ಯ ನಿರತರಾಗಿರುವ ಲೈಫ್ ಗಾರ್ಡ್‌ಗಳು ಎಚ್ಚರಿಕೆ ನೀಡಿದರೂ ಅದನ್ನು ಧಿಕ್ಕರಿಸಿ ನಿರ್ಲಕ್ಷಿಸಿ ಸಮುದ್ರಕ್ಕೆ ಇಳಿದು ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ದೂರದ ಊರುಗಳಿಂದ ಬಂದು ಸಮುದ್ರಕ್ಕೆ ಇಳಿಯುವ ಪ್ರವಾಸಿಗರನ್ನು ಎಚ್ಚರಿಸಲು ಪೊಲೀಸ್ ಮತ್ತು ಗೃಹರಕ್ಷಕದಳದ ಸಿಬಂದಿಗಳ ಅಗತ್ಯತೆದ್ದು ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಇದನ್ನೂ ಓದಿ: ಉಡುಪಿ: ನಗರಸಭೆ ಮಾಜಿ ಅಧ್ಯಕ್ಷೆಯ ಪತಿಗೆ ಮಾರಣಾಂತಿಕ ಹಲ್ಲೆ